ಚಿಕ್ಕಮಗಳೂರು ಮೆರವಣಿಗೆ ದುರಂತ! ಜನರ ಮೇಲೆ ಹರಿದ ಕಾರು, ಬಾಲಕಿ ಸಾವು.. 9 ಮಂದಿಗೆ ಗಂಭೀರ ಗಾಯ

ಚಿಕ್ಕಮಗಳೂರು ಜಿಲ್ಲೆಯ ಬಿಳೆಕಲ್ಲು ಗ್ರಾಮದಲ್ಲಿ ಅಂಬೇಡ್ಕರ್ ಜಯಂತಿ ಮೆರವಣಿಗೆಯ ವೇಳೆ ನಿಯಂತ್ರಣ ತಪ್ಪಿದ ಕಾರು ಜನರ ಗುಂಪಿಗೆ ನುಗ್ಗಿ ಭೀಕರ ದುರಂತ ಸಂಭವಿಸಿದೆ. 7 ವರ್ಷದ ಬಾಲಕಿ ಮೃತಪಟ್ಟಿದ್ದು, 9 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

Car Rams Ambedkar Procession: ಚಿಕ್ಕಮಗಳೂರು ಜಿಲ್ಲೆಯ ಬಿಳೆಕಲ್ಲು ಗ್ರಾಮದಲ್ಲಿ ಅಂಬೇಡ್ಕರ್ ಜಯಂತಿ ಮೆರವಣಿಗೆ ನಡೆಯುತ್ತಿದ್ದ ವೇಳೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಸಂಭ್ರಮದಿಂದ ಸಾಗುತ್ತಿದ್ದ ಮೆರವಣಿಗೆಯ ಮಧ್ಯೆ ಏಕಾಏಕಿ ನಿಯಂತ್ರಣ ತಪ್ಪಿದ ಕಾರು ಜನರ ಗುಂಪಿನತ್ತ ನುಗ್ಗಿ ದುರಂತಕ್ಕೆ ಕಾರಣವಾಯಿತು.

ಈ ಅಪಘಾತದಲ್ಲಿ 7 ವರ್ಷದ ಸಾನ್ವಿ ಎಂಬ ಬಾಲಕಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಮೆರವಣಿಗೆಯನ್ನು ವೀಕ್ಷಿಸುತ್ತಿದ್ದ ಜನರು ಮತ್ತು ಮಕ್ಕಳು ಕಾರು ಗುದ್ದಿದ ಪರಿಣಾಮ ನೆಲಕ್ಕುರುಳಿದ್ದು, ಕೆಲವರು ಗಂಭೀರವಾಗಿ ಗಾಯಗೊಂಡಿದ್ದಾರೆ.

9 ಮಂದಿಗೆ ಗಂಭೀರ ಗಾಯ

ಅಪಘಾತದಲ್ಲಿ ನಿಶ್ಚಿತ (11), ತೃಪ್ತಿ (11), ತಿಮ್ಮರಾಜು (45), ಉಷಾ (22), ಸೃಷ್ಟಿ (18), ನಾಗರಾಜು (28), ಚೇತನ್ (16) ಸೇರಿದಂತೆ ಒಟ್ಟು 9 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಗಾಯಾಳುಗಳನ್ನು ತಕ್ಷಣ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ನಂತರ ಅವರಲ್ಲಿ ಎಂಟು ಮಂದಿಯನ್ನು ಹೆಚ್ಚಿನ ಚಿಕಿತ್ಸೆಗೆ ಹಾಸನ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಕಾರಿನಲ್ಲಿ ಇದ್ದ ಸುಧಾಕರ್ ಎಂಬವರಿಗೂ ಗಾಯಗಳಾಗಿದ್ದು, ಅವರ ಆರೋಗ್ಯ ಸ್ಥಿತಿಯೂ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಗ್ರಾಮಸ್ಥರ ಆಕ್ರೋಶ

ಘಟನೆಯ ನಂತರ ಗ್ರಾಮದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಯಿತು. ಬಾಲಕಿ ಸಾವಿನ ಸುದ್ದಿ ಹರಡುತ್ತಿದ್ದಂತೆ ನೂರಾರು ಗ್ರಾಮಸ್ಥರು ಮಲ್ಲೇಗೌಡ ಸರ್ಕಾರಿ ಆಸ್ಪತ್ರೆ ಮುಂದೆ ಸೇರಿ ಆಕ್ರೋಶ ವ್ಯಕ್ತಪಡಿಸಿದರು.

ಗಾಯಗೊಂಡ ಕಾರು ಚಾಲಕನನ್ನು ಆಂಬ್ಯುಲೆನ್ಸ್‌ನಲ್ಲಿ ಹಾಸನಕ್ಕೆ ಕರೆದೊಯ್ಯುವಾಗ ಕೆಲವರು ವಾಹನವನ್ನು ತಡೆದು ಪ್ರತಿಭಟನೆ ನಡೆಸಿದ ಕಾರಣ ಆಸ್ಪತ್ರೆ ಆವರಣದಲ್ಲಿ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು.

ಪೊಲೀಸರ ತನಿಖೆ ಆರಂಭ

ಘಟನೆಯ ಬಗ್ಗೆ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಾರು ಹೇಗೆ ನಿಯಂತ್ರಣ ತಪ್ಪಿತು ಮತ್ತು ಅಪಘಾತಕ್ಕೆ ನಿಖರ ಕಾರಣವೇನು ಎಂಬುದನ್ನು ತಿಳಿಯಲು ತನಿಖೆ ಮುಂದುವರಿಸಲಾಗಿದೆ.

ಮೆರವಣಿಗೆಯ ಸಂಭ್ರಮದ ನಡುವೆ ಸಂಭವಿಸಿದ ಈ ದುರ್ಘಟನೆ ಗ್ರಾಮಸ್ಥರ ಮನಸ್ಸಿಗೆ ದೊಡ್ಡ ಆಘಾತವನ್ನುಂಟುಮಾಡಿದೆ.

Related Stories