ಶಿವಮೊಗ್ಗ: ಕಾನ್ಸ್‌ಟೇಬಲ್ ಕಿರುಕುಳಕ್ಕೆ ಬೇಸತ್ತ ಮಹಿಳೆ ಆತ್ಮಹತ್ಯೆ! ಎಫ್‌ಐಆರ್ ದಾಖಲು
ಸೋಶಿಯಲ್ ಮೀಡಿಯಾ ಕಿರುಕುಳದಿಂದ ಬೇಸತ್ತ ಮಹಿಳೆ ಭದ್ರಾವತಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಕಿಗೆ ಬಂದಿದೆ. ಕಾನ್ಸ್‌ಟೇಬಲ್ ಮೋಹನ್ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ಬಂಧನಕ್ಕೆ ವಿಶೇಷ ಪೊಲೀಸ್ ತಂಡ ರಚಿಸಲಾಗಿದೆ.

ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಹೊಸ ಸಿದ್ದಾಪುರ ಗ್ರಾಮದಲ್ಲಿ ನಡೆದ ದುರ್ಘಟನೆ ಒಂದು ಕುಟುಂಬವನ್ನು ಸಂಪೂರ್ಣವಾಗಿ ಕುಗ್ಗಿಸಿದೆ. ಸೋಶಿಯಲ್ ಮೀಡಿಯಾದ ಮೂಲಕ ಕಿರುಕುಳ ನೀಡುತ್ತಿದ್ದ ಕಾನ್ಸ್‌ಟೇಬಲ್‌ನ ವರ್ತನೆಗೆ ಬೇಸತ್ತು ಮಹಿಳೆ ಆತ್ಮಹತ್ಯೆ ಮಾಡಿಕೊಂಡಿರುವುದು ಪ್ರಕರಣದ ತೀವ್ರತೆಯನ್ನು ಹೆಚ್ಚಿಸಿದೆ.
ಮಹಿಳೆ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಘಟನೆ ಬಳಿಕ ಕುಟುಂಬಸ್ಥರು ಆಘಾತಕ್ಕೊಳಗಾಗಿದ್ದಾರೆ. ಆಕೆಯ ತಾಯಿ ಭದ್ರಾವತಿ ನ್ಯೂಟೌನ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಕಾನ್ಸ್‌ಟೇಬಲ್ ಮೋಹನ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.
ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್ ಮತ್ತು ಮೆಸೇಂಜರ್ ಮೂಲಕ ನಿರಂತರವಾಗಿ ಸಂದೇಶ ಕಳುಹಿಸಿ ಕಿರುಕುಳ ನೀಡುತ್ತಿದ್ದನೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಬ್ಲಾಕ್ ಮಾಡಿದರೂ ಬೇರೆ ಖಾತೆಗಳಿಂದ ಸಂಪರ್ಕಿಸಲು ಯತ್ನಿಸಿದ್ದನೆಂಬ ಆರೋಪವೂ ಕೇಳಿಬಂದಿದೆ.
ಮಹಿಳೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ತಪ್ಪು ಪ್ರಚಾರ ಮಾಡುವುದಾಗಿ ಬೆದರಿಕೆ ಹಾಕಿದ್ದನೆಂಬ ಅಂಶವೂ ಪ್ರಕರಣಕ್ಕೆ ಮತ್ತಷ್ಟು ಗಂಭೀರತೆ ತಂದಿದೆ. ಮೃತದೇಹದ ಮರಣೋತ್ತರ ಪರೀಕ್ಷೆ ಭದ್ರಾವತಿ ತಾಲೂಕು ಆಸ್ಪತ್ರೆಯಲ್ಲಿ ಪೂರ್ಣಗೊಂಡಿದೆ.
ಪೊಲೀಸ್ ಅಧಿಕಾರಿ ಬಿ. ನಿಖಿಲ್ ಪ್ರತಿಕ್ರಿಯೆ ನೀಡಿ, ಆರೋಪಿ ಮೋಹನ್ ಬಂಧನಕ್ಕಾಗಿ ವಿಶೇಷ ಪೊಲೀಸ್ ತಂಡವನ್ನು ರಚಿಸಲಾಗಿದ್ದು, ಶೀಘ್ರವೇ ಬಂಧಿಸಲಾಗುವುದು ಎಂದು ತಿಳಿಸಿದ್ದಾರೆ. ಈ ನಡುವೆ, ಆರೋಪಿಯ ವಿರುದ್ಧ ಇನ್ನೂ ಕೆಲವು ಮಹಿಳೆಯರಿಂದಲೂ ಇದೇ ರೀತಿಯ ಕಿರುಕುಳದ ಆರೋಪಗಳು ಕೇಳಿಬರುತ್ತಿವೆ ಎಂಬ ಮಾಹಿತಿ ಲಭ್ಯವಾಗಿದೆ.
ಮೋಹನ್ ಹಿಂದೆ ಭದ್ರಾವತಿ ನ್ಯೂಟೌನ್ ಠಾಣೆಯಲ್ಲಿ ಸೇವೆ ಸಲ್ಲಿಸಿ, ಅಶಿಸ್ತು ಹಿನ್ನೆಲೆ ತೀರ್ಥಹಳ್ಳಿ ತಾಲೂಕಿನ ಮಾಳೂರು ಠಾಣೆಗೆ ವರ್ಗಾವಣೆಗೊಂಡಿದ್ದನೆಂದು ಹೇಳಲಾಗಿದೆ. ನಗರದಲ್ಲಿ ಮೀಟರ್ ಬಡ್ಡಿ ವ್ಯವಹಾರ ನಡೆಸುತ್ತಿದ್ದನೆಂಬ ಆರೋಪಗಳೂ ಹೊರಬಂದಿವೆ.
ಇದಕ್ಕೂ ಮುನ್ನ, ಮಹಿಳೆಯ ಪತಿ ಅನಾರೋಗ್ಯ ಕಾರಣದಿಂದ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಪತಿಯ ಸಾವಿನ ನೋವು ಇನ್ನೂ ಮಾಸದಿರುವಾಗ, ಆರು ದಿನಗಳಲ್ಲೇ ಪತ್ನಿಯೂ ಅದೇ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದು ಕುಟುಂಬವನ್ನು ಶೋಕಸಾಗರದಲ್ಲಿ ಮುಳುಗಿಸಿದೆ. ಇದೀಗ ಇಬ್ಬರು ಪುಟ್ಟ ಹೆಣ್ಣುಮಕ್ಕಳು ತಂದೆ-ತಾಯಿಯನ್ನೂ ಕಳೆದುಕೊಂಡು ಅನಾಥರಾಗಿದ್ದಾರೆ.







