ಅಮೆರಿಕದಲ್ಲಿ ಬೆಂಗಳೂರು ಮೂಲದ ಕರ್ನಾಟಕ ವಿದ್ಯಾರ್ಥಿ ನಾಪತ್ತೆ; ವಿದೇಶಾಂಗ ಸಚಿವಾಲಯಕ್ಕೆ ಪತ್ರ
ಅಮೆರಿಕದ ಕ್ಯಾಲಿಫೋರ್ನಿಯಾದ ಬರ್ಕ್ಲಿಯಲ್ಲಿ ಎಂ.ಎಸ್ಸಿ ಓದುತ್ತಿದ್ದ 22 ವರ್ಷದ ಕನ್ನಡಿಗ ವಿದ್ಯಾರ್ಥಿ ಸಾಕೇತ್ ಶ್ರೀನಿವಾಸಯ್ಯ ಫೆಬ್ರವರಿ 12ರಿಂದ ಕಾಣೆಯಾಗಿದ್ದಾರೆ. ಅವರ ಪತ್ತೆಗೆ ಕರ್ನಾಟಕ ಮುಖ್ಯ ಕಾರ್ಯದರ್ಶಿ ವಿದೇಶಾಂಗ ಸಚಿವಾಲಯಕ್ಕೆ ತುರ್ತು ನೆರವು ಕೋರಿದ್ದಾರೆ.

- ಅಮೆರಿಕ ಬರ್ಕ್ಲಿಯಲ್ಲಿ ಕನ್ನಡಿಗ ಸಾಕೇತ್ ನಾಪತ್ತೆ
- ವಿದೇಶಾಂಗ ಸಚಿವಾಲಯಕ್ಕೆ ಪತ್ರ
- ಸ್ಥಳೀಯ ಪೊಲೀಸರ ಜೊತೆ ಸಮನ್ವಯಕ್ಕೆ ಮನವಿ
ಬೆಂಗಳೂರು: ಬೆಂಗಳೂರು ಮೂಲದ ಯುವ ವಿದ್ಯಾರ್ಥಿಯೊಬ್ಬ ಅಮೆರಿಕದಲ್ಲಿ ಕಾಣೆಯಾಗಿರುವ ಸುದ್ದಿ ರಾಜ್ಯದಾದ್ಯಂತ ಆತಂಕ ಮೂಡಿಸಿದೆ. ಕ್ಯಾಲಿಫೋರ್ನಿಯಾದ ಬರ್ಕ್ಲಿಯಲ್ಲಿ ಉನ್ನತ ಶಿಕ್ಷಣ ಪಡೆಯುತ್ತಿದ್ದ ಸಾಕೇತ್ ಶ್ರೀನಿವಾಸಯ್ಯ ಫೆಬ್ರವರಿ 12ರ ಬೆಳಗ್ಗಿನಿಂದ ಸಂಪರ್ಕಕ್ಕೆ ಸಿಗದೇ ಇದ್ದಾರೆ ಎಂದು ಕುಟುಂಬದವರು ತಿಳಿಸಿದ್ದಾರೆ.
ತುರ್ತು ಮಧ್ಯಪ್ರವೇಶಕ್ಕೆ ಮನವಿ
ಈ ಹಿನ್ನೆಲೆಯಲ್ಲಿ ಕರ್ನಾಟಕದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ ವಿಕ್ರಮ್ ಮಿಸ್ರಿಗೆ ಪತ್ರ ಬರೆದು ತಕ್ಷಣದ ಕ್ರಮಕ್ಕೆ ಮನವಿ ಮಾಡಿದ್ದಾರೆ. ಸ್ಯಾನ್ ಫ್ರಾನ್ಸಿಸ್ಕೋದಲ್ಲಿರುವ ಭಾರತದ ಕಾನ್ಸುಲೇಟ್ ಜನರಲ್ ಮೂಲಕ ಸ್ಥಳೀಯ ಕಾನೂನು ಜಾರಿ ಸಂಸ್ಥೆಗಳ ಜೊತೆ ಸಂಪರ್ಕ ಸಾಧಿಸಿ ಸಾಕೇತ್ ಪತ್ತೆಗೆ ಅಗತ್ಯ ನೆರವು ನೀಡುವಂತೆ ಅವರು ವಿನಂತಿಸಿದ್ದಾರೆ.
ಬರ್ಕ್ಲಿ ಪೊಲೀಸರಲ್ಲಿ ದೂರು ದಾಖಲು
22 ವರ್ಷದ ಸಾಕೇತ್ ಪ್ರಸ್ತುತ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ, ಬರ್ಕ್ಲಿಯಲ್ಲಿ ಎಂ.ಎಸ್ಸಿ ವ್ಯಾಸಂಗ ಮಾಡುತ್ತಿದ್ದಾರೆ. ಕಾಣೆಯಾಗಿರುವ ಕುರಿತು ಬರ್ಕ್ಲಿ ಪೊಲೀಸ್ ಇಲಾಖೆಯಲ್ಲಿ ದೂರು ದಾಖಲಾಗಿದ್ದು, ಹುಡುಕಾಟ ಮುಂದುವರಿದಿದೆ. ಆದರೆ ಈವರೆಗೆ ಅವರ ಸುಳಿವು ಸಿಕ್ಕಿಲ್ಲ ಎಂದು ಕುಟುಂಬದವರು ತಿಳಿಸಿದ್ದಾರೆ.
ಮಗನಿಗಾಗಿ ಕಾದು ಕುಳಿತಿರುವ ತಂದೆ ಶ್ರೀನಿವಾಸಯ್ಯ ಅವರು ಮುಖ್ಯಮಂತ್ರಿ ಹಾಗೂ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದು ಸಹಾಯ ಕೋರಿದ್ದಾರೆ. “ಮಗನ ಜೊತೆ ಮಾತನಾಡದೆ ದಿನ ಕಳೆಯುವುದು ತುಂಬ ಕಷ್ಟ,” ಎಂದು ಕುಟುಂಬದವರು ಆಪ್ತರಿಗೆ ಹೇಳಿಕೊಂಡಿದ್ದಾರೆ ಎನ್ನಲಾಗಿದೆ. ಈ ಪ್ರಕರಣದಲ್ಲಿ ತಕ್ಷಣದ ಕ್ರಮಕ್ಕೆ ಒತ್ತಾಯಗಳು ಹೆಚ್ಚಾಗುತ್ತಿವೆ.
ರಾಜ್ಯ ಸರ್ಕಾರವೂ ವಿಷಯದ ಗಂಭೀರತೆಯನ್ನು ಗಮನಿಸಿ ಕೇಂದ್ರದ ನೆರವು ಕೋರಿರುವುದು ಕುಟುಂಬಕ್ಕೆ ಸ್ವಲ್ಪ ಧೈರ್ಯ ನೀಡಿದೆ. ಸಾಕೇತ್ ಸುಕ್ಷಿತವಾಗಿ ಮನೆಗೆ ಮರಳಲಿ ಎಂಬ ಪ್ರಾರ್ಥನೆ ಎಲ್ಲೆಡೆಯಿಂದ ಕೇಳಿಬರುತ್ತಿದೆ.



