ನಟ ದಿಲೀಪ್ ರಾಜ್ ಅವರ ಅಂತ್ಯಕ್ರಿಯೆ! ಲಿಂಗಾಯತ ಸಂಪ್ರದಾಯದಂತೆ ಅಂತಿಮ ವಿಧಿವಿಧಾನ

Actor Dileep Raj: ಹೃದಯಾಘಾತದಿಂದ ನಿಧನರಾದ ನಟ ದಿಲೀಪ್ ರಾಜ್ ಅವರ ಅಂತ್ಯಕ್ರಿಯೆ ರಾಮನಗರದ ಫಾರ್ಮ್‌ಹೌಸ್‌ನಲ್ಲಿ ಲಿಂಗಾಯತ ಸಂಪ್ರದಾಯದಂತೆ ನೆರವೇರಿತು. ಕುಟುಂಬಸ್ಥರ ದುಃಖದ ನಡುವೆ ಕಲಾವಿದರು ಹಾಗೂ ಗ್ರಾಮಸ್ಥರು ಕಣ್ಣೀರಿನ ವಿದಾಯ ಹೇಳಿದರು.

Actor Dileep Raj: ಕನ್ನಡ ಚಿತ್ರರಂಗ ಮತ್ತು ಕಿರುತೆರೆ ಲೋಕಕ್ಕೆ ತಮ್ಮದೇ ಆದ ಛಾಪು ಮೂಡಿಸಿದ್ದ ನಟ ಹಾಗೂ ನಿರ್ಮಾಪಕ ದಿಲೀಪ್ ರಾಜ್ ಅವರಿಗೆ ರಾಮನಗರ ತಾಲೂಕಿನ ಗುನ್ನೂರು ಸಮೀಪದ ಫಾರ್ಮ್‌ಹೌಸ್‌ನಲ್ಲಿ ಅಂತಿಮ ವಿದಾಯ ನೀಡಲಾಯಿತು. ಹೃದಯಾಘಾತದಿಂದ ನಿಧನರಾದ ಅವರ ಅಂತ್ಯಕ್ರಿಯೆ ಲಿಂಗಾಯತ ಸಂಪ್ರದಾಯದಂತೆ ನೆರವೇರಿದ್ದು, ಕುಟುಂಬದವರ ದುಃಖದ ವಾತಾವರಣ ಮನಕಲುಕುವಂತಿತ್ತು.

ದಿಲೀಪ್ ರಾಜ್ ಅವರಿಗೆ ಆ ತೋಟದ ಮನೆಯೊಂದಿಗೆ ವಿಶೇಷವಾದ ನಂಟಿತ್ತು. ಸಮಯ ಸಿಕ್ಕಾಗಲೆಲ್ಲಾ ಅವರು ಅಲ್ಲಿಗೆ ಭೇಟಿ ನೀಡುತ್ತಿದ್ದರು. ಹಳೆಯ ಶೈಲಿಯ ತೊಟ್ಟಿ ಮನೆ ನಿರ್ಮಿಸಿಕೊಂಡಿದ್ದ ಅವರು ಗ್ರಾಮಸ್ಥರೊಂದಿಗೆ ಸಹ ಆತ್ಮೀಯ ಸಂಬಂಧ ಬೆಳೆಸಿಕೊಂಡಿದ್ದರು. ಈ ಕಾರಣದಿಂದಲೇ ಅವರ ಅಂತ್ಯಕ್ರಿಯೆಯನ್ನು ಅಲ್ಲಿಯೇ ನಡೆಸಲು ಕುಟುಂಬಸ್ಥರು ನಿರ್ಧರಿಸಿದ್ದರು.

ಅಂತ್ಯಕ್ರಿಯೆಗೂ ಮೊದಲು ರೇವಣಸಿದ್ದೇಶ್ವರ ಮಠದ ರಾಜಶೇಖರ ಸ್ವಾಮೀಜಿ ನೇತೃತ್ವದಲ್ಲಿ ಪೂಜಾ ವಿಧಿವಿಧಾನಗಳು ನಡೆದವು. ದಿಲೀಪ್ ರಾಜ್ ಅವರ ಅಣ್ಣನ ಮಗ ಪೂಜಾ ಕೈಂಕರ್ಯ ನೆರವೇರಿಸಿದ್ದು, ನಂತರ ಅಂತಿಮ ಸಂಸ್ಕಾರ ನೆರವೇರಿಸಲಾಯಿತು.

ಈ ವೇಳೆ ನಟ ಸೃಜನ್ ಲೋಕೇಶ್, ನಟಿ ಅನುಪ್ರಭಾಕರ್, ರಘು ಮುಖರ್ಜಿ, ಕಾಮಿಡಿ ಕಿಲಾಡಿ ಖ್ಯಾತಿಯ ಜಗಪ್ಪ, ಮಂಜು ಪಾವಗಡ, ಹುಲಿ ಕಾರ್ತಿಕ್ ಸೇರಿದಂತೆ ಹಲವು ಕಿರುತೆರೆ ಕಲಾವಿದರು ಆಗಮಿಸಿ ಅಂತಿಮ ನಮನ ಸಲ್ಲಿಸಿದರು. ಅಲ್ಲದೆ ಸುತ್ತಮುತ್ತಲಿನ ಗ್ರಾಮಸ್ಥರೂ ಭಾಗವಹಿಸಿ ಕಣ್ಣೀರಿನ ವಿದಾಯ ಹೇಳಿದರು.

ಪಾರ್ಥಿವ ಶರೀರದ ಮುಂದೆ ಪತ್ನಿ, ಮಕ್ಕಳು ಹಾಗೂ ಕುಟುಂಬಸ್ಥರ ಆಕ್ರಂದನ ಎಲ್ಲರ ಮನಸ್ಸನ್ನು ಮಿಡಿಯುವಂತೆ ಮಾಡಿತು. ದಿಲೀಪ್ ರಾಜ್ ಅವರ ಅಗಲಿಕೆ ಕನ್ನಡ ಕಿರುತೆರೆ ಹಾಗೂ ಸಿನಿಮಾ ಕ್ಷೇತ್ರಕ್ಕೆ ದೊಡ್ಡ ನಷ್ಟವಾಗಿದೆ ಎಂದು ಹಲವರು ಸಂತಾಪ ವ್ಯಕ್ತಪಡಿಸಿದರು.

‘ಹಿಟ್ಲರ್ ಕಲ್ಯಾಣ’ ಧಾರಾವಾಹಿಯ ಮೂಲಕ ದಿಲೀಪ್ ರಾಜ್ ಮತ್ತೆ ಕಿರುತೆರೆಗೆ ಮರಳಿದ್ದರು. ಆ ಪಾತ್ರದಿಂದ ಅವರು ಮನೆಮಾತಾಗಿದ್ದರು. ‘ಮಿಲನ’ ಸಿನಿಮಾದ ವಿಲನ್ ಪಾತ್ರದಿಂದ ಹೆಚ್ಚು ಜನಪ್ರಿಯತೆ ಪಡೆದಿದ್ದ ಅವರು, ‘ಬಾಯ್‌ಫ್ರೆಂಡ್’ ಚಿತ್ರದ ಮೂಲಕ ನಾಯಕನಾಗಿ ಸಿನಿರಂಗ ಪ್ರವೇಶಿಸಿದ್ದರು.

‘ಸುಗ್ರೀವ’, ‘ಗೆಳೆಯ’, ‘ಯೂಟರ್ನ್’ ಸೇರಿದಂತೆ ಸುಮಾರು 28 ಸಿನಿಮಾಗಳಲ್ಲಿ ನಟಿಸಿದ್ದ ದಿಲೀಪ್ ರಾಜ್, ಧಾರಾವಾಹಿ ನಿರ್ಮಾಪಕರಾಗಿಯೂ ಗುರುತಿಸಿಕೊಂಡಿದ್ದರು. ಇತ್ತೀಚೆಗೆ ‘ಕೃಷ್ಣ ರುಕ್ಕು’ ಧಾರಾವಾಹಿ ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದರು. ಕೊನೆಯದಾಗಿ ‘ಲವ್ ಮಾಕ್ಟೇಲ್ 3’ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು.

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories