ಅನರ್ಹ ಬಿಪಿಎಲ್ ಕಾರ್ಡ್‌ಗಳ ವಿರುದ್ಧ ಸರ್ಕಾರದ ಸಮರ: ಸಾವಿರಾರು ಕಾರ್ಡ್ ರದ್ದು!
ರಾಜ್ಯದಲ್ಲಿ ಅನರ್ಹ BPL ಕಾರ್ಡ್ ಹೊಂದಿರುವವರ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಂಡಿದೆ. ಕಳೆದ ಐದು ತಿಂಗಳಲ್ಲಿ ಲಕ್ಷಾಂತರ ಫಲಾನುಭವಿಗಳಿಗೆ ಆಘಾತವಾಗಿದ್ದು, ಸಾವಿರಾರು ಕಾರ್ಡ್‌ಗಳು ರದ್ದು ಹಾಗೂ ಹಲವು BPL ಕಾರ್ಡ್‌ಗಳನ್ನು APLಗೆ ಪರಿವರ್ತಿಸಲಾಗಿದೆ.

ಬೆಂಗಳೂರು (Bengaluru): ರಾಜ್ಯದಲ್ಲಿ ಅನರ್ಹವಾಗಿ BPL Ration Card ಹೊಂದಿರುವವರ ವಿರುದ್ಧ ಸರ್ಕಾರ ಗಂಭೀರ ಕ್ರಮ ಕೈಗೊಳ್ಳುತ್ತಿದೆ. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ನಡೆಸಿದ ಪರಿಶೀಲನೆಯ ಪರಿಣಾಮವಾಗಿ ಕಳೆದ ಐದು ತಿಂಗಳಲ್ಲಿ ಸುಮಾರು 15.12 ಲಕ್ಷ ಮಂದಿ ಫಲಾನುಭವಿಗಳಿಗೆ ಪರಿಣಾಮ ಬಿದ್ದಿದೆ.
ಈ ಕಾರ್ಯಾಚರಣೆಯಲ್ಲಿ ಅನರ್ಹರನ್ನಾಗಿ ಗುರುತಿಸಲಾದ 5,632 BPL ಕಾರ್ಡ್‌ಗಳನ್ನು ಶಾಶ್ವತವಾಗಿ ರದ್ದು ಮಾಡಲಾಗಿದೆ. ಇದರ ಜೊತೆಗೆ ಸುಮಾರು 4.09 ಲಕ್ಷ ಕಾರ್ಡ್‌ಗಳನ್ನು BPLನಿಂದ APLಗೆ ಪರಿವರ್ತನೆ ಮಾಡಲಾಗಿದೆ. ಇನ್ನೂ 23,068 ಕಾರ್ಡ್‌ಗಳನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಲಾಗಿದೆ, ಇದರಿಂದ ಸಾವಿರಾರು ಕುಟುಂಬಗಳು ಆತಂಕಕ್ಕೆ ಒಳಗಾಗಿವೆ.
ಸರ್ಕಾರದ ಮಾಹಿತಿಯ ಪ್ರಕಾರ ಈ ಕ್ರಮದಿಂದ ಒಟ್ಟಾರೆ ಲಕ್ಷಾಂತರ ಫಲಾನುಭವಿಗಳು ಪರಿಣಾಮಕ್ಕೊಳಗಾಗಿದ್ದಾರೆ. ಅನೇಕ ಕುಟುಂಬಗಳು ಈಗ ತಮ್ಮ ಕಾರ್ಡ್‌ಗಳ ಸ್ಥಿತಿ ಕುರಿತು ಮಾಹಿತಿ ಪಡೆಯಲು ಆಹಾರ ಇಲಾಖೆಯ ಕಚೇರಿಗಳಿಗೆ ಭೇಟಿ ನೀಡುತ್ತಿರುವುದು ಕಂಡುಬರುತ್ತಿದೆ.
ಇದಕ್ಕೂ ಮಧ್ಯೆ ಜನಸಾಮಾನ್ಯರಲ್ಲಿ ಬೇರೆ ರೀತಿಯ ಅಸಮಾಧಾನವೂ ವ್ಯಕ್ತವಾಗಿದೆ. ಬಡವರಿಗಾಗಿ ಇರುವ BPL ಕಾರ್ಡ್‌ಗಳನ್ನು ಕೆಲವರು ಅನರ್ಹವಾಗಿ ಬಳಸುತ್ತಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ. ಕಾರು, ಜಮೀನು ಮತ್ತು ಮನೆ ಹೊಂದಿರುವವರೂ BPL ಕಾರ್ಡ್ ಪಡೆಯುತ್ತಿದ್ದಾರೆ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹೀಗಾಗಿ ಸರ್ಕಾರವು ನಿಜವಾದ ಬಡವರನ್ನು ಗುರುತಿಸಿ ಅವರಿಗೆ ಮಾತ್ರ BPL ಕಾರ್ಡ್ ನೀಡಬೇಕು ಎಂದು ಜನರು ಆಗ್ರಹಿಸಿದ್ದಾರೆ. ಕಾರ್ಯಾಚರಣೆಯ ಹೆಸರಿನಲ್ಲಿ ಬಡವರ ಕಾರ್ಡ್ ರದ್ದು ಮಾಡದೆ, ಶ್ರೀಮಂತರು ಅನರ್ಹವಾಗಿ ಪಡೆದುಕೊಂಡಿರುವ ಕಾರ್ಡ್‌ಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಇದಕ್ಕೂ ಮೊದಲು ರಾಜ್ಯದ ಆಹಾರ ಸಚಿವ ಕೆ.ಹೆಚ್. ಮುನಿಯಪ್ಪ ಅವರು BPL ಕಾರ್ಡ್ ಪಡೆಯಲು ಇರುವ ಆದಾಯ ಮಿತಿಯನ್ನು ಪರಿಷ್ಕರಿಸುವ ಬಗ್ಗೆ ಚಿಂತನೆ ನಡೆಯುತ್ತಿದೆ ಎಂದು ಹೇಳಿದ್ದರು. ಕೇಂದ್ರ ಸರ್ಕಾರದ ನಿಯಮದ ಪ್ರಕಾರ BPL ಕಾರ್ಡ್‌ಗಾಗಿ ವಾರ್ಷಿಕ ಆದಾಯ ಮಿತಿ 1.20 ಲಕ್ಷ ರೂ. ಆಗಿದೆ.
ಆದರೆ ಇತ್ತೀಚೆಗೆ ಕೂಲಿ ಕಾರ್ಮಿಕರಿಗೂ ದಿನಕ್ಕೆ ಸುಮಾರು 500 ರೂ. ವೇತನ ದೊರೆಯುತ್ತಿರುವುದರಿಂದ ವಾರ್ಷಿಕ ಆದಾಯವು ಹೆಚ್ಚಿನ ಮಟ್ಟ ತಲುಪುತ್ತಿದೆ. ಈ ಹಿನ್ನೆಲೆಯಲ್ಲಿ ಆದಾಯ ಮಿತಿಯಲ್ಲಿ ಬದಲಾವಣೆ ಅಗತ್ಯವಿದೆ ಎಂಬ ಚರ್ಚೆ ಸರ್ಕಾರದ ವಲಯದಲ್ಲೂ ನಡೆದಿತ್ತು. ಆದರೆ ಇದೀಗ ಸರ್ಕಾರದ ಕ್ರಮದಿಂದ ಅನರ್ಹವಾಗಿ BPL ಕಾರ್ಡ್ ಹೊಂದಿರುವವರಿಗೆ ಎಚ್ಚರಿಕೆಯ ಸಂದೇಶ ನೀಡಲಾಗಿದೆ.



