ತುಮಕೂರು: ಚಿನ್ನದಾಸೆಗೆ ವೃದ್ಧೆ ಕೊಲೆ, ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಅರೆಸ್ಟ್

ತುಮಕೂರು ಜಿಲ್ಲೆಯ ಕುಣಿಗಲ್ ಬಳಿ ವೃದ್ಧೆಯನ್ನು ಕೊಲೆ ಮಾಡಿ ದರೋಡೆಕೋರರ ಕಥೆ ಕಟ್ಟಿದ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷನನ್ನು ಪೊಲೀಸರು ಬಂಧಿಸಿದ್ದಾರೆ. ಚಿನ್ನದ ಆಭರಣಕ್ಕಾಗಿ ನಡೆದ ಈ ಕೃತ್ಯ ಗ್ರಾಮದಲ್ಲಿ ಆತಂಕ ಮೂಡಿಸಿದೆ.

  • ಚಿನ್ನದಾಸೆಗೆ ವೃದ್ಧೆ ಕೊಲೆ ಪ್ರಕರಣ
  • ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಂಧನ
  • ಕುಣಿಗಲ್ ವೃದ್ಧೆ ಕೊಲೆ ಪ್ರಕರಣ

ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೂಕಿನ ಉಜ್ಜಿನಿ ಗ್ರಾಮದಲ್ಲಿ ನಡೆದ ವೃದ್ಧೆ ಕೊಲೆ ಪ್ರಕರಣ ಇಡೀ ಗ್ರಾಮವನ್ನು ಬೆಚ್ಚಿಬೀಳಿಸಿತ್ತು. ಒಂಟಿಯಾಗಿ ವಾಸಿಸುತ್ತಿದ್ದ ನಾಗಮ್ಮ ಎಂಬ ವೃದ್ಧೆ ಮನೆಯೊಳಗೆ ಶಂಕಾಸ್ಪದವಾಗಿ ಮೃತ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಮನೆಯೊಳಗಿನ ಪರಿಸ್ಥಿತಿ ನೋಡಿದಾಗ ಇದು ದರೋಡೆಗಾಗಿ ನಡೆದ ಕೊಲೆ ಎಂದು ಮೊದಲಿಗೆ ಅನುಮಾನ ವ್ಯಕ್ತವಾಗಿತ್ತು.

ಶವದ ಸುತ್ತ ಖಾರದ ಪುಡಿ ಚೆಲ್ಲಲಾಗಿತ್ತು. ಮನೆಯ ಹಿತ್ತಲಲ್ಲಿ ಮದ್ಯದ ಬಾಟಲ್ ಹಾಗೂ ಗ್ಲಾಸ್‌ಗಳು ಬಿದ್ದಿದ್ದವು. ಮನೆ ಬಾಗಿಲಿನ ಮುಂದೆ ಅಪರಿಚಿತ ಚಪ್ಪಲಿಗಳು ಕೂಡ ಕಂಡುಬಂದಿದ್ದವು. ಈ ಎಲ್ಲದರಿಂದ ಕೆಲವರು ದರೋಡೆಕೋರರು ಸೇರಿ ಈ ಕೃತ್ಯ ಎಸಗಿರಬಹುದು ಎಂಬ ಅನುಮಾನ ಮೂಡಿತ್ತು.

ತನಿಖೆಯಲ್ಲಿ ಬಯಲಾದ ನಿಜ

ಆದರೆ ಹುಲಿಯೂರುದುರ್ಗ ಪೊಲೀಸ್ ಠಾಣೆಯ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಸೂಕ್ಷ್ಮವಾಗಿ ತನಿಖೆ ಆರಂಭಿಸಿದರು. ತನಿಖೆಯಲ್ಲಿ ಸಿಕ್ಕ ಒಂದು ಪ್ರಮುಖ ಸುಳಿವು ಈ ಪ್ರಕರಣದ ದಿಕ್ಕೇ ಬದಲಿಸಿತು. ಕೊನೆಗೆ ಇದು ಅಪರಿಚಿತರ ಕೃತ್ಯವಲ್ಲ, ಪರಿಚಯಸ್ಥನಿಂದಲೇ ನಡೆದ ಕೊಲೆ ಎಂಬುದು ಬಹಿರಂಗವಾಯಿತು.

ಪೊಲೀಸರು ಶೀಘ್ರವೇ ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತನನ್ನು ಮುತ್ತುರಾಜ್ ಎಂದು ಗುರುತಿಸಲಾಗಿದ್ದು, ಆತ ಉಜ್ಜಿನಿ ಗ್ರಾಮದ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷನಾಗಿದ್ದಾನೆ. ರಾಜಕೀಯವಾಗಿ ಪರಿಚಿತನಾಗಿದ್ದ ಈತ ಜೂಜಾಟದ ಚಟದಿಂದ ದೊಡ್ಡ ಮೊತ್ತದ ಸಾಲದಲ್ಲಿ ಮುಳುಗಿದ್ದನೆಂದು ತಿಳಿದುಬಂದಿದೆ.

ಸಾಲದ ಹಣವೇ ಕೊಲೆಗೆ ಕಾರಣ

ಮುತ್ತುರಾಜ್ ಕೆಲವು ವರ್ಷಗಳ ಹಿಂದೆ ನಾಗಮ್ಮ ಬಳಿ ಸುಮಾರು 50 ಸಾವಿರ ರೂಪಾಯಿ ಸಾಲ ಪಡೆದಿದ್ದನು. ಆದರೆ ದೀರ್ಘಕಾಲ ಕಳೆದರೂ ಹಣ ಹಿಂತಿರುಗಿಸಿರಲಿಲ್ಲ. ಇದೇ ವಿಚಾರಕ್ಕೆ ನಾಗಮ್ಮ ಹಣವನ್ನು ವಾಪಸ್ ಕೊಡಲು ಒತ್ತಾಯಿಸಿದ್ದರಂತೆ.

ಇದರಿಂದ ಬೇಸತ್ತ ಮುತ್ತುರಾಜ್ ವೃದ್ಧೆಯ ಮೈಮೇಲಿದ್ದ ಚಿನ್ನದ ಆಭರಣಗಳ ಮೇಲೆ ಕಣ್ಣು ಹಾಕಿ ಕೊಲೆ ಮಾಡಲು ಸಂಚು ರೂಪಿಸಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಒಂದು ವಾರ ಯೋಜನೆ ರೂಪಿಸಿದ ಬಳಿಕ ನಾಗಮ್ಮಗೆ ಕರೆ ಮಾಡಿ ಹಣ ನೀಡುವುದಾಗಿ ಹೇಳಿ ಮನೆಯತ್ತ ಬಂದಿದ್ದನು.

ಸಂಜೆ ವೇಳೆ ಮನೆ ಬಳಿ ಯಾರೂ ಇಲ್ಲದ ಸಂದರ್ಭವನ್ನು ಗಮನಿಸಿದ ಆರೋಪಿ ಒಳಗೆ ಹೋಗಿ ಮಾತಿನ ಮಧ್ಯೆ ವೃದ್ಧೆಯ ಮೇಲೆ ಹಲ್ಲೆ ನಡೆಸಿದ್ದಾನೆ. ಬಳಿಕ ಸೀರೆಯಿಂದ ಕುತ್ತಿಗೆ ಬಿಗಿದು ಉಸಿರುಗಟ್ಟಿಸಿ ಹತ್ಯೆಗೈದಿದ್ದಾನೆ.

ಕೊಲೆ ಬಳಿಕ ದರೋಡೆಕೋರರ ಕೃತ್ಯವೆಂದು ತೋರಿಸಲು ಮನೆಯೊಳಗೆ ಖಾರದ ಪುಡಿ ಚೆಲ್ಲಿ, ಮದ್ಯದ ಬಾಟಲ್ ಹಾಗೂ ಗ್ಲಾಸ್‌ಗಳನ್ನು ಇಟ್ಟು ನಾಟಕವಾಡಿದ್ದಾನೆ. ನಂತರ ಚಿನ್ನದ ಆಭರಣಗಳನ್ನು ಕದ್ದುಕೊಂಡು ಸ್ಥಳದಿಂದ ಪರಾರಿಯಾಗಿದ್ದಾನೆ.

ಕದ್ದ ಚಿನ್ನ ವಶ

ಪೊಲೀಸರು ನಡೆಸಿದ ತನಿಖೆಯಲ್ಲಿ ಆರೋಪಿ ಕದ್ದ ಚಿನ್ನವನ್ನು ತನ್ನ ತೋಟದ ತೆಂಗಿನ ಮರದ ಬಳಿ ಅಡಗಿಸಿ ಇಟ್ಟಿದ್ದಾನೆ ಎಂಬುದು ಪತ್ತೆಯಾಗಿದೆ. ಬಳಿಕ ಪೊಲೀಸರು ಅದನ್ನು ವಶಪಡಿಸಿಕೊಂಡಿದ್ದಾರೆ.

ಪ್ರಸ್ತುತ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಜೂಜಾಟ ಹಾಗೂ ಸಾಲದ ಒತ್ತಡದಿಂದ ಈ ಕೃತ್ಯ ನಡೆದಿದೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಆದರೆ ಈ ಪ್ರಕರಣದಲ್ಲಿ ಇನ್ನೂ ಹೆಚ್ಚಿನ ವಿವರಗಳು ಹೊರಬರಬೇಕಿದ್ದು ಪೊಲೀಸರು ಮುಂದಿನ ತನಿಖೆ ಮುಂದುವರೆಸಿದ್ದಾರೆ.

TRENDING ARTICLES1 / 4
Show More

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories