Bengaluru AQI: ಬೆಂಗಳೂರು ಸೇರಿ ಬೆಳಗಾವಿ, ಮಂಗಳೂರು, ಉಡುಪಿಯಲ್ಲಿ ವಾಯು ಗುಣಮಟ್ಟ ಕುಸಿತ
ಬೆಂಗಳೂರು ಸೇರಿದಂತೆ ಬೆಳಗಾವಿ, ಮಂಗಳೂರು, ಉಡುಪಿ ಸೇರಿದಂತೆ ಹಲವು ನಗರಗಳಲ್ಲಿ ವಾಯು ಗುಣಮಟ್ಟ ಕುಸಿದಿದೆ. AQI ಮಟ್ಟಗಳು ಆರೋಗ್ಯಕ್ಕೆ ಅಪಾಯಕಾರಿ ಹಂತ ತಲುಪುತ್ತಿರುವುದಾಗಿ ತಜ್ಞರು ಎಚ್ಚರಿಕೆ ನೀಡಿದ್ದು, ಜನರು ಮುನ್ನೆಚ್ಚರಿಕೆ ವಹಿಸಲು ಸಲಹೆ ನೀಡಿದ್ದಾರೆ.

ಬೆಂಗಳೂರು (Bengaluru): ಕರ್ನಾಟಕ ರಾಜ್ಯದ ಹಲವು ನಗರಗಳಲ್ಲಿ ವಾಯು ಮಾಲಿನ್ಯ ಮಟ್ಟ ಏರಿಕೆಯಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ವಿಶೇಷವಾಗಿ ಬೆಳಗಾವಿಯಲ್ಲಿ ಏರ್ ಕ್ವಾಲಿಟಿ ಸೂಚ್ಯಂಕ (AQI) ಏರಿಕೆ ಕಂಡುಬಂದಿದ್ದು, ಸ್ಥಳೀಯರು ಆರೋಗ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
ಕೆಲ ದಿನಗಳ ಹಿಂದೆ ತೀವ್ರ ಕಳಪೆ ಮಟ್ಟ ತಲುಪಿದ್ದ ಬೆಂಗಳೂರಿನ AQI ಇಂದು 88ಕ್ಕೆ ದಾಖಲಾಗಿದೆ. ಇದು ‘ಮಧ್ಯಮ’ ಹಂತದಲ್ಲಿದ್ದರೂ, ದೀರ್ಘಕಾಲೀನ ದೃಷ್ಟಿಯಿಂದ ಎಚ್ಚರಿಕೆ ಅಗತ್ಯವಿದೆ. ಶಿವಮೊಗ್ಗದಲ್ಲಿ 126, ಮೈಸೂರಿನಲ್ಲಿ 130 ದಾಖಲಾಗಿದ್ದು, ‘ಕಳಪೆ’ ಮಟ್ಟದಲ್ಲಿದೆ. ಬೆಳಗಾವಿಯ AQI 163ಕ್ಕೆ ಏರಿಕೆಯಾಗಿ ‘ಅನಾರೋಗ್ಯಕರ’ ಹಂತ ತಲುಪಿರುವುದು ಗಮನಾರ್ಹ.
ಮಂಗಳೂರು ಮತ್ತು ಹುಬ್ಬಳ್ಳಿಯಲ್ಲಿ 156, ಉಡುಪಿಯಲ್ಲಿ 164 AQI ದಾಖಲಾಗಿದೆ. ಕಲಬುರ್ಗಿ 111, ಬಳ್ಳಾರಿ 108 ಹಾಗೂ ವಿಜಯಪುರದಲ್ಲಿ 124 AQI ದಾಖಲಾಗಿದೆ. ವಿಶ್ವ ಆರೋಗ್ಯ ಸಂಸ್ಥೆ (WHO) ಮಾನದಂಡಗಳ ಪ್ರಕಾರ 100ಕ್ಕಿಂತ ಹೆಚ್ಚಿನ ಮಟ್ಟದ ಗಾಳಿ ದೀರ್ಘಕಾಲದಲ್ಲಿ ಆರೋಗ್ಯಕ್ಕೆ ಹಾನಿಕಾರಕ.
ಇಂದಿನ ನಗರಗಳ ವಾಯು ಗುಣಮಟ್ಟ
ರಾಜ್ಯದ ಇತರ ನಗರಗಳಲ್ಲಿ ಇಂದಿನ ಏರ್ ಕ್ವಾಲಿಟಿ ಸೂಚ್ಯಂಕ ಹೀಗಿದೆ: ಬೆಂಗಳೂರು – 88, ಮಂಗಳೂರು – 156, ಮೈಸೂರು – 130, ಬೆಳಗಾವಿ – 163, ಕಲಬುರ್ಗಿ – 111, ಶಿವಮೊಗ್ಗ – 126, ಬಳ್ಳಾರಿ – 108, ಹುಬ್ಬಳ್ಳಿ – 156, ಉಡುಪಿ – 164, ವಿಜಯಪುರ – 124. ಈ ಅಂಕಿಗಳು ನಗರಗಳ ವಾಯು ಸ್ಥಿತಿಯ ತೀವ್ರತೆಯನ್ನು ಸೂಚಿಸುತ್ತಿವೆ.
AQI ಅರ್ಥೈಸುವುದು ಹೇಗೆ?
AQI 0–50 ‘ಉತ್ತಮ’, 50–100 ‘ಮಧ್ಯಮ’, 100–150 ‘ಕಳಪೆ’, 150–200 ‘ಅನಾರೋಗ್ಯಕರ’, 200–300 ‘ಗಂಭೀರ’, 300ಕ್ಕಿಂತ ಮೇಲು ‘ಅಪಾಯಕಾರಿ’ ಹಂತವೆಂದು ಪರಿಗಣಿಸಲಾಗುತ್ತದೆ. 150ಕ್ಕಿಂತ ಹೆಚ್ಚಿನ ಮಟ್ಟದಲ್ಲಿ ದೀರ್ಘಕಾಲ ಬಾಹ್ಯ ಚಟುವಟಿಕೆ ತಪ್ಪಿಸುವುದು ಒಳಿತು ಎಂದು ತಜ್ಞರು ಸಲಹೆ ನೀಡಿದ್ದಾರೆ.
ಶ್ವಾಸಕೋಶ ಹಾಗೂ ಅಲರ್ಜಿ ಸಮಸ್ಯೆಗಳಿರುವವರು ವಿಶೇಷ ಎಚ್ಚರಿಕೆ ವಹಿಸಬೇಕು. ಬೆಳಿಗ್ಗೆ-ಸಂಜೆ ಹೊರಗಡೆ ವ್ಯಾಯಾಮ ಕಡಿಮೆ ಮಾಡುವುದು, ಮಾಸ್ಕ್ ಧರಿಸುವುದು ಹಾಗೂ ಮನೆಯೊಳಗೆ ವಾಯು ಶುದ್ಧೀಕರಣ ಕ್ರಮ ಅನುಸರಿಸುವುದು ಉತ್ತಮ ಎಂದು ವೈದ್ಯರು ಸೂಚಿಸಿದ್ದಾರೆ.



