ಬೆಂಗಳೂರು ಸೇರಿ ಕರ್ನಾಟಕದಾದ್ಯಂತ ಸರ್ಕಾರಿ ವೈದ್ಯರ ಮುಷ್ಕರ, ಓಪಿಡಿ ಸೇವೆ ಬಂದ್!

ಕರ್ನಾಟಕದ ಸರ್ಕಾರಿ ಆಸ್ಪತ್ರೆಗಳ ವೈದ್ಯರು ಬೇಡಿಕೆ ಈಡೇರಿಕೆಗೆ ಮಾರ್ಚ್ 11ರಿಂದ ಮುಷ್ಕರಕ್ಕೆ ಕರೆ ನೀಡಿದ್ದಾರೆ. ಇದರ ಪರಿಣಾಮವಾಗಿ ರಾಜ್ಯದ ಅನೇಕ ಆಸ್ಪತ್ರೆಗಳಲ್ಲಿ ಓಪಿಡಿ ಸೇವೆಗಳು ಸ್ಥಗಿತಗೊಳ್ಳುವ ಆತಂಕ ಹೆಚ್ಚಾಗಿದೆ.

ಬೆಂಗಳೂರು (Bengaluru): ಕರ್ನಾಟಕದ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವ ಸಾವಿರಾರು ರೋಗಿಗಳಿಗೆ ಮುಂಬರುವ ದಿನಗಳಲ್ಲಿ ಸಂಕಷ್ಟ ಎದುರಾಗುವ ಲಕ್ಷಣಗಳು ಕಾಣಿಸುತ್ತಿವೆ. ಸರ್ಕಾರಿ ವೈದ್ಯರು ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮಾರ್ಚ್ 11ರಿಂದ ಮುಷ್ಕರಕ್ಕೆ ಮುಂದಾಗಿದ್ದು, ಇದರ ಪರಿಣಾಮವಾಗಿ ಅನೇಕ ಆಸ್ಪತ್ರೆಗಳಲ್ಲಿ ಓಪಿಡಿ (ಹೊರರೋಗಿ) ಸೇವೆಗಳು ಸ್ಥಗಿತಗೊಳ್ಳುವ ಸಾಧ್ಯತೆ ಇದೆ.

ಸಾಮಾನ್ಯವಾಗಿ ಜ್ವರ, ಕೆಮ್ಮು, ಚರ್ಮದ ಸಮಸ್ಯೆ, ರಕ್ತ ಪರೀಕ್ಷೆ, ಸ್ಕ್ಯಾನಿಂಗ್ ಸೇರಿದಂತೆ ಹಲವಾರು ಚಿಕಿತ್ಸೆಗಾಗಿ ಜನರು ಸರ್ಕಾರಿ ಆಸ್ಪತ್ರೆಗಳನ್ನೇ ಅವಲಂಬಿಸುತ್ತಾರೆ. ವಿಶೇಷವಾಗಿ ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಇದು ದೊಡ್ಡ ತೊಂದರೆಯಾಗಿ ಪರಿಣಮಿಸಬಹುದು ಎಂಬ ಆತಂಕ ವ್ಯಕ್ತವಾಗಿದೆ.

ವೈದ್ಯರ ಬೇಡಿಕೆಗಳು ಯಾವುವು?

ಸರ್ಕಾರಿ ವೈದ್ಯಾಧಿಕಾರಿಗಳ ಸಂಘವು ಹಲವು ವರ್ಷಗಳಿಂದ ಬಾಕಿಯಿರುವ ಸಮಸ್ಯೆಗಳ ಪರಿಹಾರಕ್ಕಾಗಿ ಸರ್ಕಾರದ ಗಮನ ಸೆಳೆಯಲು ಈ ಹೋರಾಟಕ್ಕೆ ಮುಂದಾಗಿದೆ. ಕಳೆದ ನಾಲ್ಕು ವರ್ಷಗಳಿಂದ ವೃಂದ ಮತ್ತು ನೇಮಕಾತಿ ಪ್ರಕ್ರಿಯೆ ನಡೆಯದೇ ಇರುವುದೂ ಪ್ರಮುಖ ಕಾರಣಗಳಲ್ಲಿ ಒಂದು ಎಂದು ವೈದ್ಯರು ತಿಳಿಸಿದ್ದಾರೆ.

ಇದಲ್ಲದೆ ಸುಮಾರು 13 ವರ್ಷಗಳಿಂದ ವೈದ್ಯರ ಜೇಷ್ಠಾತಾ ಪಟ್ಟಿಯನ್ನು ಪರಿಷ್ಕರಿಸದಿರುವುದು, ಆಸ್ಪತ್ರೆಗಳಲ್ಲಿ ಔಷಧಗಳ ಕೊರತೆ, ಕೆಲಸದ ಒತ್ತಡ ಹಾಗೂ ಆಡಳಿತಾತ್ಮಕ ಸಮಸ್ಯೆಗಳು ಸೇರಿದಂತೆ ಒಟ್ಟು 15 ಪ್ರಮುಖ ಬೇಡಿಕೆಗಳನ್ನು ಸಂಘವು ಮುಂದಿಟ್ಟಿದೆ.

ಏಳು ಸುತ್ತಿನ ಸಭೆಯೂ ಫಲಪ್ರದವಾಗಲಿಲ್ಲ

ವೈದ್ಯರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಆರೋಗ್ಯ ಇಲಾಖೆ ಇದುವರೆಗೆ ಏಳು ಸುತ್ತಿನ ಸಭೆಗಳನ್ನು ನಡೆಸಿದರೂ ಯಾವುದೇ ಸ್ಪಷ್ಟ ನಿರ್ಧಾರ ಕೈಗೊಳ್ಳಲಾಗಿಲ್ಲ. ಮಾರ್ಚ್ 2ರಂದು ಆರೋಗ್ಯ ಸಚಿವರ ಸಮ್ಮುಖದಲ್ಲಿ ನಡೆದ ಸಭೆಯೂ ಅಂತಿಮ ಫಲಿತಾಂಶ ನೀಡಲಿಲ್ಲ ಎಂದು ವೈದ್ಯರು ಹೇಳಿದ್ದಾರೆ.

ಸರ್ಕಾರದಿಂದ ಲಿಖಿತ ಭರವಸೆ ದೊರಕದ ಹಿನ್ನೆಲೆಯಲ್ಲಿ ಮುಷ್ಕರಕ್ಕೆ ಮುಂದಾಗಬೇಕಾಯಿತು ಎಂದು ಸಂಘದ ನಾಯಕರು ಸ್ಪಷ್ಟಪಡಿಸಿದ್ದಾರೆ.

ಮುಂದಿನ ದಿನಗಳಲ್ಲಿ ಹೋರಾಟ ತೀವ್ರ ಸಾಧ್ಯತೆ

ಮುಷ್ಕರದ ಮೊದಲ ಹಂತವಾಗಿ ವೈದ್ಯರು ಮತ್ತು ಸಿಬ್ಬಂದಿ ಕಪ್ಪು ಪಟ್ಟಿಯನ್ನು ಧರಿಸಿ ಓಪಿಡಿ ಸೇವೆಗಳನ್ನು ಸ್ಥಗಿತಗೊಳಿಸಲು ನಿರ್ಧರಿಸಿದ್ದಾರೆ. ಪರಿಸ್ಥಿತಿ ಬದಲಾಗದಿದ್ದರೆ ಮಾರ್ಚ್ 16ರಿಂದ ಸಾಮೂಹಿಕವಾಗಿ ಕರ್ತವ್ಯಕ್ಕೆ ಗೈರಾಗುವ ಎಚ್ಚರಿಕೆಯನ್ನು ಕೂಡ ನೀಡಿದ್ದಾರೆ.

ಈ ಸಂಬಂಧ ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ ರಾಜ್ಯಾಧ್ಯಕ್ಷ ಡಾ. ರವೀಂದ್ರನಾಥ್ ಮೇಟಿ ಅವರ ನೇತೃತ್ವದಲ್ಲಿ ವೈದ್ಯರು ಈಗಾಗಲೇ ಬೆಂಗಳೂರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. ಒಟ್ಟಿನಲ್ಲಿ ಈ ಮುಷ್ಕರ ಮುಂದುವರಿದರೆ ರಾಜ್ಯದ ಆರೋಗ್ಯ ಸೇವೆಗಳ ಮೇಲೆ ದೊಡ್ಡ ಪರಿಣಾಮ ಬೀರುವ ಸಾಧ್ಯತೆ ಇದೆ.

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories