ಲಾರಿಗೆ ಕಾರು ಡಿಕ್ಕಿಯಾಗಿ ನಾಲ್ವರು ಸ್ಥಳದಲ್ಲೇ ಸಾವು, ಕುಣಿಗಲ್ ಬಳಿ ಭೀಕರ ಅಪಘಾತ
ತುಮಕೂರು ಜಿಲ್ಲೆಯ ಕುಣಿಗಲ್ ಸಮೀಪ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ಮೂವರು ಸೇರಿ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ವಿವಾಹ ವಾರ್ಷಿಕೋತ್ಸವದ ದಿನವೇ ಈ ದುರಂತ ಸಂಭವಿಸಿರುವುದು ಮನಕಲಕುವಂತಾಗಿದೆ.

ತುಮಕೂರು: ಕುಣಿಗಲ್ ತಾಲೂಕಿನ ಹೊನ್ನೇನಹಳ್ಳಿ ಸಮೀಪ ಸಂಭವಿಸಿದ ಭೀಕರ ರಸ್ತೆ ಅಪಘಾತ ನಾಲ್ವರ ಜೀವವನ್ನು ಬಲಿ ಪಡೆದಿದೆ. ಗೊಬ್ಬರ ತುಂಬಿದ್ದ ಲಾರಿಗೆ ಆಲ್ಟೋ ಕಾರು ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ನಾಲ್ವರು ಪ್ರಯಾಣಿಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಅಪಘಾತದ ತೀವ್ರತೆಗೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಸ್ಥಳದಲ್ಲಿದ್ದವರನ್ನು ಕಂಗಾಲಾಗುವಂತೆ ಮಾಡಿತು. ಮೃತರು ಮಂಡ್ಯ ಜಿಲ್ಲೆಯ ಸ್ವರ್ಣಸಂದ್ರ ನಿವಾಸಿಗಳು ಎಂದು ತಿಳಿದುಬಂದಿದೆ.
ವಿವಾಹ ವಾರ್ಷಿಕೋತ್ಸವವೇ ಕೊನೆಯ ಪ್ರಯಾಣ
ಮೃತರಲ್ಲಿ ಕುಮಾರ ನರಸಿಂಹಸ್ವಾಮಿ, ಅವರ ಪತ್ನಿ ಗಾಯತ್ರಿ, ಸಹೋದರಿ ಗಾಯತ್ರಿ ಹಾಗೂ ಕಾರು ಚಾಲಕ ಸೇರಿದ್ದಾರೆ. ಕುಟುಂಬದವರು ವಿವಾಹ ವಾರ್ಷಿಕೋತ್ಸವದ ಹಿನ್ನೆಲೆ ದೇವರಾಯನದುರ್ಗಕ್ಕೆ ತೆರಳಿ ದೇವರ ದರ್ಶನ ಪಡೆದು ವಾಪಸ್ ಮನೆಗೆ ಮರಳುತ್ತಿದ್ದರು.
ಆದರೆ ಮನೆ ತಲುಪುವ ಮುನ್ನವೇ ವಿಧಿಯಾಟ ನಡೆದಿದೆ. ಹೊನ್ನೇನಹಳ್ಳಿ ಬಳಿ ಎದುರಾದ ಲಾರಿಗೆ ಕಾರು ಡಿಕ್ಕಿಯಾದ ರಭಸಕ್ಕೆ ಕಾರಿನಲ್ಲಿದ್ದವರಿಗೆ ಪಾರಾಗಲು ಅವಕಾಶವೇ ಸಿಗಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಸ್ಥಳದಲ್ಲೇ ನಜ್ಜುಗುಜ್ಜಾದ ಕಾರು
ಅಪಘಾತ ಸಂಭವಿಸಿದ ತಕ್ಷಣ ಸ್ಥಳೀಯರು ರಕ್ಷಣಾ ಕಾರ್ಯಕ್ಕೆ ಧಾವಿಸಿದರೂ, ಕಾರಿನಲ್ಲಿದ್ದವರು ಅಷ್ಟರಲ್ಲೇ ಮೃತಪಟ್ಟಿದ್ದರು. ಡಿಕ್ಕಿಯ ಹೊಡೆತಕ್ಕೆ ಕಾರು ಛಿದ್ರ ಛಿದ್ರವಾಗಿದ್ದು, ಮೃತದೇಹಗಳನ್ನು ಹೊರತೆಗೆದಲು ಪೊಲೀಸರು ಮತ್ತು ಸ್ಥಳೀಯರು ಹರಸಾಹಸಪಟ್ಟರು.
ಆರಂಭದಲ್ಲಿ ಮತ್ತೋರ್ವ ಮೃತ ವ್ಯಕ್ತಿಯ ಗುರುತು ಸ್ಪಷ್ಟವಾಗಿರಲಿಲ್ಲ. ನಂತರ ಆತ ಕಾರು ಚಾಲಕ ಎಂದು ಪೊಲೀಸರು ಖಚಿತಪಡಿಸಿದ್ದಾರೆ. ಮೃತದೇಹಗಳನ್ನು ಕುಣಿಗಲ್ ತಾಲೂಕು ಆಸ್ಪತ್ರೆಗೆ ರವಾನಿಸಲಾಗಿದೆ.
ಪೊಲೀಸರು ಪರಿಶೀಲನೆ
ಘಟನಾ ಸ್ಥಳಕ್ಕೆ ಕುಣಿಗಲ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಪಘಾತಕ್ಕೆ ನಿಖರ ಕಾರಣವೇನು ಎಂಬುದರ ಕುರಿತು ತನಿಖೆ ಮುಂದುವರಿದಿದೆ.
ಈ ದುರಂತದ ಸುದ್ದಿ ತಿಳಿದ ಕೂಡಲೇ ಮಂಡ್ಯದ ಸ್ವರ್ಣಸಂದ್ರ ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ. ಒಂದೇ ಕುಟುಂಬದ ಮೂವರು ಸಾವನ್ನಪ್ಪಿರುವುದು ಸಂಬಂಧಿಕರು ಮತ್ತು ಗ್ರಾಮಸ್ಥರ ಕಣ್ಣೀರನ್ನು ತರಿಸಿದೆ.



