ಸೂರಜ್ ರೇವಣ್ಣ ಪ್ರಕರಣ, ಮರುಪರಿಶೀಲನಾ ಅರ್ಜಿ ವಜಾ! ಮತ್ತೊಂದು ಹಿನ್ನಡೆ
ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಎಸ್‌ಐಟಿ ‘ಬಿ’ ರಿಪೋರ್ಟ್ ತಿರಸ್ಕಾರವಾದ ಬೆನ್ನಲ್ಲೇ, ಸೂರಜ್ ರೇವಣ್ಣ ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿಯನ್ನೂ ಕೋರ್ಟ್ ವಜಾ ಮಾಡಿದ್ದು, ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ.

- ಸೂರಜ್ ರೇವಣ್ಣ ಪ್ರಕರಣ
- ಮರುಪರಿಶೀಲನಾ ಅರ್ಜಿ ವಜಾ
- ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣ
ಬೆಂಗಳೂರು (Bengaluru): ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಸಿಲುಕಿರುವ ಜೆಡಿಎಸ್ ಎಂಎಲ್‌ಸಿ ಸೂರಜ್ ರೇವಣ್ಣ ಅವರಿಗೆ ನ್ಯಾಯಾಲಯದಿಂದ ಮತ್ತೊಂದು ಹಿನ್ನಡೆ ಎದುರಾಗಿದೆ. ಪ್ರಕರಣದಿಂದ ಕೈಬಿಡುವಂತೆ ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿಯನ್ನು ಜನಪ್ರತಿನಿಧಿಗಳ ವಿಶೇಷ ಕೋರ್ಟ್ ವಜಾ ಮಾಡಿದೆ.
ಇದಕ್ಕೂ ಮೊದಲು ಎಸ್‌ಐಟಿ ಸಲ್ಲಿಸಿದ್ದ ‘ಬಿ’ ರಿಪೋರ್ಟ್ ಅನ್ನು ಬೆಂಗಳೂರಿನ 42ನೇ ಎಸಿಜೆಎಂ ನ್ಯಾಯಾಲಯ ತಿರಸ್ಕರಿಸಿತ್ತು. ಜೊತೆಗೆ ಮರು ತನಿಖೆ ನಡೆಸುವಂತೆ ಸೂಚನೆ ನೀಡಲಾಗಿತ್ತು. ಈ ಬೆಳವಣಿಗೆಯ ನಂತರ ಸೂರಜ್ ರೇವಣ್ಣ ಸಲ್ಲಿಸಿದ್ದ ಅರ್ಜಿಯನ್ನೂ ನ್ಯಾಯಾಧೀಶರು ತಳ್ಳಿ ಹಾಕಿದ್ದು, ಪ್ರಕರಣ ಮುಂದುವರಿಯಲಿದೆ.
2024ರ ಜೂನ್ 22ರಂದು ಸಂತ್ರಸ್ತರು ಅಸಹಜ ಲೈಂಗಿಕ ದೌರ್ಜನ್ಯ ಆರೋಪ ಮಾಡಿ ದೂರು ನೀಡಿದ್ದರು. ಅದರ ಆಧಾರದ ಮೇಲೆ ಹೊಳೆನರಸೀಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಬಳಿಕ ಜೂನ್ 23ರಂದು ಸೂರಜ್ ರೇವಣ್ಣರನ್ನು ಬಂಧಿಸಿ ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಲಾಗಿತ್ತು.
ಒಂದು ತಿಂಗಳ ನಂತರ ಅವರಿಗೆ ಷರತ್ತುಬದ್ಧ ಜಾಮೀನು ಮಂಜೂರಾಗಿ ಜೈಲಿನಿಂದ ಬಿಡುಗಡೆಗೊಂಡಿದ್ದರು. ಪ್ರಕರಣದ ಇನ್ನೊಂದು ಭಾಗವಾಗಿ, ಸುಳ್ಳು ಆರೋಪದ ಮೂಲಕ ಹಣಕ್ಕೆ ಒತ್ತಾಯಿಸಲಾಗಿದೆ ಎಂದು ಸೂರಜ್ ರೇವಣ್ಣ ಆಪ್ತರಿಂದ ಪ್ರತಿದೂರು ಕೂಡ ದಾಖಲಾಗಿತ್ತು. ಈ ಎಲ್ಲ ಬೆಳವಣಿಗೆಗಳ ನಡುವೆ ರಾಜ್ಯ ಸರ್ಕಾರ ಪ್ರಕರಣವನ್ನು ಸಿಐಡಿಗೆ ವರ್ಗಾಯಿಸಿತ್ತು.
ಪ್ರಕರಣದ ಮುಂದಿನ ಹಂತದಲ್ಲಿ ತನಿಖೆ ಯಾವ ದಿಕ್ಕಿನಲ್ಲಿ ಸಾಗುತ್ತದೆ ಎಂಬುದು ಈಗ ಗಮನ ಸೆಳೆದಿದೆ.



