ತುಮಕೂರು ಶಿರಾ ಬಳಿ ಲಾರಿಗೆ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ: ಚಾಲಕ ಸೇರಿ ಇಬ್ಬರು ಸಾವು

ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕಿನ ತಾವರೆಕೆರೆ ಬಳಿ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಟೈರ್ ಬ್ಲಾಸ್ಟ್ ಆಗಿ ನಿಂತಿದ್ದ ಲಾರಿಗೆ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ ಹೊಡೆದು ಚಾಲಕ ಸೇರಿ ಇಬ್ಬರು ಸಾವನ್ನಪ್ಪಿದ್ದು, 33 ಪ್ರಯಾಣಿಕರಿಗೆ ಗಾಯಗಳಾಗಿವೆ.

ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕಿನ ತಾವರೆಕೆರೆ ಬಳಿ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಟೈರ್ ಬ್ಲಾಸ್ಟ್ ಆಗಿ ರಸ್ತೆಯ ಮಧ್ಯೆ ನಿಂತಿದ್ದ ಲಾರಿಗೆ ವೇಗವಾಗಿ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸಾವನ್ನಪ್ಪಿದ್ದಾರೆ.

ಈ ಅಪಘಾತದಲ್ಲಿ ಬಸ್ ಚಾಲಕ ಶ್ರೀಕಾಂತ್ (35) ಮತ್ತು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಮೂಲದ ರೇಣುಕಮ್ಮ (59) ಮೃತಪಟ್ಟಿದ್ದಾರೆ. ಘಟನೆ ಸ್ಥಳದಲ್ಲೇ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಹಲವಾರು ಪ್ರಯಾಣಿಕರು ಗಾಯಗೊಂಡಿದ್ದಾರೆ.

33 ಪ್ರಯಾಣಿಕರಿಗೆ ಗಾಯ

ಅಪಘಾತದ ಪರಿಣಾಮವಾಗಿ ಬಸ್‌ನಲ್ಲಿದ್ದ 33 ಪ್ರಯಾಣಿಕರಿಗೆ ಗಾಯಗಳಾಗಿವೆ. ಗಾಯಾಳುಗಳನ್ನು ತಕ್ಷಣವೇ ಸಮೀಪದ ತಾಲ್ಲೂಕು ಆಸ್ಪತ್ರೆ ಹಾಗೂ ಜಿಲ್ಲಾ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಗಿದೆ.

ಘಟನೆಯ ನಂತರ ಪೊಲೀಸರು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ಮೃತರ ಕುಟುಂಬದವರಿಗೆ ಮಾಹಿತಿ ನೀಡಿದ್ದಾರೆ. ಅಪಘಾತದ ಕುರಿತು ತಾವರೆಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಟೈರ್ ಬ್ಲಾಸ್ಟ್‌ನಿಂದ ನಿಂತ ಲಾರಿ

ಪ್ರಾಥಮಿಕ ಮಾಹಿತಿಯ ಪ್ರಕಾರ, ಹೆದ್ದಾರಿಯಲ್ಲಿ ಸಾಗುತ್ತಿದ್ದ ಲಾರಿಯ ಟೈರ್ ಏಕಾಏಕಿ ಸ್ಫೋಟಗೊಂಡು ವಾಹನ ರಸ್ತೆಯಲ್ಲೇ ನಿಂತಿತ್ತು. ಈ ವೇಳೆ ಹಿಂದಿನಿಂದ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಚಾಲಕನಿಗೆ ಸಮಯಕ್ಕೆ ಬ್ರೇಕ್ ಹಾಕಲು ಸಾಧ್ಯವಾಗದೇ ಲಾರಿಗೆ ಡಿಕ್ಕಿ ಹೊಡೆದಿದೆ ಎಂದು ತಿಳಿದುಬಂದಿದೆ.

ಈ ಅಪಘಾತದಿಂದ ಕೆಲಕಾಲ ಹೆದ್ದಾರಿಯಲ್ಲಿ ಸಂಚಾರವೂ ಅಸ್ತವ್ಯಸ್ತಗೊಂಡಿತ್ತು. ನಂತರ ಪೊಲೀಸರು ಮತ್ತು ಸ್ಥಳೀಯರು ಸೇರಿ ವಾಹನಗಳನ್ನು ತೆರವುಗೊಳಿಸಿ ಸಂಚಾರವನ್ನು ಪುನಃ ಆರಂಭಿಸಿದರು.

ಘಟನೆಯನ್ನು ಕಣ್ಣಾರೆ ಕಂಡ 15 ವರ್ಷದ ಬಾಲಕ ದಿಗಂತ್ ಘಟನೆಯ ಬಗ್ಗೆ ವಿವರಿಸಿದ್ದಾನೆ. “ಬಸ್ ವೇಗವಾಗಿ ಸಾಗುತ್ತಿತ್ತು. ಮುಂದೆ ಲಾರಿ ನಿಂತಿತ್ತು. ಬ್ರೇಕ್ ಹಾಕುವಷ್ಟರಲ್ಲಿ ಬಸ್ ಲಾರಿಗೆ ಡಿಕ್ಕಿ ಹೊಡೆದಿತ್ತು,” ಎಂದು ಆತ ಹೇಳಿದ್ದಾನೆ.

ತಾನು ಬಸ್‌ನ ಕೊನೆಯ ಸೀಟಿನಲ್ಲಿ ಕುಳಿತಿದ್ದ ಕಾರಣ ಗಂಭೀರ ಗಾಯವಾಗಲಿಲ್ಲ ಎಂದು ತಿಳಿಸಿದ ಬಾಲಕ, ತನ್ನ ಅಜ್ಜಿ, ತಾತ ಮತ್ತು ತಮ್ಮನಿಗೆ ಗಾಯಗಳಾಗಿವೆ ಎಂದು ಹೇಳಿದ್ದಾನೆ. ಅಪಘಾತದ ನಂತರ ಜನರು ತುರ್ತಾಗಿ ಸಹಾಯ ಮಾಡಿ ಆಂಬ್ಯುಲೆನ್ಸ್‌ಗೆ ಕರೆ ಮಾಡಿದರೆಂದು ಆತ ವಿವರಿಸಿದ್ದಾನೆ.

Related Stories