ಹೈವೋಲ್ಟೇಜ್ ವಿದ್ಯುತ್ ಪ್ರವಹಿಸಿ, 13 ಮನೆಗಳ ವಿದ್ಯುತ್ ಉಪಕರಣಗಳು ಸುಟ್ಟು ಭಾರಿ ನಷ್ಟ!

ಸಾಗರದ ಎಸ್‌ಎನ್ ನಗರದಲ್ಲಿ ಏಕಾಏಕಿ ಹೈವೋಲ್ಟೇಜ್ ವಿದ್ಯುತ್ ಪ್ರವಹಿಸಿ 13ಕ್ಕೂ ಹೆಚ್ಚು ಮನೆಗಳ ವೈರಿಂಗ್ ಹಾಗೂ ಗೃಹೋಪಯೋಗಿ ವಸ್ತುಗಳಿಗೆ ಹಾನಿಯಾಗಿದೆ. ಮೆಸ್ಕಾಂ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದು, ಪರಿಹಾರ ನೀಡುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.

ಸಾಗರ: ಶಿವಮೊಗ್ಗ (Shivamogga) ಜಿಲ್ಲೆಯ ಸಾಗರದ ಇಕ್ಕೇರಿ ರಸ್ತೆಯ ಎಸ್‌ಎನ್ ನಗರದಲ್ಲಿ ಬುಧವಾರ ಮಧ್ಯಾಹ್ನ ಸಂಭವಿಸಿದ ವಿದ್ಯುತ್ ಅವಘಡದಿಂದ ಹಲವು ಮನೆಗಳ ನಿವಾಸಿಗಳು ನಷ್ಟ ಅನುಭವಿಸಿದ್ದಾರೆ.

ಇಲ್ಲಿನ ಎಚ್‌ಪಿ ಗ್ಯಾಸ್ ಗೋಡೌನ್ ಸಮೀಪ ಏಕಾಏಕಿ ಹೈವೋಲ್ಟೇಜ್ (High-Voltage) ವಿದ್ಯುತ್ ಪ್ರವಹಿಸಿದ್ದು, 13ಕ್ಕೂ ಹೆಚ್ಚು ಮನೆಗಳ ವಿದ್ಯುತ್ ಪರಿಕರಗಳು (Electrical Appliances) ಹಾಳಾಗಿವೆ.

ವಿದ್ಯುತ್ ಅವಘಡ ಸಂಭವಿಸಿದ ಸಂದರ್ಭದಲ್ಲಿ ಭಾರೀ ಶಬ್ದ ಕೇಳಿಬಂದಿದ್ದು, ಮನೆಗಳ ಒಳಗಿನ ವಿದ್ಯುತ್ ವೈರಿಂಗ್ ಸುಟ್ಟುಹೋಗಿದೆ. ಹಲವು ಮನೆಗಳಲ್ಲಿ ಟಿವಿ, ಫ್ಯಾನ್, ನೀರೆತ್ತುವ ಪಂಪ್, ಸಿಸಿಟಿವಿ ಕ್ಯಾಮೆರಾ ಹಾಗೂ ವಿದ್ಯುತ್ ಮೀಟರ್ ಬಾಕ್ಸ್‌ಗಳು ಹಾನಿಗೊಳಗಾಗಿವೆ. ಇದರಿಂದ ನಿವಾಸಿಗಳಿಗೆ ಆರ್ಥಿಕ ನಷ್ಟ ಉಂಟಾಗಿದೆ.

ಇದನ್ನೂ ಓದಿ: ಗುರುತಿನ ಸಂಖ್ಯೆ ಇಲ್ಲದ ರೈತರಿಗೆ ಎಲ್ಲಾ ಕೃಷಿ ಸಬ್ಸಿಡಿ, ಸಹಾಯಧನ, ಬೆಳೆ ಪರಿಹಾರ ಸ್ಥಗಿತ

ಘಟನೆ ಕುರಿತು ಮಾಹಿತಿ ಲಭಿಸಿದ ತಕ್ಷಣ ಮೆಸ್ಕಾಂ (MESCOM) ಅಧಿಕಾರಿಗಳು ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಆರಂಭಿಸಿದ್ದಾರೆ. ಆದರೆ, ಏಕಾಏಕಿ ಹೈವೋಲ್ಟೇಜ್ ವಿದ್ಯುತ್ ಪ್ರವಹಿಸಲು ನಿಖರ ಕಾರಣವೇನು ಎಂಬುದು ಇನ್ನೂ ಪತ್ತೆಯಾಗಿಲ್ಲ.

ಸ್ಥಳದಲ್ಲಿ ಎಲ್‌ಟಿ ವಿದ್ಯುತ್ ಮಾರ್ಗದ ಮೇಲೆಯೇ 33 ಕೆವಿಎ ಮುಖ್ಯ ಮಾರ್ಗ ಹಾಗೂ 11 ಕೆವಿ ವಿದ್ಯುತ್ ಮಾರ್ಗಗಳು ಹಾದುಹೋಗಿವೆ. ಈ ಮಾರ್ಗಗಳ ವ್ಯವಸ್ಥೆಯಲ್ಲಿ ಉಂಟಾಗಿರುವ ಸಮಸ್ಯೆ ಅವಘಡಕ್ಕೆ ಕಾರಣವಾಗಿರಬಹುದೇ ಎಂಬ ಶಂಕೆ ವ್ಯಕ್ತವಾಗಿದೆ. ಆದರೆ, ಪರಿಶೀಲನೆಯ ನಂತರವೇ ನಿಖರ ಕಾರಣ ತಿಳಿಯಬೇಕಿದೆ.

ಇದನ್ನೂ ಓದಿ: ಮಹಿಳೆಯರೇ, ಕೃಷಿ ಭೂಮಿ ಖರೀದಿಗೆ ಸಿಗುತ್ತೆ ನೆರವು; ಭೂ ಒಡೆತನ ಯೋಜನೆಗೆ ಅರ್ಜಿ ಹಾಕಿ

ಅವಘಡ ಸಂಭವಿಸಿದ ಕೆಲವೇ ಹೊತ್ತಿನಲ್ಲಿ ಮನೆಗಳಿಗೆ ವಿದ್ಯುತ್ ಸಂಪರ್ಕವನ್ನು ಮರುಸ್ಥಾಪಿಸಲಾಗಿದೆ ಎಂದು ಮೆಸ್ಕಾಂ ಇಲಾಖೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಕಿರಣ ಕುಮಾರ್ ಮತ್ತು ಸಹಾಯಕ ಎಂಜಿನಿಯರ್ ನವೀನ್ ಕುಮಾರ್ ತಿಳಿಸಿದ್ದಾರೆ. ಘಟನೆಯ ಸಂಪೂರ್ಣ ಪರಿಶೀಲನೆ ನಡೆಸಿ, ಅಗತ್ಯ ಕ್ರಮ ಕೈಗೊಳ್ಳುವುದಾಗಿ ಅವರು ಹೇಳಿದ್ದಾರೆ.

ಇದೇ ರೀತಿಯ ಘಟನೆ ಈ ಹಿಂದೆಯೂ ಆಗಾಗ ಸಂಭವಿಸುತ್ತಿತ್ತು ಎಂದು ಸ್ಥಳೀಯರು ದೂರಿದ್ದಾರೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆಗೆ ಮನವಿ ಸಲ್ಲಿಸಿದ್ದರೂ ಸಮಸ್ಯೆಗೆ ಶಾಶ್ವತ ಪರಿಹಾರ ಸಿಕ್ಕಿಲ್ಲ ಎಂಬುದು ನಿವಾಸಿಗಳ ಅಸಮಾಧಾನವಾಗಿದೆ. ಇದೀಗ ಹಾನಿಗೊಳಗಾದ ಮನೆಗಳ ವಿದ್ಯುತ್ ಉಪಕರಣಗಳು ಮತ್ತು ವೈರಿಂಗ್ ಪರಿಶೀಲಿಸಿ, ನಷ್ಟದ ಪ್ರಮಾಣ ಅಂದಾಜಿಸಿ ಸೂಕ್ತ ಪರಿಹಾರ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.

English Summary▼

ಕರ್ನಾಟಕ ರಾಜ್ಯದ ಮೂಲೆಮೂಲೆಗಳ ಕನ್ನಡ ಸುದ್ದಿಗಳ ಜೊತೆಗೆ ದಿನದ ಪ್ರಮುಖ ಬೆಳವಣಿಗೆಗಳನ್ನು Kannada News Today ಮೂಲಕ ತಿಳಿಯಿರಿ.

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories