ಮದುವೆಗೆ ಒಪ್ಪದ ಯುವತಿ ಕುಟುಂಬ, ಕಣ್ಣಿಗೆ ಕಾರದ ಪುಡಿ ಎರಚಿ ಹಲ್ಲೆ

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಜೋಡಕುರಳಿ ಗ್ರಾಮದಲ್ಲಿ ಮದುವೆಗೆ ಒಪ್ಪಲಿಲ್ಲವೆಂಬ ಕಾರಣಕ್ಕೆ ಕೋಪಗೊಂಡ ಯುವಕ ಮನೆಗೆ ನುಗ್ಗಿ ಯುವತಿ ಹಾಗೂ ಆಕೆಯ ತಂದೆ-ತಾಯಿಯ ಕಣ್ಣಿಗೆ ಕಾರದ ಪುಡಿ ಚಲ್ಲಿ ದಾಳಿ ಮಾಡಿದ ಘಟನೆ ನಡೆದಿದೆ.

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಜೋಡಕುರಳಿ ಗ್ರಾಮದಲ್ಲಿ ಮದುವೆ ವಿಚಾರದಿಂದ ಆರಂಭವಾದ ವಿವಾದ ಗಂಭೀರ ಘಟನೆಗೆ ಕಾರಣವಾಗಿದೆ. ಯುವತಿಯ ಕುಟುಂಬ ಮದುವೆಗೆ ಒಪ್ಪಲಿಲ್ಲವೆಂಬ ಕಾರಣಕ್ಕೆ ಕೋಪಗೊಂಡ ವ್ಯಕ್ತಿ ಮನೆಗೆ ನುಗ್ಗಿ ದಾಳಿ ನಡೆಸಿದ್ದಾನೆ ಎಂಬ ಆರೋಪ ಕೇಳಿಬಂದಿದೆ.

ಭೀರಪ್ಪ ರಾಮಪ್ಪ ಎಂಬಾತ ವಿದ್ಯಾಶ್ರೀ ಎಂಬ ಯುವತಿಯನ್ನು ಮದುವೆಯಾಗಲು ಬಯಸುತ್ತಿದ್ದನು. ಈ ಬಗ್ಗೆ ಹಲವಾರು ಬಾರಿ ಯುವತಿಯ ತಂದೆ-ತಾಯಿಯ ಬಳಿ ಮಾತುಕತೆ ನಡೆಸಿದ್ದಾನೆ ಎಂದು ಹೇಳಲಾಗುತ್ತಿದೆ. ಆದರೆ ಯುವತಿಯ ಕುಟುಂಬ ಅವನ ನಡೆ-ನುಡಿಗಳು ಸರಿಯಾಗಿಲ್ಲವೆಂದು ಭಾವಿಸಿ ಮದುವೆಗೆ ಒಪ್ಪಿರಲಿಲ್ಲ.

ಮನೆಗೆ ನುಗ್ಗಿ ದಾಳಿ

ಮದುವೆ ವಿಚಾರದಲ್ಲಿ ನಿರಾಕರಣೆ ಎದುರಾದ ನಂತರ ಆರೋಪಿತನು ಯುವತಿಯ ಕುಟುಂಬದ ಮೇಲೆ ಕೋಪದಿಂದ ಮಂಗಳವಾರ ರಾತ್ರಿ ಯುವತಿಯ ಮನೆಯೊಳಗೆ ನುಗ್ಗಿ ದಾಳಿ ನಡೆಸಿದ್ದಾನೆ.

ಮೊದಲು ಮನೆಯಲ್ಲಿದ್ದವರ ಕಣ್ಣಿಗೆ ಕಾರದ ಪುಡಿ ಎರಚಿ, ಬಳಿಕ ಕಡ್ಡಿಗಳಿಂದ ಹೊಡೆದು ಹಲ್ಲೆ ಮಾಡಿದ ನಂತರ ಅಲ್ಲಿಂದ ಪರಾರಿಯಾಗಿದ್ದಾನೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಗಾಯಗೊಂಡ ಮೂವರು ಆಸ್ಪತ್ರೆಗೆ

ದಾಳಿಯಿಂದ ಯುವತಿ ವಿದ್ಯಾಶ್ರೀ ಹಾಗೂ ಆಕೆಯ ತಂದೆ-ತಾಯಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಸ್ಥಳೀಯರು ತಕ್ಷಣವೇ ಅವರನ್ನು ರಕ್ಷಿಸಿ ಚಿಕ್ಕೋಡಿ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ. ವೈದ್ಯರು ಮೂವರಿಗೆ ಚಿಕಿತ್ಸೆ ನೀಡುತ್ತಿದ್ದಾರೆ.

ಆರೋಪಿಗಾಗಿ ಪೊಲೀಸರ ಶೋಧ

ಘಟನೆ ಬಗ್ಗೆ ಮಾಹಿತಿ ತಿಳಿದ ನಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿತ ಭೀರಪ್ಪ ರಾಮಪ್ಪನಿಗಾಗಿ ಶೋಧ ಕಾರ್ಯಾಚರಣೆ ಆರಂಭಿಸಲಾಗಿದೆ.

ಪೊಲೀಸರು ಆರೋಪಿಯನ್ನು ಶೀಘ್ರದಲ್ಲೇ ಬಂಧಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರೆದಿದೆ.

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories