ಕಸದ ಜೊತೆ ಹಣ, ಚಿನ್ನ ವಾಹನಕ್ಕೆ ಎಸೆದ ಮಹಿಳೆ; ಚಾಲಕನ ಕಾರ್ಯಕ್ಕೆ ಮೆಚ್ಚುಗೆ
ಮೈಸೂರಿನ ಪಿರಿಯಾಪಟ್ಟಣದಲ್ಲಿ ಮಹಿಳೆಯೊಬ್ಬರು ಕಸವೆಂದು ಭಾವಿಸಿ ಹಣ ಮತ್ತು ಚಿನ್ನವಿದ್ದ ಚೀಲವನ್ನು ವಾಹನಕ್ಕೆ ಹಾಕಿದ್ದರು. ವಿಷಯ ತಿಳಿದ ಚಾಲಕ ತಕ್ಷಣ ಹುಡುಕಾಟ ನಡೆಸಿ ಬೆಲೆಬಾಳುವ ವಸ್ತುಗಳನ್ನು ಸುರಕ್ಷಿತವಾಗಿ ಮರಳಿಸಿ ಮಾನವೀಯತೆ ಮೆರೆದಿದ್ದಾರೆ.

ಒಂದು ಸಣ್ಣ ನಿರ್ಲಕ್ಷ್ಯದಿಂದ ಕೈತಪ್ಪಿದ್ದ ಸಾವಿರಾರು ರೂಪಾಯಿ ಹಣ ಮತ್ತು ಚಿನ್ನವನ್ನು ಮರಳಿ ಪಡೆಯಲು ಸಾಧ್ಯವಾಗಿದ್ದು, ಕಸ ಸಂಗ್ರಹ ವಾಹನದ ಚಾಲಕನ ಸಮಯಪ್ರಜ್ಞೆ ಹಾಗೂ ಪ್ರಾಮಾಣಿಕತೆಯಿಂದ. ಮಹಿಳೆಯೊಬ್ಬರ ಆತಂಕದ ಕ್ಷಣದಲ್ಲಿ ನೆರವಾದ ಚಾಲಕನ ಕಾರ್ಯ ಇದೀಗ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.
ಈ ಘಟನೆ (Mysuru) ಮೈಸೂರು ಜಿಲ್ಲೆಯ (Piriyapatna) ಪಿರಿಯಾಪಟ್ಟಣದಲ್ಲಿ ನಡೆದಿದೆ. ಇಲ್ಲಿನ ಹೌಸಿಂಗ್ ಬೋರ್ಡ್ ಬಡಾವಣೆಯಲ್ಲಿ ವಾಸವಿರುವ ಮಹಿಳೆಯೊಬ್ಬರು ಆಕಸ್ಮಿಕವಾಗಿ ಹಣ ಮತ್ತು ಚಿನ್ನವಿದ್ದ ಚೀಲವನ್ನೇ ಮನೆಯ ಕಸದೊಂದಿಗೆ ಪುರಸಭೆಯ ವಾಹನಕ್ಕೆ ಹಾಕಿದ್ದಾರೆ. ಆದರೆ ಇದು ಗಮನಕ್ಕೆ ಬರುವಷ್ಟರಲ್ಲಿ ವಾಹನ ಬೇರೆ ಬಡಾವಣೆಗೆ ತೆರಳಿತ್ತು.
ಪ್ರತಿದಿನದಂತೆ ಬೆಳಗ್ಗೆ ಸುಮಾರು 6.30ಕ್ಕೆ ಕಸ ಸಂಗ್ರಹಿಸಲು ಬಂದಿದ್ದ ವಾಹನದ ಚಾಲಕ ಮಂಜುನಾಥ್ಗೆ ಮಹಿಳೆ ಕಸದ ಚೀಲವನ್ನು ನೀಡಿದ್ದರು. ಅದರಲ್ಲಿ ಬೆಲೆಬಾಳುವ ವಸ್ತುಗಳಿದ್ದ ಮತ್ತೊಂದು ಚೀಲವೂ ಸೇರಿಕೊಂಡಿರುವುದು ಅವರಿಗೆ ತಿಳಿದಿರಲಿಲ್ಲ. ಸ್ವಲ್ಪ ಸಮಯದ ಬಳಿಕ ಈ ತಪ್ಪಿನ ಅರಿವಾಗುತ್ತಿದ್ದಂತೆ ಮಹಿಳೆ ಆತಂಕಗೊಂಡಿದ್ದಾರೆ.
ಕಸದ ವಾಹನ ಈಗಾಗಲೇ ಮುತ್ತಯ್ಯ ಬಡಾವಣೆಯಲ್ಲಿದೆ ಎಂಬ ಮಾಹಿತಿ ತಿಳಿದುಕೊಂಡ ಮಹಿಳೆ, ಬೆಳಗ್ಗೆ ಸುಮಾರು 8.30ರ ವೇಳೆಗೆ ಅಲ್ಲಿಗೆ ತೆರಳಿ ಚಾಲಕ ಮಂಜುನಾಥ್ ಅವರನ್ನು ಸಂಪರ್ಕಿಸಿದ್ದಾರೆ. ಕಸದೊಂದಿಗೆ ಹಣವಿದ್ದ ಚೀಲವೂ ವಾಹನಕ್ಕೆ ಸೇರಿಕೊಂಡಿದೆ ಎಂದು ವಿವರಿಸಿ, ಅದನ್ನು ಹುಡುಕಿಕೊಡುವಂತೆ ಮನವಿ ಮಾಡಿದ್ದಾರೆ.
ಮಹಿಳೆಯ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡ ಮಂಜುನಾಥ್ ಕೂಡಲೇ ನೆರವಿಗೆ ಮುಂದಾಗಿದ್ದಾರೆ. ವಾಹನವನ್ನು ಮತ್ತೆ ಹೌಸಿಂಗ್ ಬೋರ್ಡ್ ಬಡಾವಣೆಗೆ ತೆಗೆದುಕೊಂಡು ಹೋಗಿ, ಮಹಿಳೆ ಹಾಗೂ ಸ್ಥಳೀಯರ ಎದುರಲ್ಲೇ ಸಂಗ್ರಹಿಸಿದ್ದ ಕಸದ ಗಂಟುಗಳನ್ನು ಒಂದೊಂದಾಗಿ ಪರಿಶೀಲಿಸಿದ್ದಾರೆ.
ಕೆಲವು ಸಮಯದ ಹುಡುಕಾಟದ ಬಳಿಕ ಮಹಿಳೆ ಕಳೆದುಕೊಂಡಿದ್ದ ಚೀಲ ಪತ್ತೆಯಾಗಿದೆ. ಅದನ್ನು ತೆರೆದು ನೋಡಿದಾಗ ₹80 ಸಾವಿರ ನಗದು ಹಾಗೂ ಎರಡು ಚಿನ್ನದ ಉಂಗುರಗಳು ಇರುವುದು ಕಂಡುಬಂದಿದೆ. ಯಾವುದೇ ತಡಮಾಡದೆ ಚಾಲಕ ಅವುಗಳನ್ನು ಮಹಿಳೆಗೆ ಹಿಂದಿರುಗಿಸಿದ್ದಾರೆ. ಕಳೆದುಹೋಯಿತು ಎಂದು ಭಾವಿಸಿದ್ದ ಹಣ ಮತ್ತು ಚಿನ್ನ ಮರಳಿ ಸಿಕ್ಕಿದ್ದರಿಂದ ಮಹಿಳೆ ನಿರಾಳರಾಗಿದ್ದಾರೆ.
ಈ ಕುರಿತು ಮಾತನಾಡಿದ ಚಾಲಕ ಮಂಜುನಾಥ್, ಇನ್ನೂ ಎರಡು ಬೀದಿಗಳಲ್ಲಿ ಕಸ ಸಂಗ್ರಹಿಸುವ ಕೆಲಸ ಬಾಕಿ ಇತ್ತು. ಆ ಬಳಿಕ ವಾಹನವನ್ನು ಕಗ್ಗುಂಡಿ ಬಳಿಯ ಕಸ ವಿಂಗಡಣಾ ಘಟಕಕ್ಕೆ ತೆಗೆದುಕೊಂಡು ಹೋಗಿ ಕಸವನ್ನು ಸುರಿಯಬೇಕಿತ್ತು. ಅಲ್ಲಿ ತಲುಪಿದ ನಂತರ ಚೀಲವನ್ನು ಹುಡುಕುವುದು ತುಂಬಾ ಕಷ್ಟವಾಗುತ್ತಿತ್ತು. ಮಹಿಳೆ ಸರಿಯಾದ ಸಮಯಕ್ಕೆ ಬಂದು ವಿಷಯ ತಿಳಿಸಿದ್ದರಿಂದ ಹಣವನ್ನು ಮರಳಿಸಲು ಸಾಧ್ಯವಾಯಿತು ಎಂದು ಹೇಳಿದ್ದಾರೆ.
ಸಾಮಾನ್ಯವಾಗಿ ಇಂತಹ ಸಂದರ್ಭಗಳಲ್ಲಿ ಕಳೆದುಹೋದ ವಸ್ತುಗಳನ್ನು ಮರಳಿ ಪಡೆಯುವುದು ಸುಲಭವಲ್ಲ. ಆದರೆ ಮಂಜುನಾಥ್ ಅವರು ತೋರಿದ ಪ್ರಾಮಾಣಿಕತೆ ಮತ್ತು ಮಾನವೀಯತೆ ಸಾರ್ವಜನಿಕರ ಗಮನ ಸೆಳೆದಿದೆ. ತಮ್ಮ ಕರ್ತವ್ಯದ ನಡುವೆಯೂ ಮಹಿಳೆಯ ಕಷ್ಟಕ್ಕೆ ಸ್ಪಂದಿಸಿ ಹಣ ಹಾಗೂ ಚಿನ್ನವನ್ನು ಮರಳಿಸಿದ ಅವರ ಕಾರ್ಯಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.



