ಹಿಜಾಬ್ ನಿರ್ಬಂಧ ಹಿಂಪಡೆದ ಸರ್ಕಾರ, ಜನಿವಾರ, ರುದ್ರಾಕ್ಷಿ ಧಾರಣೆಗೆ ಅವಕಾಶ! ಕೇಸರಿ ಶಾಲುಗೆ ಅನುಮತಿ ಇಲ್ಲ

ಕರ್ನಾಟಕ ಸರ್ಕಾರ ಹಿಜಾಬ್ ನಿರ್ಬಂಧ ಆದೇಶವನ್ನು ಹಿಂಪಡೆದು, ಸಮವಸ್ತ್ರದ ಜೊತೆಗೆ ಹಿಜಾಬ್, ಜನಿವಾರ, ರುದ್ರಾಕ್ಷಿ ಸೇರಿದಂತೆ ಧಾರ್ಮಿಕ ಸಂಕೇತ ಧರಿಸಲು ವಿದ್ಯಾರ್ಥಿಗಳಿಗೆ ಅವಕಾಶ ನೀಡಿದೆ.

2022ರಲ್ಲಿ ರಾಜ್ಯಾದ್ಯಂತ ಭಾರೀ ಚರ್ಚೆ ಮತ್ತು ವಿವಾದಕ್ಕೆ ಕಾರಣವಾಗಿದ್ದ ಹಿಜಾಬ್ ಹಾಗೂ ಸಮವಸ್ತ್ರ ನಿಯಮದ ಕುರಿತಂತೆ ಕರ್ನಾಟಕ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಹಿಂದಿನ ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ಹಿಜಾಬ್ ನಿರ್ಬಂಧ ಆದೇಶವನ್ನು ಕಾಂಗ್ರೆಸ್ ಸರ್ಕಾರ ಅಧಿಕೃತವಾಗಿ ಹಿಂಪಡೆದಿದೆ.

ಹೊಸ ಅಧಿಸೂಚನೆ ಪ್ರಕಾರ, ವಿದ್ಯಾರ್ಥಿಗಳು ನಿಗದಿತ ಸಮವಸ್ತ್ರದ ಜೊತೆಗೆ ತಮ್ಮ ಧಾರ್ಮಿಕ ಹಾಗೂ ಸಾಂಪ್ರದಾಯಿಕ ಸಂಕೇತಗಳನ್ನು ಧರಿಸಲು ಅವಕಾಶ ಕಲ್ಪಿಸಲಾಗಿದೆ. ಹಿಜಾಬ್, ಜನಿವಾರ, ಶಿವಧಾರ, ರುದ್ರಾಕ್ಷಿ ಹಾಗೂ ಪೇಟ ಧರಿಸಲು ಯಾವುದೇ ಅಡ್ಡಿಯಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

ಶಿಕ್ಷಣ ಸಚಿವ ಮಧು ಬಂಗಾರಪ್ಪ ಈ ಕುರಿತು ಮಾಹಿತಿ ನೀಡಿದ್ದು, ಮುಂದಿನ ಶೈಕ್ಷಣಿಕ ವರ್ಷದಿಂದಲೇ ಈ ನಿಯಮ ಜಾರಿಗೆ ಬರಲಿದೆ ಎಂದು ತಿಳಿಸಿದ್ದಾರೆ. ಮುಸ್ಲಿಂ ಸಮುದಾಯ ಸೇರಿದಂತೆ ವಿವಿಧ ವಲಯಗಳಿಂದ ಬಂದ ಬೇಡಿಕೆಗಳನ್ನು ಪರಿಗಣಿಸಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು.

ಆದರೆ, ಕೇಸರಿ ಶಾಲು ಧಾರ್ಮಿಕ ಆಚರಣೆಯ ಭಾಗವಲ್ಲ ಎಂದು ಪರಿಗಣಿಸಿರುವ ಸರ್ಕಾರ, ಅದನ್ನು ಧರಿಸಲು ಅನುಮತಿ ನೀಡಿಲ್ಲ. ಈ ವಿಚಾರ ಮತ್ತೊಮ್ಮೆ ರಾಜಕೀಯ ಚರ್ಚೆಗೆ ಕಾರಣವಾಗುವ ಸಾಧ್ಯತೆ ಇದೆ.

ಸರ್ಕಾರ ಹೊರಡಿಸಿರುವ ಆದೇಶದಲ್ಲಿ ಶಾಲಾ ಶಿಸ್ತು ಮತ್ತು ಬೋಧನಾ ಪ್ರಕ್ರಿಯೆಗೆ ಯಾವುದೇ ಧಕ್ಕೆಯಾಗಬಾರದು ಎಂಬುದನ್ನು ವಿಶೇಷವಾಗಿ ಉಲ್ಲೇಖಿಸಲಾಗಿದೆ. ವಿದ್ಯಾರ್ಥಿಗಳ ಗುರುತಿನ ಪರಿಶೀಲನೆ, ಸುರಕ್ಷತೆ ಹಾಗೂ ಶಿಕ್ಷಣ ವ್ಯವಸ್ಥೆಗೆ ತೊಂದರೆ ಉಂಟಾಗದಂತೆ ಈ ಸಂಕೇತಗಳನ್ನು ಧರಿಸಬಹುದು ಎಂದು ಸೂಚಿಸಲಾಗಿದೆ.

ಯಾವುದೇ ವಿದ್ಯಾರ್ಥಿಯನ್ನು ಧಾರ್ಮಿಕ ಸಂಕೇತ ಧರಿಸುವಂತೆ ಅಥವಾ ಧರಿಸಬಾರದು ಎಂದು ಒತ್ತಾಯಿಸುವಂತಿಲ್ಲ ಎಂದು ಸರ್ಕಾರ ಕಟ್ಟುನಿಟ್ಟಾಗಿ ಹೇಳಿದೆ. ಕೇವಲ ಹಿಜಾಬ್ ಅಥವಾ ಇತರೆ ಸಾಂಪ್ರದಾಯಿಕ ಸಂಕೇತ ಧರಿಸಿದ್ದಾರೆ ಎಂಬ ಕಾರಣಕ್ಕೆ ಶಾಲೆ ಅಥವಾ ಪರೀಕ್ಷಾ ಕೊಠಡಿಗೆ ಪ್ರವೇಶ ನಿರಾಕರಿಸುವಂತಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

ಸೌಹಾರ್ದತೆ ಮತ್ತು ಸಮಾನತೆಯ ಮನೋಭಾವ ಬೆಳೆಸಬೇಕೆಂದು ಸರ್ಕಾರ ಶಿಕ್ಷಣ ಸಂಸ್ಥೆಗಳಿಗೆ ಸೂಚನೆ ನೀಡಿದೆ. ಬಸವಣ್ಣನವರ “ಇವ ನಮ್ಮವ” ತತ್ವವನ್ನು ಉಲ್ಲೇಖಿಸಿರುವ ಸರ್ಕಾರ, ಎಲ್ಲ ವಿದ್ಯಾರ್ಥಿಗಳನ್ನು ಸಮಾನವಾಗಿ ಕಾಣುವ ವಾತಾವರಣ ನಿರ್ಮಿಸಲು ಎಸ್‌ಡಿಎಂಸಿ ಸಮಿತಿಗಳಿಗೆ ಸೂಚನೆ ನೀಡಿದೆ.

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories