ಚಿತ್ರದುರ್ಗ ಬಸ್ ದುರಂತ: ಸಿಎಂ ಪರಿಹಾರ ಘೋಷಣೆ, ಮೃತದೇಹ ಗುರುತು ಪತ್ತೆಗೆ ಹೆಲ್ಪ್‌ಲೈನ್

ಚಿತ್ರದುರ್ಗದ ಹಿರಿಯೂರು ಬಳಿ ನಡೆದ ಭೀಕರ ಬಸ್ ಅಪಘಾತದಲ್ಲಿ 9 ಮಂದಿ ಸಾವನ್ನಪ್ಪಿದ್ದು 24 ಮಂದಿ ಗಾಯಗೊಂಡ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಪರಿಹಾರ ಘೋಷಿಸಿ ಮೃತದೇಹ ಗುರುತು ಪತ್ತೆಗೆ ಹೆಲ್ಪ್‌ಲೈನ್ ಪ್ರಕಟಿಸಿದೆ.

  • ಚಿತ್ರದುರ್ಗ ಬಸ್ ದುರಂತದಲ್ಲಿ 9 ಮಂದಿ ಸಾವು
  • ಸಿಎಂ ಸಿದ್ದರಾಮಯ್ಯರಿಂದ ಪರಿಹಾರ ಘೋಷಣೆ
  • ಮೃತದೇಹ ಗುರುತು ಪತ್ತೆಗೆ ಹೆಲ್ಪ್‌ಲೈನ್ ಪ್ರಕಟ

ಬೆಂಗಳೂರು / ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿಯ ಜವರಗೊಂಡನಹಳ್ಳಿ ಬಳಿ ನಡೆದ ಭೀಕರ ರಸ್ತೆ ಅಪಘಾತ (Chitradurga Accident) ರಾಜ್ಯವನ್ನೇ ಬೆಚ್ಚಿಬೀಳಿಸಿದೆ.

ಗುರುವಾರ ನಸುಕಿನ ಸುಮಾರು 2 ಗಂಟೆ ವೇಳೆ ಲಾರಿಯೊಂದು ಖಾಸಗಿ ಬಸ್‌ಗೆ ಡಿಕ್ಕಿ ಹೊಡೆದ ಪರಿಣಾಮ, ಬಸ್ ಬೆಂಕಿಗಾಹುತಿಯಾಗಿ (Bus Fire) ಕನಿಷ್ಠ 9 ಮಂದಿ ಸಜೀವ ದಹನಗೊಂಡಿದ್ದಾರೆ. ಈ ದುರಂತದಲ್ಲಿ 24 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಘಟನೆಯ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು ಮೃತರ ಕುಟುಂಬಗಳು ಹಾಗೂ ಗಾಯಾಳುಗಳಿಗೆ ರಾಜ್ಯ ಸರ್ಕಾರದ ಪರಿಹಾರವನ್ನು ಘೋಷಿಸಿದ್ದಾರೆ. ಮೃತರ ಕುಟುಂಬಗಳಿಗೆ ತಲಾ ₹5 ಲಕ್ಷ ಹಾಗೂ ಗಾಯಾಳುಗಳಿಗೆ ತಲಾ ₹50 ಸಾವಿರ ಪರಿಹಾರ ನೀಡಲಾಗುವುದು ಎಂದು ಅವರು ಪ್ರಕಟಿಸಿದ್ದಾರೆ.

ಸಿಎಂ ಪ್ರತಿಕ್ರಿಯೆ ಮತ್ತು ತನಿಖೆ ಸೂಚನೆ:

ಈ ಕುರಿತು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ ಸಿಎಂ, “ಘಟನೆಯ ಸಂಪೂರ್ಣ ಮಾಹಿತಿಯನ್ನು ಅಧಿಕಾರಿಗಳಿಂದ ಪಡೆದುಕೊಂಡಿದ್ದೇನೆ. ಸಂತ್ರಸ್ತರ ನೆರವಿಗೆ ಸರ್ಕಾರ ನಿಲ್ಲಲಿದೆ. ಅಪಘಾತದ ಕಾರಣ ಪತ್ತೆ ಮಾಡಿ ಸೂಕ್ತ ಕ್ರಮ ಕೈಗೊಳ್ಳಲು ತನಿಖೆಗೆ ಸೂಚಿಸಲಾಗಿದೆ” ಎಂದು ತಿಳಿಸಿದ್ದಾರೆ. ಜೊತೆಗೆ ಗಾಯಾಳುಗಳು ಶೀಘ್ರ ಚೇತರಿಸಿಕೊಳ್ಳಲಿ ಹಾಗೂ ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸಿದ್ದಾರೆ.

Chitradurga Bus Catches Fire
Chitradurga Bus Catches Fire

ಹೆಲ್ಪ್‌ಲೈನ್ ಮತ್ತು ಚಿಕಿತ್ಸೆ ಮಾಹಿತಿ:

ದುರಂತದ ಹಿನ್ನೆಲೆಯಲ್ಲಿ ಚಿತ್ರದುರ್ಗ ಜಿಲ್ಲಾ ಪೊಲೀಸ್ ಇಲಾಖೆ ಸಾರ್ವಜನಿಕರಿಗಾಗಿ ಹೆಲ್ಪ್‌ಲೈನ್ ಸಂಖ್ಯೆಗಳನ್ನೂ ಪ್ರಕಟಿಸಿದೆ. 9480803100, 08194-222782 ಮತ್ತು 9480803170 ಸಂಖ್ಯೆಗಳ ಮೂಲಕ ತುರ್ತು ಮಾಹಿತಿ ಹಾಗೂ ಸಹಾಯ ಪಡೆಯಬಹುದು ಎಂದು ಎಸ್ಪಿ ರಂಜಿತ್ ಬಂಡಾರು ತಿಳಿಸಿದ್ದಾರೆ.

ಘಟನೆಯಲ್ಲಿ 8 ಮಂದಿ ಸಂಪೂರ್ಣವಾಗಿ ಸುಟ್ಟು ಕರಕಲಾಗಿರುವುದರಿಂದ ಮೃತದೇಹಗಳ ಗುರುತು ಪತ್ತೆಗೆ ಡಿಎನ್‌ಎ ಪರೀಕ್ಷೆ ನಡೆಸುವ ಅಗತ್ಯ ಎದುರಾಗಿದೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದ್ದು, ಗಂಭೀರ ಸ್ಥಿತಿಯಲ್ಲಿರುವ ಮೂವರು ಬೆಂಗಳೂರಿನ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

TRENDING ARTICLES1 / 8

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories