ಚಿತ್ರದುರ್ಗ ಅಪಘಾತ: 9 ಮಂದಿ ಸಾವು, ಪ್ರಧಾನಿ ಮೋದಿ ಪರಿಹಾರ ಘೋಷಣೆ
ಚಿತ್ರದುರ್ಗದ ಹಿರಿಯೂರು ಬಳಿ ನಸುಕಿನಲ್ಲಿ ಲಾರಿ ಡಿಕ್ಕಿಯಿಂದ ಖಾಸಗಿ ಬಸ್ ಹೊತ್ತಿ ಉರಿದು 9 ಮಂದಿ ಸಾವು, 24 ಮಂದಿ ಗಾಯ. ಪ್ರಧಾನಿ ಮೋದಿ ಪರಿಹಾರ ಘೋಷಿಸಿ, PMNRF ನೆರವು ಪ್ರಕಟಿಸಿದರು ಎಂದು ದೆಹಲಿ ಪ್ರಕಟಣೆ ತಿಳಿಸಿದೆ
- ಚಿತ್ರದುರ್ಗ ಅಪಘಾತದಲ್ಲಿ 9 ಮಂದಿ ಸಾವು
- ಪ್ರಧಾನಿ ಮೋದಿ ಪರಿಹಾರ ಘೋಷಣೆ
- PMNRF ನಿಂದ ಮೃತರಿಗೆ, ಗಾಯಾಳುಗಳಿಗೆ ನೆರವು
ನವದೆಹಲಿ / ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಭೀಕರ ರಸ್ತೆ ಅಪಘಾತ (Chitradurga Accident) ದೇಶವನ್ನೇ ಬೆಚ್ಚಿಬೀಳಿಸಿದೆ. ಗುರುವಾರ ನಸುಕಿನ ಹೊತ್ತಿನಲ್ಲಿ ಲಾರಿಯೊಂದು ಖಾಸಗಿ ಬಸ್‌ಗೆ ಡಿಕ್ಕಿ ಹೊಡೆದ ಪರಿಣಾಮ, ಬಸ್ ಬೆಂಕಿಗಾಹುತಿಯಾಗಿ ಕನಿಷ್ಠ 9 ಮಂದಿ ಸಜೀವ ದಹನಗೊಂಡಿದ್ದಾರೆ. ಈ ಘಟನೆಯಲ್ಲಿ ಅನೇಕ ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ದುರಂತದ ಕುರಿತು ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದು, ಮೃತರ ಕುಟುಂಬಗಳಿಗೆ ಹಾಗೂ ಗಾಯಾಳುಗಳಿಗೆ ಪರಿಹಾರ ಘೋಷಿಸಿದ್ದಾರೆ.
ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ ಅವರು, “ಚಿತ್ರದುರ್ಗ ಅಪಘಾತದಲ್ಲಿ ಪ್ರಾಣ ಕಳೆದುಕೊಂಡವರ ಕುಟುಂಬಗಳಿಗೆ ನನ್ನ ಆಳವಾದ ಸಂತಾಪ. ಗಾಯಾಳುಗಳು ಶೀಘ್ರ ಚೇತರಿಸಿಕೊಳ್ಳಲಿ” ಎಂದು ತಿಳಿಸಿದ್ದಾರೆ.
ಪರಿಹಾರ ವಿವರ:
ಪ್ರಧಾನಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿ (PMNRF) ಯಿಂದ ಮೃತರ ಕುಟುಂಬಗಳಿಗೆ ತಲಾ 2 ಲಕ್ಷ ರೂ. ಮತ್ತು ಗಾಯಾಳುಗಳಿಗೆ ತಲಾ 50 ಸಾವಿರ ರೂ. ನೆರವು ನೀಡಲಾಗುವುದು ಎಂದು ಪ್ರಧಾನಿ ಪ್ರಕಟಿಸಿದ್ದಾರೆ.
ಪೊಲೀಸ್ ಮಾಹಿತಿ:
ಪೂರ್ವ ವಲಯದ ಐಜಿ ರವಿಕಾಂತೇ ಗೌಡ ಅವರು ಮಾತನಾಡಿ, “ಪ್ರಾಥಮಿಕ ತನಿಖೆಯಲ್ಲಿ ಲಾರಿ ಚಾಲಕ ಸೇರಿ ಬಸ್‌ನಲ್ಲಿದ್ದ 9 ಮಂದಿ ಮೃತಪಟ್ಟಿದ್ದಾರೆ. ಗಂಭೀರ ಗಾಯಾಳುಗಳನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ” ಎಂದು ಮಾಹಿತಿ ನೀಡಿದ್ದಾರೆ.
ಅಪಘಾತದ ವೇಳೆ ಬಸ್ ಪಕ್ಕದಲ್ಲೇ ಶಾಲಾ ಮಕ್ಕಳ ಪ್ರವಾಸದ ಬಸ್ ಇದ್ದರೂ, ಅದೃಷ್ಟವಶಾತ್ ಯಾವುದೇ ಹಾನಿ ಸಂಭವಿಸಿಲ್ಲ ಎಂದು ತಿಳಿಸಿದ್ದಾರೆ.






