Tumakuru: ತುಮಕೂರಿನಲ್ಲಿ ಶಬರಿಮಲೆ ಭಕ್ತರ ಕಾರು ಭೀಕರ ಅಪಘಾತ; ನಾಲ್ವರು ಸಾವು

ಶಬರಿಮಲೆ ಅಯ್ಯಪ್ಪ ದರ್ಶನ ಮುಗಿಸಿ ವಾಪಸ್ ಆಗುತ್ತಿದ್ದ ಯಲಬುರ್ಗಾ ಮೂಲದ ಭಕ್ತರ ಕ್ರೂಸರ್ ವಾಹನ ತುಮಕೂರು ಸಮೀಪ ನಿಂತಿದ್ದ ಲಾರಿಗೆ ಡಿಕ್ಕಿಯಾಗಿ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿ ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ.

  • ತುಮಕೂರು ಅಪಘಾತ: ಶಬರಿಮಲೆ ಭಕ್ತರ ಕ್ರೂಸರ್ ಲಾರಿಗೆ ಡಿಕ್ಕಿ
  • ಯಲಬುರ್ಗಾ ನಿವಾಸಿಗಳು ನಾಲ್ವರು ಸ್ಥಳದಲ್ಲೇ ಸಾವು
  • ಶಬರಿಮಲೆಯಿಂದ ವಾಪಸ್ ವೇಳೆ ಭೀಕರ ಅಪಘಾತ

Tumakuru Road Accident: ತುಮಕೂರು ಜಿಲ್ಲೆಯ ಕೋರಾ ಸಮೀಪದ ವಸಂತನರಸಾಪುರ ಕೈಗಾರಿಕಾ ಪ್ರದೇಶದ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಶಬರಿಮಲೆ ಅಯ್ಯಪ್ಪ ದರ್ಶನ (Sabarimala Devotees) ಮುಗಿಸಿಕೊಂಡು ವಾಪಸ್ ಬರುತ್ತಿದ್ದ ಭಕ್ತರು ಪ್ರಯಾಣಿಸುತ್ತಿದ್ದ ಕ್ರೂಸರ್ ವಾಹನ, ರಸ್ತೆ ಬದಿಯಲ್ಲಿ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಯಲಬುರ್ಗಾ ಮೂಲದ ನಾಲ್ವರು ಮೃತರು

ಅಪಘಾತದಲ್ಲಿ ಮೃತಪಟ್ಟವರು ಕೊಪ್ಪಳ ಜಿಲ್ಲೆಯ ಯಲಬುರ್ಗಾ ಮೂಲದವರು ಎಂದು ಪೊಲೀಸರು ದೃಢಪಡಿಸಿದ್ದಾರೆ. ಸಾಕ್ಷಿ (7), ವೆಂಕಟೇಶಪ್ಪ (30), ಮಾರತಪ್ಪ (35) ಹಾಗೂ ಗವಿಸಿದ್ದಪ್ಪ (40) ಮೃತ ದುರ್ದೈವಿಗಳು. ಕ್ರೂಸರ್‌ನಲ್ಲಿ ಒಟ್ಟು 11ರಿಂದ 12 ಮಂದಿ ಪ್ರಯಾಣಿಸುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.

ಗಾಯಾಳುಗಳ ಸ್ಥಿತಿ ಗಂಭೀರ

ಈ ದುರ್ಘಟನೆಯಲ್ಲಿ ಪ್ರಶಾಂತ್, ಪ್ರವೀಣ್ ಕುಮಾರ್, ರಾಜಪ್ಪ, ಉಲಗಪ್ಪ, ರಾಕೇಶ್, ತಿರುಪತಿ ಹಾಗೂ ಶ್ರೀನಿವಾಸ್ ಸೇರಿ ಏಳು ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ತಕ್ಷಣವೇ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಮಗಳ ಸಾವಿನಿಂದ ತಂದೆಯ ಆಕ್ರಂದನ

ಅಪಘಾತದಲ್ಲಿ ಏಳು ವರ್ಷದ ಮಗಳನ್ನು ಕಳೆದುಕೊಂಡ ತಂದೆ ಉಲಗಪ್ಪ ಅವರ ಅಳಲು ಮನಕಲಕುವಂತಿದೆ. “ಜನವರಿ 5ರಂದು ಎಲ್ಲರೂ ಒಟ್ಟಾಗಿ ಮಾಲೆ ಹಾಕಿ ಶಬರಿಮಲೆಗೆ ತೆರಳಿದ್ದೆವು. ಮಗಳು ನನ್ನ ಪಕ್ಕದಲ್ಲೇ ಮಲಗಿದ್ದಳು. ಏನು ನಡೆಯಿತು ಗೊತ್ತಾಗಲೇ ಇಲ್ಲ,” ಎಂದು ಕಣ್ಣೀರಿಟ್ಟಿದ್ದಾರೆ. ಮೊದಲ ತರಗತಿಯಲ್ಲಿ ಓದುತ್ತಿದ್ದ ಮಗಳನ್ನು ಎರಡನೇ ಬಾರಿ ಅಯ್ಯಪ್ಪ ದರ್ಶನಕ್ಕೆ ಕರೆದುಕೊಂಡು ಹೋಗಿದ್ದೆವು ಎಂದು ಅವರು ನೋವು ಹಂಚಿಕೊಂಡಿದ್ದಾರೆ.

ಪೊಲೀಸರ ತನಿಖೆ

ಸ್ಥಳಕ್ಕೆ ತುಮಕೂರು ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಪಘಾತದ ನಿಖರ ಕಾರಣ ತಿಳಿಯಲು ತನಿಖೆ ಮುಂದುವರಿದಿದೆ. ಶಬರಿಮಲೆ–ಪಳನಿ ದರ್ಶನ ಮುಗಿಸಿ ಕೊಪ್ಪಳ ಕಡೆ ತೆರಳುವಾಗ ಈ ದುರಂತ ಸಂಭವಿಸಿರುವುದು ತಿಳಿದುಬಂದಿದೆ.

TRENDING ARTICLES1 / 3
Show More

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories