ಗೃಹಲಕ್ಷ್ಮಿ ಹಣಕ್ಕಾಗಿ ಅಜ್ಜಿಯನ್ನೇ ಕೊಂದ ಮೊಮ್ಮಗ! ಗುಡ್ಡಕ್ಕೆ ಕರೆದೊಯ್ದು ಉಸಿರುಗಟ್ಟಿಸಿ ಹತ್ಯೆ
ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಗ್ರಾಮವೊಂದರಲ್ಲಿ ಹಣದ ವಿಚಾರವಾಗಿ ನಡೆದ ಕೌಟುಂಬಿಕ ಕಲಹ ಭೀಕರ ಕೊಲೆಯಲ್ಲಿ ಅಂತ್ಯಗೊಂಡಿದೆ. ಸರ್ಕಾರದ ಯೋಜನೆಯ ಹಣ ನೀಡದಿದ್ದಕ್ಕೆ 78 ವರ್ಷದ ಅಜ್ಜಿಯನ್ನೇ ಮೊಮ್ಮಗ ಬರ್ಬರವಾಗಿ ಹತ್ಯೆ ಮಾಡಿದ್ದು, ಆರೋಪಿ ಈಗ ಪೊಲೀಸರ ವಶದಲ್ಲಿದ್ದಾನೆ.

- ಗೃಹಲಕ್ಷ್ಮಿ ಹಣಕ್ಕಾಗಿ ಅಜ್ಜಿಯೊಂದಿಗೆ ಜಗಳ
- ಗುಡ್ಡಕ್ಕೆ ಕರೆದೊಯ್ದು ಉಸಿರುಗಟ್ಟಿಸಿ ಹತ್ಯೆ
- 20 ವರ್ಷದ ಮೊಮ್ಮಗನನ್ನು ಬಂಧಿಸಿದ ಪೊಲೀಸರು
ಬೆಳಗಾವಿ (Belagavi) ಜಿಲ್ಲೆಯ ಹುಕ್ಕೇರಿ ತಾಲೂಕಿನ ಅರಳಿಕಟ್ಟಿ ಗ್ರಾಮದಲ್ಲಿ ಮನಕಲಕುವ ಘಟನೆ ನಡೆದಿದೆ. ಗೃಹಲಕ್ಷ್ಮಿ ಯೋಜನೆಯ ಹಣದ ವಿಚಾರವಾಗಿ ಉಂಟಾದ ಜಗಳ ವೃದ್ಧೆಯೊಬ್ಬರ ಪ್ರಾಣವನ್ನೇ ಬಲಿ ಪಡೆದಿದೆ. ಮೊಮ್ಮಗನಿಂದಲೇ ಅಜ್ಜಿ ಹತ್ಯೆಯಾಗಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.
ಹತ್ಯೆಯಾದವರನ್ನು ಹಮ್ಮವ್ವ ಬಾಲಪ್ಪ ಸನದಿ (78) ಎಂದು ಗುರುತಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ಮೊಮ್ಮಗ ಭೀಮಪ್ಪ ರಾಮಪ್ಪ ಸನದಿ (20) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಪೊಲೀಸರ ಪ್ರಾಥಮಿಕ ಮಾಹಿತಿಯ ಪ್ರಕಾರ, ನವೆಂಬರ್ 10ರಂದು ಭೀಮಪ್ಪ ತನ್ನ ಅಜ್ಜಿಯನ್ನು ಬೈಕ್ನಲ್ಲಿ ಕೂರಿಸಿಕೊಂಡು ಗವಿಸಿದ್ದೇಶ್ವರ ಗುಡ್ಡಕ್ಕೆ ಕರೆದುಕೊಂಡು ಹೋಗಿದ್ದ. ಅಲ್ಲಿ ಗೃಹಲಕ್ಷ್ಮಿ ಯೋಜನೆಯ ಹಣ (Gruha Lakshmi Scheme) ನೀಡುವಂತೆ ಕೇಳಿದ್ದಾನೆ. ಆದರೆ, ಅಜ್ಜಿ ಹಣ ಕೊಡಲು ನಿರಾಕರಿಸಿದ್ದರಿಂದ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ ಎನ್ನಲಾಗಿದೆ.
ಈ ವೇಳೆ ಆಕ್ರೋಶಗೊಂಡ ಭೀಮಪ್ಪ, ಅಜ್ಜಿಯನ್ನು ಕೆಳಕ್ಕೆ ತಳ್ಳಿ ಹಲ್ಲೆ ನಡೆಸಿದ್ದಾನೆ. ಬಳಿಕ ಕುತ್ತಿಗೆ ಹಿಸುಕಿ, ಹಗ್ಗದಿಂದ ಬಿಗಿದು ಉಸಿರುಗಟ್ಟಿಸಿ ಹತ್ಯೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.
ಹತ್ಯೆಯ ಬಳಿಕ ಮೃತದೇಹವನ್ನು ಗುಡ್ಡದಲ್ಲೇ ಬಿಟ್ಟು ಆರೋಪಿ ಪಾಶ್ಚಾಪುರಕ್ಕೆ ತೆರಳಿದ್ದಾನೆ. ಅಲ್ಲಿಂದ ಎರಡು ಗೋಣಿ ಚೀಲಗಳನ್ನು ತಂದಿರುವುದಾಗಿ ತನಿಖೆಯಲ್ಲಿ ತಿಳಿದುಬಂದಿದೆ. ಪ್ರಕರಣದ ಕುರಿತು ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.



