ಭೀಕರ ರಸ್ತೆ ದುರಂತ, ಥಾರ್ ಕಾರು ಹರಿದು ವಿದ್ಯಾರ್ಥಿನಿ ಸ್ಥಳದಲ್ಲೇ ಸಾವು! ಮೂವರು ಗಂಭೀರ
ಕಾಲೇಜು ಮುಗಿಸಿ ಮನೆಗೆ ತೆರಳುತ್ತಿದ್ದ ವಿದ್ಯಾರ್ಥಿನಿಯರ ಮೇಲೆ ರಿವರ್ಸ್ ವೇಳೆ ಮಹೀಂದ್ರಾ ಥಾರ್ ಹರಿದ ಪರಿಣಾಮ 17 ವರ್ಷದ ವಿದ್ಯಾರ್ಥಿನಿ ಸ್ಥಳದಲ್ಲೇ ಸಾವನ್ನಪ್ಪಿ, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ರಾಯಚೂರು ಜಿಲ್ಲೆಯ ಸಿಂಧನೂರಿನಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಕಾಲೇಜು ವಿದ್ಯಾರ್ಥಿನಿಯೊಬ್ಬಳು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ದುಃಖದ ವಾತಾವರಣ ನಿರ್ಮಿಸಿದೆ. ಮಹೀಂದ್ರಾ ಥಾರ್ ವಾಹನ ಚಾಲಕನ ನಿರ್ಲಕ್ಷ್ಯವೇ ಈ ದುರಂತಕ್ಕೆ ಕಾರಣವಾಗಿದೆ ಎನ್ನಲಾಗಿದೆ.
ಮೃತ ವಿದ್ಯಾರ್ಥಿನಿಯನ್ನು ಅರಗಿನಮರ ಕ್ಯಾಂಪ್ ನಿವಾಸಿ ಭೂಮಿಕಾ (17) ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ ಮೇಘನಾ, ಮಹೇಶ್ವರಿ ಹಾಗೂ ಜಹೀದಾ ಎಂಬ ಇನ್ನೂ ಮೂವರು ವಿದ್ಯಾರ್ಥಿನಿಯರು ಗಂಭೀರವಾಗಿ ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕಾಲೇಜು ಮುಗಿಸಿಕೊಂಡು ವಿದ್ಯಾರ್ಥಿನಿಯರು ರಸ್ತೆ ಬದಿಯಲ್ಲಿ ಮನೆಗೆ ನಡೆದುಕೊಂಡು ಹೋಗುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ. ಇದೇ ಸಮಯದಲ್ಲಿ ಚಾಲಕ ಥಾರ್ ವಾಹನವನ್ನು ರಿವರ್ಸ್ ತೆಗೆದುಕೊಳ್ಳುವಾಗ ನಿಯಂತ್ರಣ ತಪ್ಪಿ ವಿದ್ಯಾರ್ಥಿನಿಯರ ಮೇಲೆಯೇ ಹರಿದಿದೆ ಎಂದು ತಿಳಿದುಬಂದಿದೆ.
ಅಪಘಾತದ ಭೀಕರ ದೃಶ್ಯಗಳು ಸಮೀಪದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಘಟನೆ ನಡೆದ ತಕ್ಷಣ ಸ್ಥಳೀಯರು ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಿದ್ದು, ಆದರೆ ಭೂಮಿಕಾಳ ಜೀವ ಉಳಿಸಲು ಸಾಧ್ಯವಾಗಲಿಲ್ಲ.
ಸಿಂಧನೂರು ಸಂಚಾರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಾಹನ ಚಾಲಕನನ್ನು ವಶಕ್ಕೆ ಪಡೆದಿದ್ದಾರೆ. ಅಪಘಾತದ ನಿಖರ ಕಾರಣದ ಬಗ್ಗೆ ತನಿಖೆ ಮುಂದುವರಿದಿದೆ. ವಿದ್ಯಾರ್ಥಿನಿಯ ಸಾವಿಗೆ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.



