ಚಿಂತಾಮಣಿ: ಕುಂಟೆಯಲ್ಲಿ ಮುಳುಗಿ ಬೆಂಗಳೂರು ಮೂಲದ ತಾಯಿ-ಮಗಳು ದುರಂತ ಸಾವು
ತವರು ಗ್ರಾಮಕ್ಕೆ ಮಗಳೊಂದಿಗೆ ಬಂದಿದ್ದ ಬೆಂಗಳೂರಿನ ಮಹಿಳೆ ಮತ್ತು 14 ವರ್ಷದ ಮಗಳು ಕುಂಟೆ ನೀರಿನಲ್ಲಿ ಮುಳುಗಿ ಪ್ರಾಣ ಕಳೆದುಕೊಂಡಿದ್ದಾರೆ. ಮಗಳನ್ನು ಉಳಿಸಲು ನೀರಿಗಿಳಿದ ತಾಯಿಯೂ ಹೊರಬರಲಾಗದೆ ಮೃತಪಟ್ಟಿದ್ದು, ಅಗ್ನಿಶಾಮಕ ಸಿಬ್ಬಂದಿ ಮೃತದೇಹಗಳನ್ನು ಹೊರತೆಗೆದಿದ್ದಾರೆ.

- ಚಿಂತಾಮಣಿಯಲ್ಲಿ ತಾಯಿ-ಮಗಳ ದುರಂತ ಸಾವು
- ಮಗಳನ್ನು ರಕ್ಷಿಸಲು ಹೋಗಿ ತಾಯಿಯೂ ಸಾವು
ಬೆಂಗಳೂರು (Bengaluru): ಮಗಳ ಜೀವ ಉಳಿಸಲು ತಾಯಿ ಮಾಡಿದ ಪ್ರಯತ್ನವೇ ಕೊನೆಗೆ ಇಬ್ಬರ ಸಾವಿನಲ್ಲಿ ಅಂತ್ಯಗೊಂಡಿರುವ ಹೃದಯವಿದ್ರಾವಕ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ (Chintamani) ತಾಲೂಕಿನ ನಿಮ್ಮಕಾಯಲಹಳ್ಳಿ ಗ್ರಾಮದ ಬಳಿ ನಡೆದಿದೆ.
ಬೆಂಗಳೂರಿನ ಬನಶಂಕರಿ ನಿವಾಸಿಗಳಾದ ಸಲ್ಮಾ (37) ಮತ್ತು ಅವರ ಮಗಳು ಸಾದಿಕಾ (14) ಮೃತಪಟ್ಟವರು. ಮೂಲತಃ ನಿಮ್ಮಕಾಯಲಹಳ್ಳಿ ಗ್ರಾಮದವರಾಗಿದ್ದ ಸಲ್ಮಾ, ಮಗಳೊಂದಿಗೆ ತಮ್ಮ ತವರು ಮನೆಗೆ ಬಂದಿದ್ದರು. ಈ ವೇಳೆ ಗ್ರಾಮದ ಹೊರವಲಯದಲ್ಲಿರುವ ಕುಂಟೆಯ ಬಳಿ ವಿಹಾರಕ್ಕೆ ತೆರಳಿದ್ದರು.
ಅಲ್ಲಿ ನಡೆದ ಸಣ್ಣ ಅವಘಡವೊಂದು ದೊಡ್ಡ ದುರಂತಕ್ಕೆ ಕಾರಣವಾಗಿದೆ. ಕುಂಟೆಯ ಸಮೀಪವಿದ್ದಾಗ ಸಾದಿಕಾ ಆಕಸ್ಮಿಕವಾಗಿ ಕಾಲು ಜಾರಿ ನೀರಿಗೆ ಬಿದ್ದಿದ್ದಾಳೆ. ಮಗಳು ನೀರಿನಲ್ಲಿ ಮುಳುಗುತ್ತಿರುವುದನ್ನು ಕಂಡ ತಾಯಿ ಕ್ಷಣವೂ ಯೋಚಿಸದೆ ಆಕೆಯನ್ನು ರಕ್ಷಿಸಲು ನೀರಿಗೆ ಇಳಿದಿದ್ದಾರೆ.
ಆದರೆ, ಕುಂಟೆಯ ಆಳದ ಅರಿವಿಲ್ಲದ ಕಾರಣ ಇಬ್ಬರೂ ನೀರಿನಿಂದ ಮೇಲೆ ಬರಲು ಸಾಧ್ಯವಾಗದೆ ಮುಳುಗಿ ಮೃತಪಟ್ಟಿದ್ದಾರೆ. ತಾಯಿ ಮತ್ತು ಮಗಳು ಇಬ್ಬರೂ ಸಾವನ್ನಪ್ಪಿರುವ ಸುದ್ದಿ ಕುಟುಂಬಸ್ಥರು ಹಾಗೂ ಗ್ರಾಮಸ್ಥರಲ್ಲಿ ತೀವ್ರ ದುಃಖ ಮೂಡಿಸಿದೆ.
ಘಟನೆ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಶೋಧ ಕಾರ್ಯ ನಡೆಸಿದ್ದಾರೆ. ಬಳಿಕ ಕುಂಟೆಯಿಂದ ಇಬ್ಬರ ಮೃತದೇಹಗಳನ್ನು ಹೊರತೆಗೆದಿದ್ದಾರೆ.
ಮಾಹಿತಿ ಪಡೆದ ಬಟ್ಲಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ಕ್ರಮ ಕೈಗೊಳ್ಳಲಾಗಿದೆ.



