ಬೆಂಗಳೂರು ಮಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಚಾರ ಆರಂಭ!
ಕರಾವಳಿ ಕರ್ನಾಟಕ ಮತ್ತು ರಾಜಧಾನಿ ನಡುವಿನ ರೈಲು ಸಂಪರ್ಕಕ್ಕೆ ಹೊಸ ವೇಗ ಸಿಕ್ಕಿದೆ. ಮಂಗಳೂರಿನಿಂದ ಬೆಂಗಳೂರಿಗೆ ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್ ಸೇವೆಗೆ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹಸಿರು ನಿಶಾನೆ ತೋರಿಸಿದ್ದಾರೆ.

ಮಂಗಳೂರು: ಮಂಗಳೂರು ಮತ್ತು ಬೆಂಗಳೂರು (Mangaluru – Bengaluru) ನಡುವೆ ಪ್ರಯಾಣಿಸುವವರಿಗೆ ರೈಲ್ವೆ ಇಲಾಖೆ ಹೊಸ ಸೌಲಭ್ಯ ಒದಗಿಸಿದೆ. ಈ ಎರಡು ನಗರಗಳನ್ನು ಸಂಪರ್ಕಿಸುವ ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್ (Vande Bharat Express) ರೈಲು ಸೇವೆಗೆ ಮಂಗಳೂರು ಜಂಕ್ಷನ್‌ನಲ್ಲಿ ಚಾಲನೆ ನೀಡಲಾಗಿದೆ. ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ (Ashwini Vaishnaw) ಅವರು ಹಸಿರು ನಿಶಾನೆ ತೋರಿಸುವ ಮೂಲಕ ರೈಲಿನ ಸಂಚಾರಕ್ಕೆ ಅಧಿಕೃತ ಚಾಲನೆ ನೀಡಿದರು.
ಬೆಂಗಳೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ರೈಲ್ವೆ ಸೇರಿದಂತೆ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡುತ್ತಿದ್ದಂತೆಯೇ, ಮಂಗಳೂರು ಜಂಕ್ಷನ್‌ನಲ್ಲೂ ವಿಶೇಷ ಕಾರ್ಯಕ್ರಮ ನಡೆಯಿತು. ಸಚಿವರು ಹಸಿರು ನಿಶಾನೆ ತೋರಿಸಿದ ಬಳಿಕ ರೈಲು ಬೆಂಗಳೂರಿನತ್ತ ತನ್ನ ಮೊದಲ ಪ್ರಯಾಣ ಆರಂಭಿಸಿತು.
ಕರಾವಳಿ ಭಾಗದಿಂದ ರಾಜಧಾನಿಗೆ ತೆರಳುವ ಪ್ರಯಾಣಿಕರಿಗೆ ಈ ಸೇವೆ ಮಹತ್ವದ್ದಾಗಲಿದೆ. ಆಧುನಿಕ ಸೌಲಭ್ಯಗಳಿರುವ ಈ ರೈಲು ಪ್ರಯಾಣದ ಅನುಭವವನ್ನು ಉತ್ತಮಗೊಳಿಸುವುದರ ಜತೆಗೆ ಮಂಗಳೂರು-ಬೆಂಗಳೂರು ನಡುವಿನ ಸಂಪರ್ಕವನ್ನು ಮತ್ತಷ್ಟು ಬಲಪಡಿಸಲಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.
ಕಾರ್ಯಕ್ರಮದಲ್ಲಿ ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ, ಕ್ಯಾಪ್ಟನ್ ಬ್ರಿಜೇಶ್ ಚೌಟ, ಶಾಸಕರಾದ ವೇದವ್ಯಾಸ ಕಾಮತ್, ಭಾಗೀರಥಿ ಮುರುಳ್ಯ, ರಾಜೇಶ್ ನಾಯ್ಕ್, ಡಾ. ಭರತ್ ಶೆಟ್ಟಿ, ಕಿಶೋರ್ ಕುಮಾರ್ ಹಾಗೂ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಕರ್ನಾಟಕ ರಾಜ್ಯದ ಮೂಲೆಮೂಲೆಗಳ ಕನ್ನಡ ಸುದ್ದಿಗಳ ಜೊತೆಗೆ ದಿನದ ಪ್ರಮುಖ ಬೆಳವಣಿಗೆಗಳನ್ನು Kannada News Today ಮೂಲಕ ತಿಳಿಯಿರಿ.




