ಬೆಳಗಾವಿ: ತಾಯಿ ಅಗಲಿದ ನೋವು ಸಹಿಸಲಾಗದೆ ಬಾವಿಗೆ ಜಿಗಿದ ಮಗ

ಬೆಳಗಾವಿ ತಾಲೂಕಿನ ಅಂಬೇವಾಡಿ ಗ್ರಾಮದಲ್ಲಿ ತಾಯಿ ನಿಧನದಿಂದ ಮನನೊಂದು 41 ವರ್ಷದ ವ್ಯಕ್ತಿ ಬಾವಿಗೆ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ್ದು, ಸ್ಥಳೀಯರು ಹಾಗೂ ರೆಸ್ಕ್ಯೂ ತಂಡ ಸಮಯಕ್ಕೆ ತಲುಪಿ ರಕ್ಷಿಸಿದ್ದಾರೆ.

  • ಬೆಳಗಾವಿ ಆತ್ಮಹತ್ಯೆ ಯತ್ನ ಪ್ರಕರಣ
  • ತಾಯಿ ನಿಧನದಿಂದ ಮನನೊಂದ ಮಗ
  • ರೆಸ್ಕ್ಯೂ ತಂಡದಿಂದ ಪ್ರಾಣ ರಕ್ಷಣೆ

ಬೆಳಗಾವಿ (Belagavi): ತಾಯಿ ಅಗಲಿದ ನೋವನ್ನು ಸಹಿಸಲಾಗದೆ ವ್ಯಕ್ತಿಯೊಬ್ಬರು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬೆಳಗಾವಿ ತಾಲೂಕಿನ ಅಂಬೇವಾಡಿ ಗ್ರಾಮದಲ್ಲಿ ನಡೆದಿದೆ. 41 ವರ್ಷದ ಬಾಬು ಪಾಂಡು ಸಾಂಬರೇಕರ ಅವರು ಗ್ರಾಮದಲ್ಲಿರುವ ಬಾವಿಗೆ ಜಿಗಿದು ಆತ್ಮಹತ್ಯೆಗೆ ಮುಂದಾಗಿದ್ದರು.

ಬಾವಿಗೆ ಜಿಗಿದ ತಕ್ಷಣವೇ ಒಳಭಾಗದಲ್ಲಿದ್ದ ಕೇಬಲ್‌ಗೆ ಸಿಲುಕಿಕೊಂಡಿದ್ದರಿಂದ ಅವರು ಸಂಪೂರ್ಣವಾಗಿ ನೀರಿಗೆ ಮುಳುಗದೆ ಉಳಿದಿದ್ದಾರೆ. ಈ ಸಂದರ್ಭ ಗಮನಿಸಿದ ಸ್ಥಳೀಯರು ತಕ್ಷಣ ಸ್ಪಂದಿಸಿ ಸಹಾಯಕ್ಕಾಗಿ ಸಂಪರ್ಕಿಸಿದರು. ಮಾಹಿತಿ ಸಿಕ್ಕ ತಕ್ಷಣ ಹೆಲ್ಫ್ ಲೈನ್ ಎಮರ್ಜೆನ್ಸಿ ರೆಸ್ಕ್ಯೂ ಫೌಂಡೇಶನ್ ತಂಡ ಸ್ಥಳಕ್ಕೆ ದೌಡಾಯಿಸಿತು.

ತಂಡದ ಮುಖ್ಯಸ್ಥ ಬಸವರಾಜ್ ಹಿರೇಮಠ ಅವರ ನೇತೃತ್ವದಲ್ಲಿ ರಕ್ಷಕರು ಬಾವಿಯೊಳಗೆ ಇಳಿದು ಬಾಬು ಅವರನ್ನು ಸುರಕ್ಷಿತವಾಗಿ ಮೇಲಕ್ಕೆತ್ತಿದರು. ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸಲಾಯಿತು.

ಸುಮಾರು 15 ದಿನಗಳ ಹಿಂದೆ ಅನಾರೋಗ್ಯದಿಂದ ತಾಯಿ ನಿಧನರಾದ ಹಿನ್ನೆಲೆಯಲ್ಲಿ ಬಾಬು ಅವರು ಖಿನ್ನತೆಗೆ ಒಳಗಾಗಿದ್ದರು ಎಂದು ಕುಟುಂಬದವರು ತಿಳಿಸಿದ್ದಾರೆ. ಈ ಘಟನೆ ಗ್ರಾಮಸ್ಥರ ಮನಸ್ಸು ಕಲುಕಿದ್ದು, ದುಃಖದ ಸಂದರ್ಭದಲ್ಲಿ ಮಾನಸಿಕ ಧೈರ್ಯ ತುಂಬುವ ಅಗತ್ಯವಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories