ಲಂಚ ಪಡೆದಿದ್ದ ಉಪ ತಹಶೀಲ್ದಾರ್‌ಗೆ 4 ವರ್ಷ ಕಠಿಣ ಜೈಲು ಶಿಕ್ಷೆ, 40 ಸಾವಿರ ದಂಡ
ವಿಕಲಚೇತನರ ಪಿಂಚಣಿ ಮಂಜೂರಿಗೆ ಲಂಚ ಪಡೆದ ಪ್ರಕರಣದಲ್ಲಿ ಉಪ ತಹಶೀಲ್ದಾರ್‌ಗೆ 4 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ಮತ್ತೊಂದೆಡೆ, ಸಿಗರೇಟ್ ವಿಚಾರದ ಗಲಾಟೆಯಲ್ಲಿ ಯುವಕನನ್ನು ಕೊಂದ 8 ಮಂದಿಗೆ ಜೀವಾವಧಿ ಶಿಕ್ಷೆ ನೀಡಲಾಗಿದೆ.

ಶಿವಮೊಗ್ಗ (Shivamogga News) ಜಿಲ್ಲೆಯ ಭದ್ರಾವತಿ ತಾಲೂಕಿನ ಕಲ್ಲಿಹಾಳ ನಾಡಕಚೇರಿಯಲ್ಲಿ ನಡೆದ ಲಂಚ ಪ್ರಕರಣಕ್ಕೆ ಇದೀಗ ನ್ಯಾಯಾಲಯ ಅಂತ್ಯ ಹಾಡಿದೆ. ವಿಕಲಚೇತನರ ಪಿಂಚಣಿ ಮಂಜೂರು ಮಾಡಲು ಹಣಕ್ಕೆ ಬೇಡಿಕೆ ಇಟ್ಟು, ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತರ (Lokayukta) ಬಲೆಗೆ ಬಿದ್ದಿದ್ದ ಅಂದಿನ ಉಪ ತಹಶೀಲ್ದಾರ್ ಪುಷ್ಪಲತಾ ಅವರಿಗೆ ಶಿವಮೊಗ್ಗದ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 4 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿದೆ. ಜೊತೆಗೆ ₹40 ಸಾವಿರ ದಂಡವನ್ನೂ ವಿಧಿಸಲಾಗಿದೆ.
ಡಿ.ಬಿ.ಹಳ್ಳಿ ನಿವಾಸಿ ಗಿರೀಶ್ ಅವರು ತಮ್ಮ ಹುಟ್ಟು ಮೂಕ ತಂದೆಗೆ ವಿಕಲಚೇತನರ ಪಿಂಚಣಿ (Disability Pension) ಕೊಡಿಸಲು ಅರ್ಜಿ ಸಲ್ಲಿಸಿದ್ದರು. ಅರ್ಜಿಯ ಪ್ರಕ್ರಿಯೆ ಪೂರ್ಣಗೊಳಿಸಿ ಪಿಂಚಣಿ ಮಂಜೂರು ಮಾಡಲು ಪುಷ್ಪಲತಾ ಅವರು ₹10 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂಬುದು ಪ್ರಕರಣದ ಆರೋಪವಾಗಿತ್ತು.
2017ರ ಸೆಪ್ಟೆಂಬರ್ 21ರಂದು ಗಿರೀಶ್ ಅವರು ಮುಂಗಡವಾಗಿ ₹5 ಸಾವಿರ ನೀಡುತ್ತಿದ್ದ ಸಂದರ್ಭದಲ್ಲಿ ಲೋಕಾಯುಕ್ತ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು. ಈ ವೇಳೆ ಪುಷ್ಪಲತಾ ಅವರನ್ನು ಲಂಚದ ಹಣದೊಂದಿಗೆ ರೆಡ್‌ಹ್ಯಾಂಡ್ ಆಗಿ ವಶಕ್ಕೆ ಪಡೆಯಲಾಗಿತ್ತು. ಬಳಿಕ ಪ್ರಕರಣದ ಕುರಿತು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಲಾಗಿತ್ತು.
ದೀರ್ಘ ವಿಚಾರಣೆಯ ಬಳಿಕ ಆರೋಪ ಸಾಬೀತಾಗಿದೆ ಎಂದು ತೀರ್ಮಾನಿಸಿದ ನ್ಯಾಯಾಲಯ ಶಿಕ್ಷೆ ಪ್ರಕಟಿಸಿದೆ. ಲೋಕಾಯುಕ್ತ ತನಿಖಾಧಿಕಾರಿ ಹೆಚ್.ಎಸ್. ತಿಪ್ಪೇಸ್ವಾಮಿ ಪ್ರಕರಣದ ತನಿಖೆ ನಡೆಸಿ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಸರ್ಕಾರದ ಪರ ವಿಶೇಷ ಸಾರ್ವಜನಿಕ ಅಭಿಯೋಜಕ ಸುಂದರ್ ರಾಜ್ ವಾದ ಮಂಡಿಸಿದ್ದರು. ಸಾರ್ವಜನಿಕ ಸೇವೆ ನೀಡಬೇಕಾದ ಅಧಿಕಾರಿಯೇ ಲಂಚಕ್ಕೆ ಕೈಚಾಚಿದ ಪ್ರಕರಣದಲ್ಲಿ ಬಂದಿರುವ ಈ ತೀರ್ಪು ಗಮನ ಸೆಳೆದಿದೆ.
ಸಿಗರೇಟ್ ವಿಚಾರದ ಗಲಾಟೆ ಕೊಲೆಯಲ್ಲಿ 8 ಮಂದಿಗೆ ಜೀವಾವಧಿ
ಇನ್ನೊಂದೆಡೆ, ಬೆಂಗಳೂರಿನಲ್ಲಿ ಸಿಗರೇಟ್ ಸೇದುವ ವಿಚಾರಕ್ಕೆ ನಡೆದ ಗಲಾಟೆ ಕೊಲೆಯಲ್ಲಿ ಅಂತಿಮವಾಗಿ 8 ಮಂದಿ ಆರೋಪಿಗಳಿಗೆ ಜೀವಾವಧಿ ಶಿಕ್ಷೆ (Life Imprisonment) ವಿಧಿಸಲಾಗಿದೆ. ಬೆಂಗಳೂರಿನ 59ನೇ ಸಿಸಿಹೆಚ್ ನ್ಯಾಯಾಲಯ ವೆಂಕಟೇಶ್, ವಿಜಯ್, ವಿನೋದ್, ಝೆರಾಲ್ಡ್, ಆರೋಗ್ಯರಾಜ್, ಜೇಮ್ಸ್ ಕುಮಾರ್, ಕಿರಣ್ ಹಾಗೂ ವಿಕ್ರಮ್ ಅವರಿಗೆ ಜೀವಾವಧಿ ಶಿಕ್ಷೆಯೊಂದಿಗೆ ಒಟ್ಟು ₹3.90 ಲಕ್ಷ ದಂಡ ವಿಧಿಸಿದೆ.
2017ರಲ್ಲಿ ಅಶೋಕನಗರ ಪೊಲೀಸ್ ಠಾಣಾ (Ashok Nagar Police) ವ್ಯಾಪ್ತಿಯ ಶಾಂತಿನಗರದಲ್ಲಿ ಹರೀಶ್ ಎಂಬ ಯುವಕನ ಕೊಲೆ ನಡೆದಿತ್ತು. ಸಿಗರೇಟ್ ಸೇದುವ ವಿಚಾರವಾಗಿ ಹರೀಶ್ ಮತ್ತು ಆರೋಪಿಗಳ ನಡುವೆ ಗಲಾಟೆ ಆರಂಭವಾಗಿತ್ತು. ಪರಿಸ್ಥಿತಿ ವಿಕೋಪಕ್ಕೆ ತಿರುಗಿದ ಬಳಿಕ ಆರೋಪಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಹರೀಶ್‌ನನ್ನು ಕೊಲೆ ಮಾಡಿದ್ದರು.
ಘಟನೆ ಕುರಿತು ಅಶೋಕನಗರ ಪೊಲೀಸರು ತನಿಖೆ ಕೈಗೊಂಡು ಮೂವರು ಅಪ್ರಾಪ್ತರು ಸೇರಿದಂತೆ ಒಟ್ಟು 11 ಮಂದಿಯನ್ನು ಬಂಧಿಸಿದ್ದರು. ನಂತರ ಪ್ರಕರಣದ ತನಿಖೆ ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ವೇಳೆ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ 8 ಮಂದಿಗೆ ಜೀವಾವಧಿ ಶಿಕ್ಷೆ ಪ್ರಕಟವಾಗಿದೆ. ಸಣ್ಣ ವಿಚಾರವೊಂದು ಮಾರಣಾಂತಿಕ ಗಲಾಟೆಯಾಗಿ ಬದಲಾಗಿದ್ದ ಪ್ರಕರಣಕ್ಕೆ ಹಲವು ವರ್ಷಗಳ ಬಳಿಕ ನ್ಯಾಯಾಲಯದ ತೀರ್ಪು ಹೊರಬಿದ್ದಿದೆ.



