ಇಂತಹ ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳ ಖಾತೆಯಿಂದ 19 ಲಕ್ಷ ವಾಪಸ್ ಪಡೆದ ಸರ್ಕಾರ

ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳು ಮೃತಪಟ್ಟ ನಂತರವೂ ಖಾತೆಗೆ ಜಮೆಯಾದ ಹಣವನ್ನು ಸರ್ಕಾರ ವಾಪಸ್ ಪಡೆಯುತ್ತಿದೆ. ಈಗಾಗಲೇ ಮೃತ 246 ಮಹಿಳೆಯರ ಖಾತೆಯಿಂದ ಸುಮಾರು ₹19 ಲಕ್ಷ ವಾಪಸ್ ಪಡೆದಿದ್ದಾರೆ.

ಬೆಂಗಳೂರು (Bengaluru): ರಾಜ್ಯ ಸರ್ಕಾರದ ಗೃಹಲಕ್ಷ್ಮಿ ಯೋಜನೆಯಡಿ (Gruha Lakshmi Scheme) ಕೆಲ ಮಹಿಳೆಯರು ಮೃತಪಟ್ಟ ಬಳಿಕವೂ ಅವರ ಬ್ಯಾಂಕ್ ಖಾತೆಗೆ (Bank Account) ಹಣ ಜಮೆಯಾಗುತ್ತಿದ್ದ ಪ್ರಕರಣಗಳು ಬೆಳಕಿಗೆ ಬಂದಿವೆ. ಈ ಹಿನ್ನೆಲೆ ಸರ್ಕಾರ ಹಾಗೂ ಬ್ಯಾಂಕ್‌ಗಳ ಸಹಕಾರದಿಂದ ಆ ಹಣವನ್ನು ವಾಪಸ್ ಪಡೆಯುವ ಕಾರ್ಯ ನಡೆಯುತ್ತಿದೆ.

ಕೋಲಾರ ಜಿಲ್ಲೆಯಲ್ಲಿ ಈಗಾಗಲೇ ಮೃತಪಟ್ಟ 246 ಮಹಿಳೆಯರ ಖಾತೆಗಳಲ್ಲಿ ಜಮೆಯಾಗಿದ್ದ ಒಟ್ಟು ₹19.06 ಲಕ್ಷವನ್ನು ಸರ್ಕಾರಕ್ಕೆ ಮರು ಜಮೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೋಟ್ಯಂತರ ರೂಪಾಯಿ ಯೋಜನೆ

ಗೃಹಲಕ್ಷ್ಮಿ ಯೋಜನೆಯಡಿ ಜಿಲ್ಲೆಯಲ್ಲಿ 2023ರ ಆಗಸ್ಟ್‌ನಿಂದ 2025ರ ಅಕ್ಟೋಬರ್‌ವರೆಗೆ ಒಟ್ಟು ₹1,522.75 ಕೋಟಿ ಹಣ ಪಾವತಿಸಲಾಗಿದೆ. ಪ್ರತಿ ತಿಂಗಳು ಸುಮಾರು 3,15,826 ಮಹಿಳೆಯರ ಬ್ಯಾಂಕ್ ಖಾತೆಗೆ ತಲಾ ₹2,000 ಜಮೆಯಾಗುತ್ತಿದೆ.

ಈ ಫಲಾನುಭವಿಗಳಲ್ಲಿ ಕೆಲವರು ವಯೋಸಹಜ ಕಾಯಿಲೆ ಅಥವಾ ಇತರೆ ಕಾರಣಗಳಿಂದ ಮೃತಪಟ್ಟಿದ್ದಾರೆ. ಆದರೆ ಅವರ ಮರಣದ ಮಾಹಿತಿ ತಕ್ಷಣ ದಾಖಲಾಗದ ಕಾರಣ ಕೆಲವು ತಿಂಗಳು ಹಣ ಖಾತೆಗೆ ಜಮೆಯಾಗುತ್ತಿತ್ತು.

ದುರ್ಬಳಕೆ ತಡೆಯಲು ಇಲಾಖೆ ಕ್ರಮ

ಮೃತ ಮಹಿಳೆಯರ ಖಾತೆಗಳಿಗೆ ಹಣ ಜಮೆಯಾಗುತ್ತಿದ್ದುದರಿಂದ ಕೆಲವಡೆ ದುರ್ಬಳಕೆ ನಡೆದಿರುವುದಾಗಿ ಇಲಾಖೆ ಗಮನಿಸಿದೆ. ಬಹುತೆಕ ವೃದ್ಧ ಮಹಿಳೆಯರ ಬ್ಯಾಂಕ್ ವ್ಯವಹಾರಗಳನ್ನು ಕುಟುಂಬದ ಸದಸ್ಯರು ನೋಡಿಕೊಳ್ಳುತ್ತಿದ್ದರು.

ಅವರ ಬಳಿ ಎಟಿಎಂ ಕಾರ್ಡ್ ಕೂಡ ಇರುವುದರಿಂದ ಫಲಾನುಭವಿ ಮೃತಪಟ್ಟ ಬಳಿಕವೂ ಕೆಲವರು ಹಣವನ್ನು ತೆಗೆಯುತ್ತಿರುವ ಘಟನೆಗಳು ನಡೆದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Gruha Lakshmi Scheme

ಮತ್ತೊಬ್ಬ ಮಹಿಳೆಗೆ ಅವಕಾಶ

ಖಾತೆಗೆ ಜಮೆಯಾದ ಹಣವನ್ನು ಕೆಲವರು ಬಳಸದೇ ಉಳಿಸಿರುವ ಪ್ರಕರಣಗಳೂ ಕಂಡುಬಂದಿವೆ. ಇಂತಹ ಹಣವನ್ನು ಬ್ಯಾಂಕ್ ಮೂಲಕ ಸರ್ಕಾರಕ್ಕೆ ಮರು ಜಮೆ ಮಾಡಲಾಗುತ್ತಿದೆ.

ಇದಾದ ಬಳಿಕ ಆ ಕುಟುಂಬದ ಮತ್ತೊಬ್ಬ ಅರ್ಹ ಮಹಿಳೆಯನ್ನು ಗೃಹಲಕ್ಷ್ಮಿ ಯೋಜನೆಗೆ ನೋಂದಣಿ ಮಾಡುವ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಹೊಸ ನಿಯಮ: ಇ-ಜನ್ಮ ಮಾಹಿತಿ ಪರಿಶೀಲನೆ

ಫಲಾನುಭವಿಯ ಮರಣದ ಮಾಹಿತಿ ತಕ್ಷಣ ಲಭ್ಯವಾಗಲು ಅಂಗನವಾಡಿ ಕಾರ್ಯಕರ್ತೆಯರಿಗೆ ವಿಶೇಷ ಸೂಚನೆ ನೀಡಲಾಗಿದೆ. ಮೃತರ ವಿವರವನ್ನು ಶಿಶು ಅಭಿವೃದ್ಧಿ ಯೋಜನಾಧಿಕಾರಿಗೆ (CDPO) ನೀಡುವಂತೆ ತಿಳಿಸಲಾಗಿದೆ.

ಇದನ್ನು ಪರಿಶೀಲಿಸಿದ ಬಳಿಕ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಬ್ಯಾಂಕ್‌ಗಳಿಗೆ ಮಾಹಿತಿ ನೀಡುತ್ತದೆ. ಇನ್ನು ಮುಂದೆ ಪ್ರತಿಯೊಂದು ಕಂತು ಬಿಡುಗಡೆಗೂ ಮೊದಲು ಇ-ಜನ್ಮ ಪೋರ್ಟಲ್‌ನ ಮಾಹಿತಿಯನ್ನು ಪರಿಶೀಲಿಸುವುದಾಗಿ ಸರ್ಕಾರ ನಿರ್ಧರಿಸಿದೆ.

ರಾಜ್ಯ ಮಟ್ಟದಲ್ಲೂ ವಾಪಸ್ ಪ್ರಕ್ರಿಯೆ

ರಾಜ್ಯ ಮಟ್ಟದಲ್ಲಿ ಗೃಹಲಕ್ಷ್ಮಿ ಯೋಜನೆಯಡಿ ವಿವಿಧ ಕಾರಣಗಳಿಂದ ಸುಮಾರು 1,44,056 ಫಲಾನುಭವಿಗಳು ಮೃತಪಟ್ಟಿದ್ದಾರೆ ಎಂದು ಅಂಕಿಅಂಶಗಳು ತಿಳಿಸುತ್ತವೆ. ಇವರಲ್ಲಿ 68,776 ಮಹಿಳೆಯರ ಖಾತೆಗೆ ಸುಮಾರು ₹79.75 ಕೋಟಿ ಹಣ ಜಮೆಯಾಗಿರುವುದು ಪತ್ತೆಯಾಗಿದೆ.

ಈ ಹಣವನ್ನು ಬ್ಯಾಂಕ್‌ಗಳ ಮೂಲಕ ಸರ್ಕಾರದ ಖಾತೆಗೆ ವಾಪಸ್ ಪಡೆಯುವ ಕಾರ್ಯವೂ ಹಂತ ಹಂತವಾಗಿ ನಡೆಯುತ್ತಿದೆ.

English Summary▼

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories