ಬೀದಿ ನಾಯಿ ದಾಳಿಗೆ 5 ತಿಂಗಳ ಕಂದಮ್ಮ ಬಲಿ! ಬೀದರ್‌ನಲ್ಲಿ ದಾರುಣ ಘಟನೆ
ಮನೆಯ ಪಡಸಾಲೆಯಲ್ಲಿ ಮಲಗಿದ್ದ ಐದು ತಿಂಗಳ ಹಸುಗೂಸಿನ ಮೇಲೆ ಏಕಾಏಕಿ ದಾಳಿ ಮಾಡಿದ ಬೀದಿ ನಾಯಿ, ಗಂಭೀರವಾಗಿ ಗಾಯಗೊಂಡ ಮಗು ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದೆ.
ಬೀದರ್ ಜಿಲ್ಲೆಯ ಹುಮ್ನಾಬಾದ್ ತಾಲೂಕಿನ ದುಬಲಗುಂಡಿ ಗ್ರಾಮದಲ್ಲಿ ಮನಕಲಕುವ ಘಟನೆ ನಡೆದಿದ್ದು, ಬೀದಿ ನಾಯಿಯ ದಾಳಿಗೆ ಐದು ತಿಂಗಳ ಮಗು ಬಲಿಯಾದ ದುರ್ಘಟನೆ ಕುಟುಂಬವನ್ನು ಕಣ್ಣೀರಿನಲ್ಲಿ ಮುಳುಗಿಸಿದೆ.
ಸುಧಾ ಮತ್ತು ಸಿದ್ದಪ್ಪ ದಂಪತಿಯ ಐದು ತಿಂಗಳ ಮಗಳು ಶಿವಾನಿ ಮನೆಯ ಪಡಸಾಲೆಯಲ್ಲಿ ಮಲಗಿದ್ದ ವೇಳೆ ಈ ಘಟನೆ ನಡೆದಿದೆ. ತಾಯಿ ಮನೆಯ ಕೆಲಸದಲ್ಲಿ ನಿರತರಾಗಿದ್ದಾಗ ಏಕಾಏಕಿ ಮನೆಗೆ ನುಗ್ಗಿದ ಬೀದಿ ನಾಯಿ ಮಗುವಿನ ಮೇಲೆ ದಾಳಿ ನಡೆಸಿದೆ ಎಂದು ತಿಳಿದುಬಂದಿದೆ.
ನಾಯಿ ಮಗುವನ್ನು ಮನಬಂದಂತೆ ಕಚ್ಚಿ ಎಳೆದಾಡಿದ ಪರಿಣಾಮ ಗಂಭೀರ ಗಾಯಗಳಾಗಿದ್ದವು. ತಕ್ಷಣ ಕುಟುಂಬಸ್ಥರು ಮಗುವನ್ನು ಆಸ್ಪತ್ರೆಗೆ ದಾಖಲಿಸಿದ್ದರೂ, ಚಿಕಿತ್ಸೆ ಫಲಕಾರಿಯಾಗದೆ ಬೀದರ್ ಬ್ರಿಮ್ಸ್ ಆಸ್ಪತ್ರೆಯಲ್ಲಿ ಮಗು ಕೊನೆಯುಸಿರೆಳೆದಿದೆ.
ಶಿವಾನಿ ದಂಪತಿಯ ನಾಲ್ಕನೇ ಹೆಣ್ಣುಮಗುವಾಗಿದ್ದು, ಮಗುವಿನ ಸಾವಿನಿಂದ ಕುಟುಂಬದ ಆಕ್ರಂದನ ಮುಗಿಲುಮುಟ್ಟಿದೆ. ಗ್ರಾಮಸ್ಥರೂ ಈ ಘಟನೆಗೆ ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ.
ಗ್ರಾಮದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದರೂ ಪುರಸಭೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಹುಮ್ನಾಬಾದ್ ಪುರಸಭೆಯ ನಿರ್ಲಕ್ಷ್ಯವೇ ಈ ದುರಂತಕ್ಕೆ ಕಾರಣ ಎಂದು ಪೋಷಕರು ಆಕ್ರೋಶ ಹೊರಹಾಕಿದ್ದಾರೆ.



