ಫ್ರೀ ಬಸ್ ಗದ್ದಲಕ್ಕೆ ಬ್ರೇಕ್: 115 ಹೊಸ ಕೆಎಸ್‌ಆರ್‌ಟಿಸಿ ಬಸ್‌ಗಳ ಸಂಚಾರ ಆರಂಭ
ಶಕ್ತಿ ಯೋಜನೆ ಬಳಿಕ ಬಸ್‌ಗಳಲ್ಲಿ ಹೆಚ್ಚಿದ ದಟ್ಟಣೆ ಸಮಸ್ಯೆಗೆ ಪರಿಹಾರವಾಗಿ ಕೆಎಸ್‌ಆರ್‌ಟಿಸಿ 115 ಹೊಸ ಬಸ್‌ಗಳನ್ನು ಸೇವೆಗೆ ಸೇರಿಸಿದೆ. ಸಾಮಾನ್ಯ ಹಾಗೂ ಪಲ್ಲಕ್ಕಿ ಸ್ಲೀಪರ್ ಬಸ್‌ಗಳು ಪ್ರಮುಖ ಮಾರ್ಗಗಳಲ್ಲಿ ಸಂಚರಿಸಿ ಪ್ರಯಾಣಿಕರಿಗೆ ಹೆಚ್ಚಿನ ಸೌಲಭ್ಯ ಒದಗಿಸಲಿವೆ.

ಬೆಂಗಳೂರು (Bengaluru): ರಾಜ್ಯದಲ್ಲಿ ಮಹಿಳೆಯರಿಗಾಗಿ ಜಾರಿಗೆ ತಂದಿರುವ ಶಕ್ತಿ ಯೋಜನೆ ನಂತರ ಸಾರ್ವಜನಿಕ ಬಸ್‌ಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ವಿಶೇಷವಾಗಿ ನಗರ ಹಾಗೂ ದೂರದ ಮಾರ್ಗಗಳಲ್ಲಿ ಬಸ್‌ಗಳು ತುಂಬಿ ತುಳುಕುತ್ತಿರುವುದು ಸಾಮಾನ್ಯ ದೃಶ್ಯವಾಗಿದೆ. ಕೆಲವೊಮ್ಮೆ ನಿಲ್ಲಲು ಸಹ ಸ್ಥಳವಿಲ್ಲದ ಪರಿಸ್ಥಿತಿ ಉಂಟಾಗುತ್ತಿರುವುದರಿಂದ ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದರು.
ಈ ಹಿನ್ನೆಲೆದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ದಟ್ಟಣೆ ಸಮಸ್ಯೆಯನ್ನು ಕಡಿಮೆ ಮಾಡಲು ಹೊಸ ನಿರ್ಧಾರ ಕೈಗೊಂಡಿದೆ. ಪ್ರಯಾಣಿಕರ ಸೌಲಭ್ಯವನ್ನು ಗಮನದಲ್ಲಿಟ್ಟುಕೊಂಡು ಒಟ್ಟು 115 ಹೊಸ ಬಸ್‌ಗಳನ್ನು ಸೇವೆಗೆ ಸೇರಿಸಲಾಗಿದೆ.
45 ಸಾಮಾನ್ಯ ಬಸ್, 70 ಪಲ್ಲಕ್ಕಿ ಸ್ಲೀಪರ್ ಬಸ್
ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ಸಾರಿಗೆ ಸಚಿವ ರಾಮಲಿಂಗರೆಡ್ಡಿ ಅವರು ಈ ಹೊಸ ಬಸ್‌ಗಳಿಗೆ ಹಸಿರು ನಿಶಾನೆ ತೋರಿದರು. ಸೇವೆಗೆ ಸೇರಿದ 115 ಬಸ್‌ಗಳಲ್ಲಿ 45 ಸಾಮಾನ್ಯ ಬಸ್‌ಗಳು ಹಾಗೂ 70 ಪಲ್ಲಕ್ಕಿ ಸ್ಲೀಪರ್ ಬಸ್‌ಗಳು ಸೇರಿವೆ.
ಸಾಮಾನ್ಯ ಬಸ್‌ಗಳಲ್ಲಿ ಮಹಿಳೆಯರು ತಮ್ಮ ಆಧಾರ್ ಕಾರ್ಡ್ ತೋರಿಸಿ ಉಚಿತವಾಗಿ ಪ್ರಯಾಣ ಮಾಡಬಹುದು. ಆದರೆ ಪಲ್ಲಕ್ಕಿ ಸ್ಲೀಪರ್ ಬಸ್‌ಗಳು ಪ್ರೀಮಿಯಂ ಸೇವೆಯಾಗಿರುವುದರಿಂದ ಅದರಲ್ಲಿ ಮಹಿಳೆಯರೂ ಸಹ ಟಿಕೆಟ್ ಪಡೆದು ಪ್ರಯಾಣಿಸಬೇಕು.
ಪಲ್ಲಕ್ಕಿ ಬಸ್‌ಗಳಲ್ಲಿ ಹೊಸ ಸುರಕ್ಷತಾ ವ್ಯವಸ್ಥೆ
ಹೊಸ ಮಾದರಿಯ ಪಲ್ಲಕ್ಕಿ ಸ್ಲೀಪರ್ ಬಸ್‌ಗಳನ್ನು ಪ್ರಯಾಣಿಕರ ಸುರಕ್ಷತೆ ಮತ್ತು ಆರಾಮದಾಯಕ ಪ್ರಯಾಣವನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸಗೊಳಿಸಲಾಗಿದೆ. ಹೈಟೆಕ್ ಸೀಟ್ ವ್ಯವಸ್ಥೆ ಸೇರಿದಂತೆ ಹಲವು ಆಧುನಿಕ ಸೌಲಭ್ಯಗಳನ್ನು ಒಳಗೊಂಡಿವೆ.
ಇವುಗಳಲ್ಲಿನ ಪ್ರಮುಖ ವಿಶೇಷತೆ ಎಂದರೆ ಐದು ಬಾಗಿಲುಗಳ ಸುರಕ್ಷತಾ ವ್ಯವಸ್ಥೆ. ಸಾಮಾನ್ಯವಾಗಿ ಬಸ್‌ಗಳಲ್ಲಿ ಎರಡು ಬಾಗಿಲು ಮತ್ತು ಒಂದು ಎಮರ್ಜೆನ್ಸಿ ಎಕ್ಸಿಟ್ ಮಾತ್ರ ಇರುತ್ತದೆ. ಆದರೆ ಈ ಹೊಸ ಬಸ್‌ಗಳಲ್ಲಿ ಮೇಲ್ಭಾಗದಲ್ಲೂ ಎರಡು ಹೆಚ್ಚುವರಿ ಬಾಗಿಲುಗಳನ್ನು ಅಳವಡಿಸಲಾಗಿದ್ದು, ತುರ್ತು ಸಂದರ್ಭಗಳಲ್ಲಿ ಪ್ರಯಾಣಿಕರು ಸುರಕ್ಷಿತವಾಗಿ ಹೊರಬರಲು ಸಹಾಯವಾಗುತ್ತದೆ.
ಹೊಸ ಬಸ್‌ಗಳು ಯಾವ ಮಾರ್ಗಗಳಲ್ಲಿ ಸಂಚರಿಸಲಿದೆ?
ಬೆಂಗಳೂರಿನಿಂದ ಆರಂಭವಾಗುವ ಈ ಹೊಸ ಪಲ್ಲಕ್ಕಿ ಬಸ್‌ಗಳು ರಾಜ್ಯದ ಹಲವು ಪ್ರಮುಖ ನಗರಗಳು ಮತ್ತು ಧಾರ್ಮಿಕ ಕೇಂದ್ರಗಳನ್ನು ಸಂಪರ್ಕಿಸಲಿವೆ.
ಉಡುಪಿ, ಮಂಗಳೂರು, ಮೈಸೂರು, ಧರ್ಮಸ್ಥಳ, ಶೃಂಗೇರಿ, ಹೊರನಾಡು, ಆಗುಂಬೆ, ಚಿಕ್ಕಮಗಳೂರು, ದಾವಣಗೆರೆ, ಚಿತ್ರದುರ್ಗ, ಹಂಪಿ, ರಾಯಚೂರು, ಜಮಖಂಡಿ, ಪುತ್ತೂರು, ಕಾಣಿಯೂರು, ಕುಕ್ಕೆ ಸುಬ್ರಹ್ಮಣ್ಯ ಸೇರಿದಂತೆ ಅನೇಕ ಸ್ಥಳಗಳಿಗೆ ಈ ಬಸ್‌ಗಳು ಸಂಚರಿಸಲಿವೆ.
ಇದಲ್ಲದೆ ಹೊರರಾಜ್ಯಗಳಾದ ಹೈದರಾಬಾದ್, ಚೆನ್ನೈ, ಪಣಜಿ, ಪಾಂಡಿಚೇರಿ, ಮಧುರೈ, ಕೊಜಿಕ್ಕೋಡ್, ಮುನ್ನಾರ್, ತಂಜಾವೂರು, ಎರ್ನಾಕುಲಂ ಮುಂತಾದ ಪ್ರಮುಖ ನಗರಗಳಿಗೂ ಈ ಸೇವೆ ವಿಸ್ತರಿಸಲಾಗಿದೆ. ದೀರ್ಘ ದೂರ ಪ್ರಯಾಣ ಮಾಡುವವರಿಗೆ ಇದು ಹೆಚ್ಚಿನ ಅನುಕೂಲ ಒದಗಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹೊಸ ಬಸ್‌ಗಳು ಸೇವೆಗೆ ಸೇರಿರುವುದರಿಂದ ಮುಂದಿನ ದಿನಗಳಲ್ಲಿ ಬಸ್ ದಟ್ಟಣೆ ಸ್ವಲ್ಪ ಮಟ್ಟಿಗೆ ಕಡಿಮೆಯಾಗುವ ನಿರೀಕ್ಷೆ ವ್ಯಕ್ತವಾಗಿದೆ.



