Bidar: ಘೋರ ದುರಂತ; ಬೈಕ್ ಸವಾರನ ಕುತ್ತಿಗೆ ಸೀಳಿ ಪ್ರಾಣ ಪಡೆದ ಗಾಳಿಪಟ ದಾರ
ಸಂಕ್ರಾಂತಿ ಹಬ್ಬಕ್ಕೆ ಮಗಳನ್ನು ಕರೆ ತರಲು ಬೈಕ್ನಲ್ಲಿ ತೆರಳುತ್ತಿದ್ದ ತಂದೆಯ ಕುತ್ತಿಗೆಗೆ ಮಾಂಜಾ ದಾರ ಸಿಲುಕಿ ಬೀದರ್ ಜಿಲ್ಲೆಯಲ್ಲಿ ಹೃದಯವಿದ್ರಾವಕ ದುರಂತ ಸಂಭವಿಸಿದೆ

- ಮಾಂಜಾ ದಾರಕ್ಕೆ ಬಲಿಯಾದ ಬೈಕ್ ಸವಾರ
- ಬೀದರ್ ಜಿಲ್ಲೆಯಲ್ಲಿ ಸಂಕ್ರಾಂತಿ ವೇಳೆ ದುರಂತ
- ಮಗಳಿಗೆ ಕರೆ ಮಾಡಿ ಪ್ರಾಣ ಬಿಟ್ಟ ತಂದೆ
ಕರ್ನಾಟಕ, ಬೀದರ್ (Bidar): ರಾಜ್ಯದಲ್ಲಿ ನಿಷೇಧಿತ ಮಾಂಜಾ ದಾರದಿಂದಾಗುವ (Kite String Death) ಅಪಘಾತಗಳು ಮತ್ತೆ ಆತಂಕ ಹುಟ್ಟಿಸುತ್ತಿವೆ. ಬೀದರ್ ಜಿಲ್ಲೆಯಲ್ಲಿ ನಡೆದ ಈ ಹೃದಯವಿದ್ರಾವಕ ಘಟನೆ ಮೈ ನಡುಗಿಸುವಂತಿದೆ. ಬೈಕ್ನಲ್ಲಿ ತೆರಳುತ್ತಿದ್ದ ವ್ಯಕ್ತಿಯ ಕುತ್ತಿಗೆಗೆ ಗಾಳಿಪಟದ ಮಾಂಜಾ ದಾರ ಸಿಲುಕಿ, ಕತ್ತು ಸೀಳಿ ಪ್ರಾಣ ಕಳೆದುಕೊಂಡಿರುವುದು ಜನರಲ್ಲಿ ಆಘಾತ ಮೂಡಿಸಿದೆ.
ಈ ದುರ್ಘಟನೆ ಬೀದರ್ ಜಿಲ್ಲೆಯ (Karnataka, Bidar Districts) ಚಿಟಗುಪ್ಪ ತಾಲೂಕಿನ ತಾಳಮಡಗಿ ಗ್ರಾಮದ ಸೇತುವೆ ಸಮೀಪ ಸಂಭವಿಸಿದೆ. ಮೃತರನ್ನು ಬಂಬುಳಗಿ ಗ್ರಾಮದ 48 ವರ್ಷದ ಸಜೀವ್ ಕುಮಾರ್ ಹೊಸಮನಿ ಎಂದು ಗುರುತಿಸಲಾಗಿದೆ. ಸಜೀವ್ ಕುಮಾರ್ ಅವರಿಗೆ ಪತ್ನಿ, ಒಬ್ಬ ಪುತ್ರ ಮತ್ತು ಮೂವರು ಪುತ್ರಿಯರು ಇದ್ದಾರೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
ಸಂಕ್ರಾಂತಿಗೆ ಮಗಳನ್ನು ಕರೆ ತರಲು ಹೊರಟಾಗ ದುರಂತ
ಪೊಲೀಸ್ ಮಾಹಿತಿಯಂತೆ, ಹುಮನಾಬಾದ್ ಪಟ್ಟಣದ ವಸತಿ ಶಾಲೆಯಲ್ಲಿ ಓದುತ್ತಿದ್ದ ಮಗಳನ್ನು ಸಂಕ್ರಾಂತಿ ಹಬ್ಬದ ನಿಮಿತ್ತ ಮನೆಗೆ ಕರೆ ತರಲು ಸಜೀವ್ ಕುಮಾರ್ ಬೈಕ್ನಲ್ಲಿ ತೆರಳುತ್ತಿದ್ದರು. ಈ ವೇಳೆ ಅಚಾನಕ್ ಗಾಳಿಪಟದ ಮಾಂಜಾ ದಾರ ಕುತ್ತಿಗೆಗೆ ಸಿಲುಕಿದ್ದು, ತೀವ್ರವಾಗಿ ಕತ್ತು ಕತ್ತರಿಸಿದೆ. ಪರಿಣಾಮವಾಗಿ ಅವರು ಬೈಕ್ನಿಂದ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡರು.
ಇದನ್ನೂ ಓದಿ: ಶಿವಮೊಗ್ಗದಲ್ಲಿ ಕಾರು–ಬಸ್ ಭೀಕರ ಡಿಕ್ಕಿ; ಮೂವರು ಸ್ಥಳದಲ್ಲೇ ಸಾವು
ಕೊನೆಯ ಕ್ಷಣದಲ್ಲಿ ಮಗಳಿಗೆ ಕರೆ
ರಕ್ತದ ಮಡುವಿನಲ್ಲಿ ತೀವ್ರ ನೋವಿನಿಂದ ಒದ್ದಾಡುತ್ತಿದ್ದ ಸಜೀವ್ ಕುಮಾರ್, ಕುತ್ತಿಗೆಗೆ ಬಟ್ಟೆ ಸುತ್ತಿಕೊಂಡು ಮೊಬೈಲ್ ಮೂಲಕ ತಮ್ಮ ಮಗಳಿಗೆ ಕರೆ ಮಾಡಿದ್ದಾರೆ. ಸ್ಥಳೀಯರು ಧಾವಿಸಿ ರಕ್ತಸ್ರಾವ ತಡೆಯಲು ಪ್ರಯತ್ನಿಸಿದರೂ, ಕೆಲವೇ ನಿಮಿಷಗಳಲ್ಲಿ ಅವರು ಕೊನೆಯುಸಿರೆಳೆದರು ಎಂದು ತಿಳಿದುಬಂದಿದೆ.
ಆಂಬ್ಯುಲೆನ್ಸ್ ವಿಳಂಬದ ಆರೋಪ
ಸ್ಥಳೀಯರ ಪ್ರಕಾರ, ತಕ್ಷಣ ಆಂಬ್ಯುಲೆನ್ಸ್ಗೆ ಕರೆ ಮಾಡಲಾಗಿತ್ತು. ಆದರೆ ಅದು ಸಮಯಕ್ಕೆ ಸರಿಯಾಗಿ ಬಾರದ ಕಾರಣ ಸಜೀವ್ ಕುಮಾರ್ ಅವರನ್ನು ಆಸ್ಪತ್ರೆಗೆ ಸಾಗಿಸಲು ಸಾಧ್ಯವಾಗಲಿಲ್ಲ. ಆಂಬ್ಯುಲೆನ್ಸ್ ವಿಳಂಬವೇ ಸಾವಿಗೆ ಕಾರಣ ಎಂದು ಕುಟುಂಬಸ್ಥರು ಹಾಗೂ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಮನ್ನಾ ಎಖೆಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ಮುಂದುವರಿಸಿದ್ದಾರೆ. ಘಟನಾ ಸ್ಥಳದಲ್ಲಿ ಮಾಂಜಾ ದಾರ ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಮಾಂಜಾ ದಾರ ಬಳಕೆಯ ವಿರುದ್ಧ ಕಠಿಣ ಕ್ರಮಕ್ಕೆ ಸ್ಥಳೀಯರು ಒತ್ತಾಯಿಸಿದ್ದಾರೆ.






