ಚಿತ್ರದುರ್ಗ ಹೆದ್ದಾರಿಯಲ್ಲಿ ಭೀಕರ ಅಪಘಾತ: ಹೊತ್ತಿ ಉರಿದ ಸ್ಲೀಪರ್ ಬಸ್, 17ಕ್ಕೂ ಹೆಚ್ಚು ಸಾವು
ಚಿತ್ರದುರ್ಗದ ಹಿರಿಯೂರು ಬಳಿ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಲಾರಿ ಡಿವೈಡರ್ ದಾಟಿ ಬಸ್‌ಗೆ ಡಿಕ್ಕಿ ಹೊಡೆದು ಬೆಂಕಿ ಹೊತ್ತಿಕೊಂಡಿದ್ದು, 17ಕ್ಕೂ ಹೆಚ್ಚು ಪ್ರಯಾಣಿಕರು ಸಜೀವ ದಹನಗೊಂಡ ದುರಂತ ಸಂಭವಿಸಿದೆ.
- ಚಿತ್ರದುರ್ಗ ಹೆದ್ದಾರಿಯಲ್ಲಿ ಲಾರಿ–ಬಸ್ ಡಿಕ್ಕಿ
- ಸ್ಲೀಪರ್ ಬಸ್ ಹೊತ್ತಿ ಉರಿದು, 17ಕ್ಕೂ ಹೆಚ್ಚು ಸಾವು
- ಲಾರಿ ಚಾಲಕನ ನಿರ್ಲಕ್ಷ್ಯವೇ ಅಪಘಾತಕ್ಕೆ ಕಾರಣ
ಚಿತ್ರದುರ್ಗ (ಡಿ.25): ಕ್ರಿಸ್‌ಮಸ್ ಸಂಭ್ರಮದ ನಡುವೆಯೇ ಚಿತ್ರದುರ್ಗ ಜಿಲ್ಲೆಯಲ್ಲಿ (Chitradurga Bus Accident) ಮನಕಲಕುವ ದುರಂತ ನಡೆದಿದೆ. ಹಿರಿಯೂರು ತಾಲೂಕಿನ (Hiriyur taluk) ಗೊರ್ಲತ್ತು ಕ್ರಾಸ್ ಸಮೀಪ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಲಾರಿ ಡಿವೈಡರ್ ದಾಟಿ ಎದುರಿನಿಂದ ಬರುತ್ತಿದ್ದ ಖಾಸಗಿ ಸ್ಲೀಪರ್ ಕೋಚ್ ಬಸ್‌ಗೆ ಡಿಕ್ಕಿ ಹೊಡೆದ ಪರಿಣಾಮ, ಬಸ್ ಕ್ಷಣಾರ್ಧದಲ್ಲಿ (Bus Fire) ಬೆಂಕಿಗಾಹುತಿಯಾಯಿತು.
ಡಿಕ್ಕಿಯ ತೀವ್ರತೆಯಿಂದ ಬಸ್ ರಸ್ತೆ ಮಧ್ಯದಲ್ಲೇ ಹೊತ್ತಿ ಉರಿದಿದ್ದು, ಒಳಗಿದ್ದ 17ಕ್ಕೂ ಹೆಚ್ಚು ಪ್ರಯಾಣಿಕರು ಸಜೀವ ದಹನಗೊಂಡಿದ್ದಾರೆ. ಹಲವರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ತಕ್ಷಣವೇ ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಗಾಯಾಳುಗಳ ಸ್ಥಿತಿ ಗಂಭೀರವಾಗಿರುವುದರಿಂದ ಸಾವಿನ ಸಂಖ್ಯೆ ಹೆಚ್ಚುವ ಸಾಧ್ಯತೆಯಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಪಘಾತಕ್ಕೆ ಕಾರಣ ಮತ್ತು ಪ್ರಯಾಣದ ಮಾಹಿತಿ:
ಲಾರಿ ಚಾಲಕನ ನಿರ್ಲಕ್ಷ್ಯವೇ ಅಪಘಾತಕ್ಕೆ ಕಾರಣ ಎಂಬ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ. ಲಾರಿ ಹಿರಿಯೂರಿನಿಂದ ಬೆಂಗಳೂರಿನತ್ತ (Hiriyur to Bengaluru) ಸಾಗುತ್ತಿದ್ದರೆ, ಬಸ್ ಬೆಂಗಳೂರಿನಿಂದ ಶಿವಮೊಗ್ಗದತ್ತ (Bengaluru to Shivamogga) ಪ್ರಯಾಣಿಸುತ್ತಿತ್ತು. ಬಸ್‌ನಲ್ಲಿ ಸುಮಾರು 29 ಪ್ರಯಾಣಿಕರು ಇದ್ದರು ಎಂದು ತಿಳಿದುಬಂದಿದೆ.

ರಕ್ಷಣಾ ಕಾರ್ಯಾಚರಣೆ ಮತ್ತು ಟ್ರಾಫಿಕ್ ಅಸ್ತವ್ಯಸ್ತ:
ಘಟನೆಯ ಸುದ್ದಿ ತಿಳಿದ ತಕ್ಷಣ ಅಗ್ನಿಶಾಮಕ ದಳ, ಪೊಲೀಸರು ಹಾಗೂ ಸ್ಥಳೀಯರು ರಕ್ಷಣಾ ಕಾರ್ಯದಲ್ಲಿ ತೊಡಗಿದರು. ಜಿಲ್ಲಾ ಎಸ್‌ಪಿ ರಂಜಿತ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಹಿರಿಯೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತದ ಪರಿಣಾಮ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಸುಮಾರು 30 ಕಿ.ಮೀ. ವ್ಯಾಪ್ತಿಯಲ್ಲಿ ಭಾರೀ ಟ್ರಾಫಿಕ್ ಜಾಮ್ ಉಂಟಾಗಿ, ವಾಹನಗಳು ಶಿರಾವರೆಗೂ ಸಾಲುಗಟ್ಟಿ ನಿಂತಿದ್ದವು.
ಹಿಂದಿನ ಘಟನೆ ನೆನಪಿಸಿದ ದುರಂತ:
ಇದೇ ರೀತಿಯ ಅಪಘಾತ ಇತ್ತೀಚೆಗೆ ಆಂಧ್ರ ಪ್ರದೇಶದ ಕರ್ನೂಲ್ ಬಳಿ ನಡೆದಿದ್ದು, ಖಾಸಗಿ ಬಸ್‌ಗೆ ಬೆಂಕಿ ಹೊತ್ತಿಕೊಂಡು 20 ಮಂದಿ ಮೃತಪಟ್ಟಿದ್ದರು. ಆ ದುರ್ಘಟನೆ ಮಾಸುವ ಮುನ್ನವೇ ಚಿತ್ರದುರ್ಗದಲ್ಲಿ (Chitradurga) ಸಂಭವಿಸಿದ ಈ ಘಟನೆ ಜನರಲ್ಲಿ ಆತಂಕ ಹೆಚ್ಚಿಸಿದೆ.






