ಮಂಡ್ಯದಲ್ಲಿ ವ್ಯಕ್ತಿಯನ್ನು ವಿವಸ್ತ್ರಗೊಳಿಸಿ ಹಲ್ಲೆ, 14 ಮಂದಿ ಮೇಲೆ ಎಫ್‌ಐಆರ್

ಪಾಂಡವಪುರ ತಾಲೂಕಿನ ಡಿಂಕಾ ಗ್ರಾಮದಲ್ಲಿ ಯುವಕನನ್ನು ವಿವಸ್ತ್ರಗೊಳಿಸಿ ಕಲ್ಲು-ದೊಣ್ಣೆಯಿಂದ ಹಲ್ಲೆ ನಡೆಸಿದ ಅಮಾನುಷ ಘಟನೆ ಬೆಳಕಿಗೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿ 14 ಜನರ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ವಿಡಿಯೋ ಕೂಡ ಪತ್ತೆಯಾಗಿದೆ.

  • ಮಂಡ್ಯ ಹಲ್ಲೆ ಪ್ರಕರಣ: ವಿವಸ್ತ್ರಗೊಳಿಸಿ ಹಲ್ಲೆ
  • 14 ಆರೋಪಿಗಳ ವಿರುದ್ಧ ಎಫ್‌ಐಆರ್
  • ಪಾಂಡವಪುರ ಠಾಣೆಯಲ್ಲಿ ಪ್ರಕರಣ ದಾಖಲೆ

ಮಂಡ್ಯ ಜಿಲ್ಲೆಯ (Mandya District) ಪಾಂಡವಪುರ ತಾಲೂಕಿನ ಡಿಂಕಾ ಗ್ರಾಮದಲ್ಲಿ ನಡೆದ ಘಟನೆ ಮಾನವೀಯತೆಯನ್ನೇ ಪ್ರಶ್ನಿಸುವಂತಿದೆ. ಹುಡುಗಿ ವಿಚಾರವಾಗಿ ವೈಮನಸ್ಸು ಹುಟ್ಟಿಕೊಂಡ ಹಿನ್ನೆಲೆ, ಐವರ ಗುಂಪು ಯುವಕನನ್ನು ಅಡ್ಡಗಟ್ಟಿ ಹಲ್ಲೆ ನಡೆಸಿದ ಆರೋಪ ಕೇಳಿಬಂದಿದೆ. ಕೈಮುಗಿದು ಕ್ಷಮೆ ಕೇಳಿದರೂ ಕಿರಾತಕರು ಬಿಡದೆ ಕಲ್ಲು ಮತ್ತು ದೊಣ್ಣೆಯಿಂದ ಹೊಡೆದಿದ್ದಾರೆ.

ಹಲ್ಲೆ ವೇಳೆ ಯುವಕನ ಕಾಲು ಗಂಭೀರವಾಗಿ ಗಾಯಗೊಂಡಿದ್ದು, ಘಟನೆ ದೃಶ್ಯಗಳನ್ನು ಆರೋಪಿಗಳು ಸ್ವತಃ ಮೊಬೈಲ್‌ನಲ್ಲಿ ಚಿತ್ರೀಕರಿಸಿರುವುದು ಆಘಾತಕಾರಿ ಸಂಗತಿಯಾಗಿದೆ.

ಎಫ್‌ಐಆರ್ ಪ್ರಕಾರ, ಫೆಬ್ರವರಿ 22ರಂದು ಮಧ್ಯಾಹ್ನದ ವೇಳೆ ಬೈಕಿನಲ್ಲಿ ತೆರಳುತ್ತಿದ್ದ ಯುವಕರನ್ನು ಕಾರು ಹಾಗೂ ಬೈಕಿನಲ್ಲಿ ಬಂದ ಗುಂಪೊಂದು ಅಡ್ಡಗಟ್ಟಿದೆ. ಬಳಿಕ ಗದ್ದೆ ಪ್ರದೇಶದವರೆಗೂ ಬೆನ್ನಟ್ಟಿ ಹಲ್ಲೆ ನಡೆಸಲಾಗಿದೆ. ಕೆಲವರು ಕಲ್ಲಿನಿಂದ, ಇನ್ನೂ ಕೆಲವರು ದೊಣ್ಣೆಯಿಂದ ಹೊಡೆದು ಪ್ರಾಣಾಪಾಯ ಉಂಟುಮಾಡಲು ಯತ್ನಿಸಿದರೆಂಬ ಆರೋಪ ದಾಖಲಾಗಿದೆ.

ಸಾರ್ವಜನಿಕರು ಮಧ್ಯಪ್ರವೇಶಿಸದೇ ಇದ್ದರೆ ಪರಿಣಾಮ ಮತ್ತಷ್ಟು ಗಂಭೀರವಾಗುತ್ತಿತ್ತೆಂಬ ಆತಂಕ ವ್ಯಕ್ತವಾಗಿದೆ.

ಗಾಯಾಳು ಯುವಕರನ್ನು ತಕ್ಷಣ ಆಂಬ್ಯುಲೆನ್ಸ್ ಮೂಲಕ ಪಾಂಡವಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಬಳಿಕ ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ಈ ಸಂಬಂಧ ಪಾಂಡವಪುರ ಠಾಣೆಯಲ್ಲಿ 14 ಮಂದಿಯ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. ಆರೋಪಿಗಳ ಬಂಧನಕ್ಕಾಗಿ ವಿಶೇಷ ತಂಡ ರಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಘಟನೆಯ ಬಳಿಕ ಗ್ರಾಮದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹರಿದಾಡುತ್ತಿದ್ದು, ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. “ಇಂತಹ ಅಮಾನುಷ ಕೃತ್ಯಗಳಿಗೆ ಕಟ್ಟುನಿಟ್ಟಿನ ಶಿಕ್ಷೆ ಅಗತ್ಯ” ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories