4-5 ದಿನದಲ್ಲಿ ಗೃಹಲಕ್ಷ್ಮಿ ಯೋಜನೆ ಹಣ ಜಮೆ! ಮಹಿಳೆಯರಿಗೆ ರಾಜ್ಯ ಸರ್ಕಾರ ಗುಡ್ ನ್ಯೂಸ್

ಗೃಹಲಕ್ಷ್ಮಿ ಯೋಜನೆಯ ಬಾಕಿ ಹಣಕ್ಕಾಗಿ ಕಾಯುತ್ತಿದ್ದ ಮಹಿಳೆಯರಿಗೆ ರಾಜ್ಯ ಸರ್ಕಾರ ಗುಡ್ ನ್ಯೂಸ್ ನೀಡಿದ್ದು, ಮಾರ್ಚ್ ಹಾಗೂ ಏಪ್ರಿಲ್ ತಿಂಗಳ ಕಂತು ಶೀಘ್ರದಲ್ಲೇ ಖಾತೆಗೆ ಜಮೆಯಾಗಲಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದ್ದಾರೆ.

ಬೆಳಗಾವಿ: ಗೃಹಲಕ್ಷ್ಮಿ ಯೋಜನೆಯ ಹಣಕ್ಕಾಗಿ ಕಾಯುತ್ತಿದ್ದ ಮಹಿಳೆಯರಿಗೆ ರಾಜ್ಯ ಸರ್ಕಾರದಿಂದ ಮಹತ್ವದ ಮಾಹಿತಿ ಹೊರಬಿದ್ದಿದೆ. ಮಾರ್ಚ್ ತಿಂಗಳ ಬಾಕಿ ಹಣ ಇನ್ನೂ ನಾಲ್ಕು ರಿಂದ ಐದು ದಿನಗಳೊಳಗೆ ಫಲಾನುಭವಿಗಳ ಖಾತೆಗೆ ಜಮೆಯಾಗಲಿದ್ದು, ಏಪ್ರಿಲ್ ತಿಂಗಳ ಹಣವೂ ಮುಂದಿನ 8 ರಿಂದ 10 ದಿನಗಳಲ್ಲಿ ಬಿಡುಗಡೆಯಾಗಲಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದ್ದಾರೆ.

ತಾಲೂಕಿನ ಬಾಕನೂರು ಗ್ರಾಮದಲ್ಲಿ ನಡೆದ ಮಹಾಲಕ್ಷ್ಮೀ ದೇವಿ ಜಾತ್ರಾ ಮಹೋತ್ಸವದಲ್ಲಿ ಮಾತನಾಡಿದ ಸಚಿವೆ, ಸರ್ಕಾರದ ಯೋಜನೆಗಳು ಜನರಿಗೆ ತಲುಪಿಸುವ ಕೆಲಸವನ್ನು ನಿರಂತರವಾಗಿ ಮಾಡುತ್ತಿದ್ದೇವೆ ಎಂದು ಹೇಳಿದರು. “ಕೆಲಸ ಮಾಡುವುದು ನನಗೆ ಹುಚ್ಚು. ರಾಜಕೀಯದಲ್ಲಿ ಸೋಲು-ಗೆಲುವು ಸಾಮಾನ್ಯ. ಆದರೆ ನಾನು ಕೆಲಸ ನಿಲ್ಲಿಸಿಲ್ಲ” ಎಂದು ಅವರು ತಿಳಿಸಿದರು.

ಗೃಹಲಕ್ಷ್ಮಿ ಯೋಜನೆಯಡಿ ಮಾರ್ಚ್ 2026ರ ₹2000 ಮೊತ್ತದ 29ನೇ ಕಂತಿನ ಹಣ ಬಿಡುಗಡೆಗೆ ಪ್ರಕ್ರಿಯೆ ಪೂರ್ಣಗೊಂಡಿದ್ದು, ಶೀಘ್ರದಲ್ಲೇ ಬ್ಯಾಂಕ್ ಖಾತೆಗೆ ಜಮೆಯಾಗಲಿದೆ. ಇದೇ ವೇಳೆ ಏಪ್ರಿಲ್ ತಿಂಗಳ ಹಣ ಬಿಡುಗಡೆಗೆ ಹಣಕಾಸು ಇಲಾಖೆಯಿಂದ ಅನುಮೋದನೆ ಪಡೆಯಲಾಗಿದ್ದು, ಮೇ ಮೂರನೇ ವಾರದೊಳಗೆ ಹಣ ಜಮೆ ಮಾಡುವ ಗುರಿ ಇಟ್ಟುಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ಫಲಾನುಭವಿಗಳು ತಮ್ಮ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗಿರುವುದನ್ನು ಖಚಿತಪಡಿಸಿಕೊಳ್ಳಬೇಕು. ಡಿಬಿಟಿ (DBT) ಮೂಲಕ ನೇರ ಹಣ ವರ್ಗಾವಣೆ ನಡೆಯಲಿದ್ದು, ಹಣ ಜಮೆಯ ಸ್ಥಿತಿಯನ್ನು DBT ಕರ್ನಾಟಕ ಪೋರ್ಟಲ್ ಮೂಲಕ ಪರಿಶೀಲಿಸಬಹುದು.

ಯೋಜನೆ ಸಂಬಂಧ ಯಾವುದೇ ಮಾಹಿತಿ ಅಥವಾ ಸಮಸ್ಯೆಗಳಿದ್ದರೆ 1902 ಅಥವಾ 080-22221144 ಸಹಾಯವಾಣಿ ಸಂಖ್ಯೆಗೆ ಸಂಪರ್ಕಿಸಲು ಅಧಿಕಾರಿಗಳು ತಿಳಿಸಿದ್ದಾರೆ.

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories