ಬಾಲಕನನ್ನು ಎಳೆದೊಯ್ದ ಚಿರತೆ! ಕುಟುಂಬಸ್ಥರ ಕಣ್ಣೆದುರೇ ಬಾಲಕನ ಮೇಲೆ ದಾಳಿ

ಚಾಮರಾಜನಗರ ಜಿಲ್ಲೆಯ ಇಂಡಿಗನತ್ತ ಬಳಿ ನಾಗಮಲೆ ಪಾದಯಾತ್ರೆಗೆ ತೆರಳಿದ್ದ ಕುಟುಂಬದ ಕಣ್ಣೆದುರೇ ಚಿರತೆ ಬಾಲಕನ ಮೇಲೆ ದಾಳಿ ನಡೆಸಿ ಕೊಂದ ಘಟನೆ ದುಃಖ ಮೂಡಿಸಿದೆ. ಅರಣ್ಯ ಇಲಾಖೆಯ ವಿರುದ್ಧ ಪೋಷಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಇಂಡಿಗನತ್ತ ಗ್ರಾಮದ ಸಮೀಪ ನಡೆದ ಚಿರತೆ ದಾಳಿ ಒಂದು ಕುಟುಂಬವನ್ನು ಶೋಕ ಸಾಗರಕ್ಕೆ ತಳ್ಳಿದೆ. ನಾಗಮಲೆ ಪಾದಯಾತ್ರೆಗೆ ತೆರಳಿದ್ದ ವೇಳೆ ಬೆಂಗಳೂರು ಮೂಲದ ಬಾಲಕನೊಬ್ಬ ಚಿರತೆಯ ದಾಳಿಗೆ ಬಲಿಯಾಗಿದ್ದಾನೆ. ಘಟನೆ ನಂತರ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.

ಮೃತ ಬಾಲಕನನ್ನು ಬೆಂಗಳೂರಿನ ಲಗ್ಗೆರೆ ನಿವಾಸಿ ಹರ್ಷಿತ್ ಎಂದು ಗುರುತಿಸಲಾಗಿದೆ. ಕುಟುಂಬದ ಸುಮಾರು ಹತ್ತು ಮಂದಿ ಸದಸ್ಯರೊಂದಿಗೆ ಅವರು ಬೆಳಗಿನ ಜಾವ ನಾಗಮಲೆ ದಾರಿಯಲ್ಲಿ ಪಾದಯಾತ್ರೆ ಮಾಡುತ್ತಿದ್ದರು. ಇದೇ ವೇಳೆ ಕಾಡಿನ ಭಾಗದಿಂದ ಏಕಾಏಕಿ ಬಂದ ಚಿರತೆ ಬಾಲಕನ ಮೇಲೆ ದಾಳಿ ನಡೆಸಿದೆ ಎನ್ನಲಾಗಿದೆ.

ಕುಟುಂಬದವರ ಕಣ್ಣೆದುರೇ ಬಾಲಕನನ್ನು ಚಿರತೆ ಕಾಡಿನೊಳಗೆ ಎಳೆದೊಯ್ದ ದೃಶ್ಯ ಕಂಡು ಪೋಷಕರು ಕಂಗಾಲಾಗಿದ್ದಾರೆ. ತಕ್ಷಣ ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಲಾಗಿದ್ದು, ಬಳಿಕ ನಡೆದ ಶೋಧ ಕಾರ್ಯಾಚರಣೆಯಲ್ಲಿ ಅರಣ್ಯದೊಳಗೆ ಬಾಲಕನ ಮೃತದೇಹ ಪತ್ತೆಯಾಗಿದೆ. ಈ ದೃಶ್ಯ ಕಂಡ ಕುಟುಂಬಸ್ಥರ ಆಕ್ರಂದನ ಮನಕಲಕುವಂತಿತ್ತು.

ಘಟನೆ ಬಳಿಕ ಪೋಷಕರು ಅರಣ್ಯ ಇಲಾಖೆಯ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. “ನಾಗಮಲೆಗೆ ದೇವರ ದರ್ಶನಕ್ಕೆ ಹೋಗುತ್ತಿದ್ದೆವು. ಈ ಭಾಗದಲ್ಲಿ ಕಾಡುಪ್ರಾಣಿಗಳ ಸಂಚಾರ ಇದೆ ಎಂಬ ಮಾಹಿತಿ ಯಾರೂ ನೀಡಲಿಲ್ಲ. ಸುರಕ್ಷತೆಗೆ ಯಾವುದೇ ಸಿಬ್ಬಂದಿಯನ್ನೂ ನಿಯೋಜಿಸಿರಲಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನಾಗಮಲೆ ಮಾರ್ಗದಲ್ಲಿ ಈ ಹಿಂದೆ ಕೂಡ ಚಿರತೆ ದಾಳಿಗಳು ನಡೆದಿರುವ ಮಾಹಿತಿ ಇದೆ. ಮಲೆ ಮಹದೇಶ್ವರನ 77 ಮಲೆಗಳಲ್ಲಿ ಒಂದಾದ ಈ ಪ್ರದೇಶದಲ್ಲಿ ಈಗಾಗಲೇ ಒಬ್ಬ ವ್ಯಕ್ತಿ ಚಿರತೆ ದಾಳಿಗೆ ಬಲಿಯಾಗಿದ್ದರೆ, ಮತ್ತೊಬ್ಬ ಗಾಯಗೊಂಡಿದ್ದಾನೆ. ಇತ್ತೀಚಿನ ಘಟನೆ ಬಳಿಕ ಯಾತ್ರಿಕರ ಸುರಕ್ಷತೆ ಬಗ್ಗೆ ಮತ್ತೆ ಪ್ರಶ್ನೆಗಳು ಕೇಳಿಬರುತ್ತಿವೆ.

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories