ತುಮಕೂರು: ಗಂಡ ಹೆಂಡತಿ ಜಗಳದ ನಡುವೆ 16 ವರ್ಷದ ಮಗನನ್ನು ಹೊಡೆದು ಕೊಂದ ತಂದೆ

ಮನೆಯಲ್ಲಿ ನಡೆದ ಕೌಟುಂಬಿಕ ಕಲಹ ದುರಂತಕ್ಕೆ ತಿರುಗಿದ್ದು, ಎಸ್ಸೆಸ್ಸೆಲ್ಸಿ ಓದುತ್ತಿದ್ದ 16 ವರ್ಷದ ಬಾಲಕ ತಂದೆಯ ಹಲ್ಲೆಯಿಂದ ಮೃತಪಟ್ಟಿದ್ದಾನೆ.

ತುಮಕೂರು (Tumakuru): ತಂದೆ ಮತ್ತು ತಾಯಿ ನಡುವಿನ ಜಗಳಕ್ಕೆ ಮಗ ಬಲಿಯಾಗಿರುವ ಆಘಾತಕಾರಿ ಘಟನೆ ಕುಣಿಗಲ್ ತಾಲೂಕಿನ ಚೌಡನಾಯಕನಪಾಳ್ಯ ಗ್ರಾಮದಲ್ಲಿ ಭಾನುವಾರ (ನವೆಂಬರ್ 15) ಬೆಳಗಿನ ಜಾವ ನಡೆದಿದೆ.

ಎಸ್ಸೆಸ್ಸೆಲ್ಸಿ ಓದುತ್ತಿದ್ದ 16 ವರ್ಷದ ಸುನೀಲ್ ಗೌಡ ಮೃತಪಟ್ಟ ಬಾಲಕ. ಆತನ ತಂದೆ ನಂಜೇಗೌಡನೇ ಕೊಲೆ ಮಾಡಿರುವ ಆರೋಪ ಎದುರಿಸುತ್ತಿದ್ದಾನೆ.

ಬೆಳಗಿನ ಜಾವ ಮನೆಯಲ್ಲಿ ಪತಿ-ಪತ್ನಿ ನಡುವೆ ಯಾವುದೋ ವಿಚಾರಕ್ಕೆ ಜಗಳ ಶುರುವಾಗಿದೆ ಎನ್ನಲಾಗಿದೆ. ಇದರಿಂದ ಕೋಪಗೊಂಡ ನಂಜೇಗೌಡ ಸುಮಾರು 3.30ರ ವೇಳೆಗೆ ಪತ್ನಿಯನ್ನು ಮನೆಯಿಂದ ಹೊರಗೆ ಕಳುಹಿಸಿ ಬಾಗಿಲಿಗೆ ಒಳಗಿನಿಂದ ಚಿಲಕ ಹಾಕಿದ್ದಾನೆ. ಪತ್ನಿ ಎಷ್ಟೇ ಮನವಿ ಮಾಡಿದರೂ ಆತ ಬಾಗಿಲು ತೆರೆದಿಲ್ಲ.

ಇತ್ತ ಬೆಳಗ್ಗೆ ಓದಿಗೆ ಹೋಗಬೇಕಿದ್ದ ಸುನೀಲ್ ಗೌಡ, ಸುಮಾರು 6 ಗಂಟೆಗೆ ಬಾಗಿಲು ತೆರೆಯುವಂತೆ ತಂದೆಯನ್ನು ಕೇಳಿದ್ದಾನೆ. ಆದರೆ ಯಾವುದೇ ಪ್ರತಿಕ್ರಿಯೆ ಸಿಗದ ಹಿನ್ನೆಲೆಯಲ್ಲಿ ಕೆಲವೇ ಹೊತ್ತಿನಲ್ಲಿ ಮನೆಯೊಳಗಿನಿಂದ ‘ಅಮ್ಮ’ ಎಂದು ಜೋರಾಗಿ ಕೂಗಿದ್ದಾನೆ. ಮಗನ ಧ್ವನಿ ಕೇಳಿದ ತಾಯಿ ಆತಂಕಗೊಂಡು ಮತ್ತೆ ಬಾಗಿಲು ತೆರೆಯುವಂತೆ ಪತಿಯನ್ನು ಒತ್ತಾಯಿಸಿದ್ದಾರೆ.

ಪರಿಸ್ಥಿತಿ ಗಂಭೀರವಾಗಿರುವುದನ್ನು ಅರಿತ ಗ್ರಾಮಸ್ಥರೂ ಮನೆ ಬಳಿ ಜಮಾಯಿಸಿ ಬಾಗಿಲು ತೆರೆಯುವಂತೆ ನಂಜೇಗೌಡನಿಗೆ ಹೇಳಿದ್ದಾರೆ. ಆದರೂ ಆತ ಬಾಗಿಲು ತೆರೆಯಲು ಮುಂದಾಗಿಲ್ಲ. ಇದರಿಂದ ಅನುಮಾನಗೊಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಮಾಹಿತಿ ಪಡೆದ ಕುಣಿಗಲ್ ವೃತ್ತ ನಿರೀಕ್ಷಕ ಮಾದ್ಯಾನಾಯಕ್ ನೇತೃತ್ವದ ಪೊಲೀಸ್ ತಂಡ ಗ್ರಾಮಕ್ಕೆ ಧಾವಿಸಿದೆ. ಪೊಲೀಸರು ಹಲವು ಬಾರಿ ಬಾಗಿಲು ತೆರೆಯುವಂತೆ ಸೂಚಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಕೊನೆಗೆ ಬಾಗಿಲು ಮತ್ತು ಕಿಟಕಿಯನ್ನು ಒಡೆದು ಮನೆಯೊಳಗೆ ಪ್ರವೇಶಿಸಿದ್ದಾರೆ.

ಒಳಗೆ ಹೋಗಿ ನೋಡಿದಾಗ ಸುನೀಲ್ ಗೌಡ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡುಬಂದಿದೆ. ತಂದೆ ನಂಜೇಗೌಡ ಅರೆಕೋಲಿನಿಂದ ಮಗನ ತಲೆಗೆ ಹೊಡೆದು ಹತ್ಯೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.

ಘಟನೆಗೆ ಸಂಬಂಧಿಸಿದಂತೆ ನಂಜೇಗೌಡನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಕೌಟುಂಬಿಕ ಕಲಹವೇ ಕೃತ್ಯಕ್ಕೆ ಕಾರಣವೇ ಎಂಬುದರ ಕುರಿತು ತನಿಖೆ ನಡೆಸುತ್ತಿದ್ದಾರೆ. ಶಾಲೆಗೆ ಹೋಗಬೇಕಿದ್ದ ಬಾಲಕನ ಸಾವು ಇಡೀ ಗ್ರಾಮದಲ್ಲಿ ಆಘಾತ ಮೂಡಿಸಿದೆ.

English Summary▼

ಕರ್ನಾಟಕ ರಾಜ್ಯದ ಮೂಲೆಮೂಲೆಗಳ ಕನ್ನಡ ಸುದ್ದಿಗಳ ಜೊತೆಗೆ ದಿನದ ಪ್ರಮುಖ ಬೆಳವಣಿಗೆಗಳನ್ನು Kannada News Today ಮೂಲಕ ತಿಳಿಯಿರಿ.

TRENDING ARTICLES1 / 4

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories