ಕರ್ನಾಟಕ ರಾಜ್ಯದಲ್ಲಿ ಭಾರೀ ಬಿಸಿಲು, ಮುಂದೆ ಇನ್ನಷ್ಟು ತೀವ್ರತೆ ಹೆಚ್ಚಳ! ಐಎಂಡಿ ಸೂಚನೆ
ಫೆಬ್ರವರಿಯಲ್ಲೇ ತಾಪಮಾನ ಏರಿಕೆ ಕಂಡಿರುವ ರಾಜ್ಯದಲ್ಲಿ, ಮಾರ್ಚ್‌ರಿಂದ ಮೇ ವರೆಗೆ ಬಿಸಿಲಿನ ತೀವ್ರತೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು IMD ಎಚ್ಚರಿಸಿದೆ.

- ಕರ್ನಾಟಕ ರಾಜ್ಯದಲ್ಲಿ ಅಧಿಕ ಬಿಸಿಲು
- ಮಾರ್ಚ್‌ನಿಂದ ತಾಪಮಾನ ಏರಿಕೆ
- ಗರಿಷ್ಠ ತಾಪಮಾನ ಹೆಚ್ಚುವ ಸೂಚನೆ
ಕರ್ನಾಟಕದಲ್ಲಿ ಈ ಬಾರಿ ಫೆಬ್ರವರಿ ತಿಂಗಳಲ್ಲೇ ಬೇಸಿಗೆ ತೀವ್ರತೆಯ ಲಕ್ಷಣಗಳು ಕಾಣಿಸಿಕೊಂಡಿವೆ. ಮಧ್ಯಾಹ್ನ ವೇಳೆಯಲ್ಲಿ ಉಷ್ಣತೆ ಹೆಚ್ಚಾಗಿ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಹವಾಮಾನ ತಜ್ಞರ ಪ್ರಕಾರ, ಇದು ಮುಂದಿನ ತಿಂಗಳುಗಳಲ್ಲಿ ಇನ್ನಷ್ಟು ಏರಿಕೆಯಾಗುವ ಮುನ್ಸೂಚನೆಯಾಗಿದೆ.
ಭಾರತೀಯ ಹವಾಮಾನ ಇಲಾಖೆ (IMD) ಮಾಹಿತಿ ಪ್ರಕಾರ, 2026ರ ಮಾರ್ಚ್‌ನಿಂದ ಮೇ ವರೆಗೆ ರಾಜ್ಯದ ಬಹುತೇಕ ಭಾಗಗಳಲ್ಲಿ ಗರಿಷ್ಠ ಹಾಗೂ ಕನಿಷ್ಠ ತಾಪಮಾನ ಸಾಮಾನ್ಯಕ್ಕಿಂತ ಹೆಚ್ಚಾಗಲಿದೆ.
ವಿಶೇಷವಾಗಿ ಉತ್ತರ ಒಳನಾಡು ಕರ್ನಾಟಕದಲ್ಲಿ ಉಷ್ಣ ಅಲೆ (ಹೀಟ್‌ವೇವ್) ತೀವ್ರಗೊಳ್ಳುವ ಸಾಧ್ಯತೆ ಇದ್ದು, ಕೆಲವು ಪ್ರದೇಶಗಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದೆ.
ಕರಾವಳಿ ಮತ್ತು ಒಳನಾಡಿನ ಸ್ಥಿತಿ
ಕರಾವಳಿ ಕರ್ನಾಟಕದಲ್ಲೂ ಗರಿಷ್ಠ ತಾಪಮಾನ ಶೇಕಡಾ 65 ರಿಂದ 75 ರಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜೊತೆಗೆ, ಕನಿಷ್ಠ ತಾಪಮಾನವೂ ಸಾಮಾನ್ಯ ಮಟ್ಟಕ್ಕಿಂತ ಹೆಚ್ಚಾಗುವ ಸಾಧ್ಯತೆ ಇದೆ. ಪ್ರಸ್ತುತ ಏರಿಕೆಯಾಗಿರುವ ಉಷ್ಣತೆ 3 ರಿಂದ 6 ದಿನಗಳವರೆಗೆ ಮುಂದುವರಿಯಬಹುದು ಎಂದು IMD ಅಂದಾಜಿಸಿದೆ.
ಬಿಸಿಲಿನ ತೀವ್ರತೆ ಹೆಚ್ಚಾಗುವ ಹಿನ್ನೆಲೆ ಜನರು ಆರೋಗ್ಯದ ಕಡೆ ಗಮನ ಹರಿಸಬೇಕು. ಅನಾವಶ್ಯಕವಾಗಿ ಮಧ್ಯಾಹ್ನ ವೇಳೆಯಲ್ಲಿ ಹೊರಗಡೆ ತೆರಳದಂತೆ, ನೀರಿನ ಸೇವನೆ ಹೆಚ್ಚಿಸಿಕೊಳ್ಳುವಂತೆ ತಜ್ಞರು ಸಲಹೆ ನೀಡಿದ್ದಾರೆ.







