ಆಟವಾಡುವಾಗ ಬಾವಿಗೆ ಬಿದ್ದ 2 ವರ್ಷದ ಮಗು! ಪವಾಡ ಸದೃಶ್ಯವಾಗಿ ಪಾರು
ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಆಟವಾಡುತ್ತಿದ್ದ ವೇಳೆ ಎರಡು ವರ್ಷದ ಮಗು ಬಾವಿಗೆ ಬಿದ್ದ ಘಟನೆ ನಡೆದಿದೆ. ಅದೃಷ್ಟವಶಾತ್ ಪೈಪ್‌ಗೆ ಸಿಲುಕಿದ್ದ ಮಗು ಸ್ಥಳೀಯರ ಸಹಾಯದಿಂದ ಸುರಕ್ಷಿತವಾಗಿ ರಕ್ಷಿಸಲಾಗಿದೆ.

- ಶಿರಸಿಯಲ್ಲಿ ಬಾವಿಗೆ ಬಿದ್ದ 2 ವರ್ಷದ ಮಗು
- ಪೈಪ್‌ಗೆ ಸಿಲುಕಿದ್ದ ಮಗು ಅಳುವ ಶಬ್ದದಿಂದ ಪತ್ತೆ
- ಬಾವಿಯಿಂದ ಮಗುವಿನ ರಕ್ಷಣೆ ಯಶಸ್ವಿ
ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಆತಂಕ ಹುಟ್ಟಿಸಿದ ಘಟನೆ ಪವಾಡದಂತೆ ಅಂತ್ಯಗೊಂಡಿದೆ. ಆಟವಾಡುತ್ತಿದ್ದ ವೇಳೆ ಎರಡು ವರ್ಷದ ಮಗು ಬಾವಿಗೆ ಬಿದ್ದರೂ ಅದೃಷ್ಟವಶಾತ್ ಜೀವಂತವಾಗಿ ಪಾರಾದ ಘಟನೆ ಕಸ್ತೂರ ಬಾ ನಗರದಲ್ಲಿ ನಡೆದಿದೆ.
ಭುವಿ ಎಂಬ ಎರಡು ವರ್ಷದ ಮಗು ಮನೆ ಸಮೀಪದಲ್ಲಿ ಆಟವಾಡುತ್ತಿದ್ದ ವೇಳೆ ಏಕಾಏಕಿ ಕಾಣೆಯಾಗಿತ್ತು. ಮಗು ಕಾಣಿಸದಿರುವುದರಿಂದ ಕುಟುಂಬದವರು ಹಾಗೂ ನೆರೆಹೊರೆಯವರು ಆತಂಕಗೊಂಡು ಸುತ್ತಮುತ್ತಲ ಪ್ರದೇಶದಲ್ಲಿ ಹುಡುಕಾಟ ಆರಂಭಿಸಿದರು.
ಬಹಳ ಸಮಯ ಹುಡುಕಿದರೂ ಮಗು ಕಾಣಿಸದಿದ್ದರಿಂದ ಮನೆಯ ಮುಂದೆ ಇರುವ ಬಾವಿಯನ್ನು ಪರಿಶೀಲಿಸಲು ನಿರ್ಧರಿಸಿದರು. ಆಗ ಬಾವಿಯಿಂದ ಮಗು ಅಳುವ ಶಬ್ದ ಕೇಳಿಬಂದಿದ್ದು, ತಕ್ಷಣ ಬ್ಯಾಟರಿ ಬೆಳಕು ಹಾಕಿ ನೋಡಿದಾಗ ಮಗು ಬಾವಿಯೊಳಗೆ ಪೈಪ್‌ಗೆ ಸಿಲುಕಿಕೊಂಡಿರುವುದು ಕಂಡುಬಂದಿತು.
ಈ ದೃಶ್ಯ ಕಂಡು ಎಲ್ಲರೂ ಬೆಚ್ಚಿಬಿದ್ದರೂ ಸ್ಥಳೀಯ ನಿವಾಸಿ ಪಯ್ಯ ಚವಟಿ ಧೈರ್ಯ ತೋರಿದರು. ಅವರು ತಕ್ಷಣ ಬಾವಿಗೆ ಇಳಿದು ಮಗುವನ್ನು ಎಚ್ಚರಿಕೆಯಿಂದ ಹೊರತೆಗೆದರು. ಕೆಲವೇ ನಿಮಿಷಗಳಲ್ಲಿ ಮಗು ಸುರಕ್ಷಿತವಾಗಿ ಹೊರಗೆ ತರಲಾಯಿತು.
ಬಾವಿಗೆ ಬಿದ್ದಿದ್ದರೂ ಪೈಪ್‌ಗೆ ಸಿಲುಕಿಕೊಂಡಿದ್ದರಿಂದ ಮಗು ಸಂಪೂರ್ಣವಾಗಿ ನೀರಿನಲ್ಲಿ ಮುಳುಗದೇ ಉಳಿದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಇದೇ ಕಾರಣದಿಂದ ಮಗು ಪ್ರಾಣಾಪಾಯದಿಂದ ಪಾರಾಗಿದೆ ಎಂದು ಹೇಳಲಾಗುತ್ತಿದೆ.
ಘಟನೆಯ ನಂತರ ಮಗುವನ್ನು ತಕ್ಷಣ ವೈದ್ಯಕೀಯ ಪರೀಕ್ಷೆಗೆ ಕರೆದೊಯ್ಯಲಾಗಿದ್ದು, ಯಾವುದೇ ಗಂಭೀರ ಸಮಸ್ಯೆ ಇಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಈ ಘಟನೆ ಸ್ಥಳೀಯರಲ್ಲಿ ಆತಂಕ ಹುಟ್ಟಿಸಿದರೂ ಕೊನೆಗೆ ಮಗು ಸುರಕ್ಷಿತವಾಗಿ ಬದುಕುಳಿದಿರುವುದು ಎಲ್ಲರಿಗೂ ನೆಮ್ಮದಿ ತಂದಿದೆ.



