ಬಸವ ಮಂಟಪ ಕೃತಿ ವಿರುದ್ಧ ಸರ್ಕಾರದ ಕ್ರಮ! ಮುಟ್ಟುಗೋಲಿಗೆ ಸಂಪುಟ ಒಪ್ಪಿಗೆ

ಬಸವಣ್ಣನವರು ಹಾಗೂ ಲಿಂಗಾಯತ ಸಮುದಾಯದ ಬಗ್ಗೆ ಅವಹೇಳನಕಾರಿ ಬರಹಗಳಿವೆ ಎಂಬ ಆರೋಪ ಎದುರಿಸುತ್ತಿರುವ ರವಿ ಹಂಜ್ ಅವರ ‘ಬಸವ ಮಂಟಪ’ ಕೃತಿ (Basava Mantapa Book) ಮುಟ್ಟುಗೋಲು ಮತ್ತು ಕಾನೂನು ಕ್ರಮಕ್ಕೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ ಎಂದು ಸಚಿವ ಈಶ್ವರ್ ಖಂಡ್ರೆ ತಿಳಿಸಿದ್ದಾರೆ.

  • ಕೃತಿ ಮುಟ್ಟುಗೋಲಿಗೆ ಸಚಿವ ಸಂಪುಟ ಸಮ್ಮತಿ
  • ರವಿ ಹಂಜ್ ವಿರುದ್ಧ ಕಾನೂನು ಕ್ರಮ
  • ಸಾಮಾಜಿಕ ಜಾಲತಾಣದ ವಿಡಿಯೋಗಳಿಗೂ ಕತ್ತರಿ

ಬೆಂಗಳೂರು (Bengaluru): ಬಸವಣ್ಣನವರ ಕುರಿತು ಲೇಖಕ ರವಿ ಹಂಜ್ (Ravi Hanj) ನೀಡಿರುವ ಹೇಳಿಕೆಗಳು ರಾಜ್ಯದಲ್ಲಿ ವಿವಾದಕ್ಕೆ ಕಾರಣವಾಗಿರುವ ಬೆನ್ನಲ್ಲೇ, ಇದೀಗ ರಾಜ್ಯ ಸಚಿವ ಸಂಪುಟ ಮಹತ್ವದ ನಿರ್ಧಾರ ಕೈಗೊಂಡಿದೆ.

‘ಬಸವ ಮಂಟಪ’ ಪುಸ್ತಕವನ್ನು (Basava Mantapa Book) ಮುಟ್ಟುಗೋಲು ಹಾಕಿಕೊಳ್ಳಲು ಹಾಗೂ ಲೇಖಕರ ವಿರುದ್ಧ ಕಾನೂನು ಕ್ರಮ ಜರುಗಿಸಲು ಸಂಪುಟ ಸಮ್ಮತಿ ಸೂಚಿಸಿದೆ ಎಂದು ಸಚಿವ ಈಶ್ವರ್ ಬಿ. ಖಂಡ್ರೆ (Eshwar B. Khandre) ಹೇಳಿದ್ದಾರೆ.

ಈ ನಿರ್ಧಾರಕ್ಕೆ ಪ್ರತಿಕ್ರಿಯಿಸಿರುವ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರೂ ಆಗಿರುವ ಖಂಡ್ರೆ, ಸಚಿವ ಸಂಪುಟಕ್ಕೆ ಧನ್ಯವಾದ ಸಲ್ಲಿಸಿದ್ದಾರೆ. ಬಸವಣ್ಣನವರ ಬಗ್ಗೆ ಅವಹೇಳನಕಾರಿ ಹೇಳಿಕೆಗಳಿವೆ ಎನ್ನಲಾದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಅವುಗಳನ್ನು ತೆಗೆದುಹಾಕುವಂತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲು ಕೂಡ ಸಂಪುಟ ಒಪ್ಪಿಗೆ ನೀಡಿದೆ ಎಂದು ತಿಳಿಸಿದ್ದಾರೆ.

12ನೇ ಶತಮಾನದಲ್ಲಿಯೇ ಜಾತಿ, ವರ್ಗಗಳ ಭೇದವಿಲ್ಲದ ಸಮ ಸಮಾಜದ ಕನಸು ಕಂಡು ಅದಕ್ಕಾಗಿ ಹೋರಾಡಿದವರು ಬಸವಣ್ಣನವರು. ಅಂತಹ ಮಹಾನ್ ವ್ಯಕ್ತಿಯ ಕುರಿತು ಅವಹೇಳನಕಾರಿ ಮಾತುಗಳನ್ನು ಸಹಿಸಲು ಸಾಧ್ಯವಿಲ್ಲ ಎಂಬ ಅಭಿಪ್ರಾಯವನ್ನು ಸಚಿವ ಸಂಪುಟದ ಹಲವು ಸದಸ್ಯರು ವ್ಯಕ್ತಪಡಿಸಿದ್ದಾರೆ.

ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ (G. Parameshwara) ಸೇರಿದಂತೆ ಸಚಿವರಾದ ಎಂ.ಬಿ. ಪಾಟೀಲ್, ಡಾ. ಶರಣಪ್ರಕಾಶ್ ಪಾಟೀಲ್, ಎಸ್.ಎಸ್. ಮಲ್ಲಿಕಾರ್ಜುನ್, ಬಸವರಾಜ ರಾಯರೆಡ್ಡಿ ಹಾಗೂ ವಿ. ಮುನಿಯಪ್ಪ ಅವರು ಈ ನಿರ್ಧಾರಕ್ಕೆ ಬೆಂಬಲ ಸೂಚಿಸಿದ್ದಾರೆ ಎಂದು ಖಂಡ್ರೆ ತಿಳಿಸಿದ್ದಾರೆ.

ಮುಖ್ಯಮಂತ್ರಿಯವರೂ ಸಂಪುಟದ ನಿರ್ಧಾರಕ್ಕೆ ಅನುಮೋದನೆ ನೀಡಿದ್ದಾರೆ. ಹೀಗಾಗಿ ಕೃತಿ ಮುಟ್ಟುಗೋಲು, ಲೇಖಕರ ವಿರುದ್ಧ ಕಾನೂನು ಕ್ರಮ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿರುವ ಸಂಬಂಧಿತ ವಿಡಿಯೋಗಳ ತೆರವಿಗೆ ಮುಂದಿನ ಹಂತದ ಕ್ರಮಗಳತ್ತ ಸರ್ಕಾರ ಗಮನ ಹರಿಸಿದೆ.

English Summary▼

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories