ಕೆರೆಯಲ್ಲಿ ಮುಳುಗಿ ಅಣ್ಣ-ತಮ್ಮ ಸಾವು, ಕೋಲಾರ ಜಿಲ್ಲೆಯಲ್ಲಿ ಸಹೋದರರು ದುರ್ಮರಣ

ತೀವ್ರ ಬಿಸಿಲಿನಿಂದಾಗಿ ಕೆರೆಯಲ್ಲಿ ಈಜಲು ಇಳಿದಿದ್ದ ಅಣ್ಣ-ತಮ್ಮ ನೀರಿನ ಆಳ ಅಂದಾಜಿಸಲು ವಿಫಲವಾಗಿ ಮುಳುಗಿ ಸಾವನ್ನಪ್ಪಿದ ದುರ್ಘಟನೆ ಕೋಲಾರ ಜಿಲ್ಲೆಯಲ್ಲಿ ನಡೆದಿದೆ.

ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಪಚ್ಚರಮಾಕಲಹಳ್ಳಿ ಸಮೀಪ ಮನಕಲಕುವ ಘಟನೆ ನಡೆದಿದ್ದು, ಕೆರೆಯಲ್ಲಿ ಈಜಲು ಇಳಿದಿದ್ದ ಅಣ್ಣ-ತಮ್ಮ ಇಬ್ಬರೂ ನೀರುಪಾಲಾಗಿದ್ದಾರೆ. ಈ ಘಟನೆ ಗ್ರಾಮದಲ್ಲಿ ದುಃಖದ ವಾತಾವರಣ ಸೃಷ್ಟಿಸಿದೆ.

ಮೃತರನ್ನು ರೋಣೂರು ಹೋಬಳಿ ವ್ಯಾಪ್ತಿಯ ಚಾಂಪಲ್ಲಿ ಗ್ರಾಮದ ನಿವಾಸಿಗಳಾದ ನರೇಂದ್ರ (25) ಹಾಗೂ ಚಂದನ್ (23) ಎಂದು ಗುರುತಿಸಲಾಗಿದೆ. ಇಬ್ಬರೂ ಗಾರೆ ಕೆಲಸಕ್ಕಾಗಿ ಪಚ್ಚರಮಾಕಲಹಳ್ಳಿಗೆ ತೆರಳಿದ್ದರು ಎಂದು ತಿಳಿದುಬಂದಿದೆ.

ಮಧ್ಯಾಹ್ನದ ಬಿಸಿಲಿನ ತಾಪ ಹೆಚ್ಚಿದ್ದ ಹಿನ್ನೆಲೆಯಲ್ಲಿ ಸಮೀಪದ ಕೆರೆಯಲ್ಲಿ ಸ್ನಾನ ಮಾಡಲು ಹಾಗೂ ಈಜಲು ಇಬ್ಬರೂ ಇಳಿದಿದ್ದರು. ಆದರೆ ಕೆರೆಯ ನೀರಿನ ಆಳವನ್ನು ಸರಿಯಾಗಿ ಅಂದಾಜಿಸಲು ಸಾಧ್ಯವಾಗದೆ ಇಬ್ಬರೂ ಮುಳುಗಿದ್ದಾರೆ ಎನ್ನಲಾಗಿದೆ.

ಸ್ಥಳೀಯರು ವಿಷಯ ತಿಳಿದು ತಕ್ಷಣ ರಕ್ಷಣೆಗೆ ಧಾವಿಸಿದರೂ ಯುವಕರನ್ನು ಬದುಕಿಸಲು ಸಾಧ್ಯವಾಗಲಿಲ್ಲ. ಅಣ್ಣ-ತಮ್ಮ ಇಬ್ಬರೂ ಸಾವನ್ನಪ್ಪಿದ ಸುದ್ದಿ ಕೇಳಿ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.

ಘಟನೆ ರಾಯಲ್ಪಾಡು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಯಾವುದೇ ಅನುಮಾನಾಸ್ಪದ ಅಂಶಗಳಿಲ್ಲದ ಕಾರಣ ಮರಣೋತ್ತರ ಪರೀಕ್ಷೆ ನಡೆಸಲಾಗಿಲ್ಲ. ಹಿರಿಯರ ಸಮ್ಮುಖದಲ್ಲಿ ಕುಟುಂಬಸ್ಥರು ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ.

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories