ಕದ್ದ ವಾಹನಗಳಿಂದಲೇ ಕಳ್ಳತನ ಮಾಡುತ್ತಿದ್ದ ಅಂತಾರಾಜ್ಯ ಗ್ಯಾಂಗ್ ಬೆಳಗಾವಿ ಪೊಲೀಸರ ಬಲೆಗೆ

ಕದ್ದ ವಾಹನಗಳನ್ನೇ ಬಳಸಿ ಮತ್ತಷ್ಟು ವಾಹನ ಕಳ್ಳತನ ಮಾಡುತ್ತಿದ್ದ ಅಂತಾರಾಜ್ಯ ಗ್ಯಾಂಗ್‌ನ್ನು ಬೆಳಗಾವಿ ಪೊಲೀಸರು ಬಂಧಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಐವರು ಆರೋಪಿಗಳು ಸಿಕ್ಕಿಬಿದ್ದು, ಸುಮಾರು ಒಂದು ಕೋಟಿ ಮೌಲ್ಯದ 21 ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

ಬೆಳಗಾವಿ (Belagavi): ವಾಹನ ಕಳ್ಳತನದ ಪ್ರಕರಣವನ್ನು ತನಿಖೆ ಮಾಡುತ್ತಿದ್ದ ವೇಳೆ ಬೆಳಗಾವಿ ಪೊಲೀಸರು ದೊಡ್ಡ ಅಂತಾರಾಜ್ಯ ಗ್ಯಾಂಗ್‌ನ್ನು ಪತ್ತೆಹಚ್ಚಿದ್ದಾರೆ. ಕದ್ದ ವಾಹನಗಳನ್ನೇ ಬಳಸಿಕೊಂಡು ಮತ್ತೊಂದು ವಾಹನ ಕಳ್ಳತನ ಮಾಡುತ್ತಿದ್ದ ಖತರ್ನಾಕ್ ತಂಡ ಕೊನೆಗೂ ಪೊಲೀಸರ ಬಲೆಗೆ ಸಿಕ್ಕಿದೆ.

ಈ ಕಾರ್ಯಾಚರಣೆಯಲ್ಲಿ ಸುಮಾರು ₹1 ಕೋಟಿ ಮೌಲ್ಯದ 21 ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಒಟ್ಟು ಎಂಟು ಮಂದಿ ಆರೋಪಿಗಳ ಪೈಕಿ ಐವರನ್ನು ಬಂಧಿಸಲಾಗಿದ್ದು, ಉಳಿದ ಮೂವರಿಗಾಗಿ ಪೊಲೀಸರು ಹುಡುಕಾಟ ಮುಂದುವರೆಸಿದ್ದಾರೆ.

ಮೂರು ರಾಜ್ಯಗಳಲ್ಲಿ ಕಾರ್ಯಾಚರಣೆ ನಡೆಸಿದ ಗ್ಯಾಂಗ್

ಬಂಧಿತ ಆರೋಪಿಗಳನ್ನು ಯೂಸೂಫ್ ಖಾನ್, ಜಾಕೀರ್ ಹುಸೇನ್, ಶಫೀಕ್ ಅಹಮ್ಮದ್, ಆಜಾದ್ ಮತ್ತು ಬಶೀರ್ ಅಹಮ್ಮದ್ ಎಂದು ಗುರುತಿಸಲಾಗಿದೆ. ಇವರು ಕರ್ನಾಟಕದ ಜೊತೆಗೆ ಆಂಧ್ರ ಪ್ರದೇಶ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ಕಳ್ಳತನ ನಡೆಸುತ್ತಿದ್ದ ಅಂತಾರಾಜ್ಯ ಗ್ಯಾಂಗ್ ಸದಸ್ಯರು ಎಂದು ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿದೆ.

ಆರೋಪಿಗಳಿಂದ 8 ಮಿನಿ ಗೂಡ್ಸ್ ವಾಹನಗಳು, ರಾಯಲ್ ಎನ್‌ಫೀಲ್ಡ್ ಹಾಗೂ ಹೋಂಡಾ ಸೇರಿದಂತೆ 8 ಬೈಕ್‌ಗಳು ಮತ್ತು 5 ಸ್ಕೂಟರ್‌ಗಳು ಸೇರಿದಂತೆ ಒಟ್ಟು 21 ವಾಹನಗಳನ್ನು ಜಪ್ತಿ ಮಾಡಲಾಗಿದೆ.

ಒಂದು ಕಳ್ಳತನದಿಂದ ಬಯಲಾಯ್ತು ದೊಡ್ಡ ಗ್ಯಾಂಗ್

ಮೂರು ತಿಂಗಳ ಹಿಂದೆ ಬೆಳಗಾವಿ ತಾಲೂಕಿನ ನಿಲಜಿ ಗ್ರಾಮದಲ್ಲಿ ಮಿನಿ ಗೂಡ್ಸ್ ವಾಹನ ಕಳ್ಳತನವಾಗಿತ್ತು. ಈ ಕುರಿತು ಮಾರಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ಆರಂಭಿಸಿದ ಪೊಲೀಸರು ಸಿಸಿಟಿವಿ ದೃಶ್ಯಗಳು ಹಾಗೂ ತಾಂತ್ರಿಕ ಮಾಹಿತಿಯನ್ನು ಪರಿಶೀಲಿಸಿದರು.

ಅದರ ಆಧಾರದ ಮೇಲೆ ನಾಲ್ವರು ಆರೋಪಿಗಳು ಬೈಕ್‌ನಲ್ಲಿ ಬಂದು ಮಿನಿ ಗೂಡ್ಸ್ ವಾಹನ ಕದ್ದಿರುವುದು ತಿಳಿದುಬಂತು. ಆ ಬೈಕ್ ನಂಬರ್ ಪರಿಶೀಲಿಸಿದಾಗ ಅದು ಕೂಡ ಕಳ್ಳತನವಾಗಿರುವುದು ಪೊಲೀಸರಿಗೆ ಗೊತ್ತಾಯಿತು. ಇದರಿಂದ ಆರೋಪಿಗಳು ಕದ್ದ ವಾಹನಗಳನ್ನು ಬಳಸಿಕೊಂಡೇ ಮತ್ತಷ್ಟು ಕಳ್ಳತನ ಮಾಡುತ್ತಿರುವುದು ಸ್ಪಷ್ಟವಾಯಿತು.

ತಾಂತ್ರಿಕ ಸಾಕ್ಷ್ಯಾಧಾರಗಳ ನೆರವಿನಿಂದ ಪೊಲೀಸರು ಕೊನೆಗೂ ಐವರು ಆರೋಪಿಗಳನ್ನು ಬಂಧಿಸಲು ಯಶಸ್ವಿಯಾದರು. ತಮ್ಮ ಕಳುವಾದ ವಾಹನಗಳು ಮರಳಿ ಸಿಕ್ಕ ಹಿನ್ನೆಲೆಯಲ್ಲಿ ಮಾಲೀಕರು ಪೊಲೀಸರ ಕಾರ್ಯಾಚರಣೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories