ಹಿಂಬದಿಯಿಂದ ಲಾರಿ ಡಿಕ್ಕಿ, ಬೈಕ್ ಸವಾರ ಸಾವು! ಔಷಧಿ ತರಲು ಹೊರಟಿದ್ದ ಯುವಕ ಬಲಿ
ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಡಣಾಪುರ ಬಳಿ ಲಾರಿ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಔಷಧಿ ತರಲು ಹೊರಟಿದ್ದ ಯುವಕ ದುರ್ಘಟನೆಯಲ್ಲಿ ಪ್ರಾಣ ಕಳೆದುಕೊಂಡಿದ್ದಾನೆ.

ವಿಜಯನಗರ: ಲಾರಿ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ದುರ್ಘಟನೆ ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಡಣಾಪುರ ಗ್ರಾಮದ ಬಳಿ ನಡೆದಿದೆ. ಮೃತ ಯುವಕನನ್ನು ಗುಂಡಾ ತಾಂಡಾದ ನಿವಾಸಿ ಕಿರಣ್ (27) ಎಂದು ಗುರುತಿಸಲಾಗಿದೆ.
ಕುಟುಂಬದವರ ಮಾಹಿತಿಯ ಪ್ರಕಾರ, ಕಿರಣ್ ಗುಂಡಾ ತಾಂಡದಿಂದ ಹೊಸಪೇಟೆ ನಗರಕ್ಕೆ ಔಷಧಿ ತರಲು ಬೈಕ್‌ನಲ್ಲಿ ಹೊರಟಿದ್ದನು. ಆದರೆ ಮಧ್ಯೆ ಸಂಭವಿಸಿದ ಭೀಕರ ಅಪಘಾತದಲ್ಲಿ ಆತ ಪ್ರಾಣ ಕಳೆದುಕೊಂಡಿದ್ದಾನೆ.
ಲಾರಿ ಡಿಕ್ಕಿಯಿಂದ ತೀವ್ರ ಗಾಯ
ಬೆಂಗಳೂರುಕಡೆಯಿಂದ ಅಹಮದಾಬಾದ್ ಕಡೆ ಸಾಗುತ್ತಿದ್ದ ಲಾರಿಯೊಂದು ಹಿಂಬದಿಯಿಂದ ಬಂದು ಬೈಕ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ಪರಿಣಾಮ ಕಿರಣ್‌ಗೆ ತಲೆ, ಬೆನ್ನು ಹಾಗೂ ಮುಖ ಭಾಗಗಳಿಗೆ ಗಂಭೀರ ಗಾಯಗಳಾಗಿದ್ದು, ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ.
ಅಪಘಾತದ ತೀವ್ರತೆಯಿಂದ ಬೈಕ್ ಸಂಪೂರ್ಣ ಹಾನಿಯಾಗಿದ್ದು, ಸ್ಥಳದಲ್ಲಿ ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಪೊಲೀಸರ ಪರಿಶೀಲನೆ
ಘಟನೆ ತಿಳಿದ ಕೂಡಲೇ ಹಗರಿಬೊಮ್ಮನಹಳ್ಳಿ ಸಿಪಿಐ ವಿಕಾಸ್ ಲಮಾಣಿ ಹಾಗೂ ಮರಿಯಮ್ಮನಹಳ್ಳಿ ಪೊಲೀಸ್ ಠಾಣೆಯ ಪಿಎಸ್ಐ ತಾರಾಬಾಯಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಲಾರಿ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಈ ಕುರಿತು ಮರಿಯಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಪಘಾತದ ನಿಖರ ಕಾರಣ ತಿಳಿಯಲು ತನಿಖೆ ಮುಂದುವರಿದಿದೆ.



