ಘೋರ ದುರಂತ: ವಿದ್ಯುತ್ ಶಾಕ್‌ಗೆ ತಾಯಿ-ಮಗ ದಾರುಣ ಸಾವು

ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆ ತಾಲೂಕಿನ ವರ್ಣಬೆಟ್ಟುವಿನಲ್ಲಿ ಬಟ್ಟೆ ಒಣಗಿಸುವ ವೇಳೆ ವಿದ್ಯುತ್ ಪ್ರವಹಿಸಿ ತಾಯಿ ಮತ್ತು ಮಗ ಮೃತಪಟ್ಟಿದ್ದಾರೆ. ಮಗನನ್ನು ರಕ್ಷಿಸಲು ಮುಂದಾದ ತಾಯಿಗೂ ವಿದ್ಯುತ್ ಶಾಕ್ ತಗುಲಿದೆ ಎನ್ನಲಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆ ತಾಲೂಕಿನ ವರ್ಣಬೆಟ್ಟುವಿನಲ್ಲಿ ಸಂಭವಿಸಿದ ವಿದ್ಯುತ್ ಅವಘಡವೊಂದು (Electric Shock) ತಾಯಿ ಮತ್ತು ಮಗನ ಜೀವ ಬಲಿ ಪಡೆದಿದೆ. ಗುರುವಾರ ಬೆಳಗ್ಗೆ ನಡೆದ ಈ ದುರಂತದಿಂದ ಸ್ಥಳೀಯರು ಆಘಾತಕ್ಕೊಳಗಾಗಿದ್ದಾರೆ.

ಮೃತರನ್ನು 45 ವರ್ಷದ ಮರ್ಸಿ ಮಸ್ಕರೇನಸ್ ಮತ್ತು ಅವರ 18 ವರ್ಷದ ಮಗ ಶೋನ್ ಮಸ್ಕರೇನಸ್ ಎಂದು ಗುರುತಿಸಲಾಗಿದೆ. ಮೂಡುಬಿದಿರೆಯ ಹೋಲಿ ರೋಸರಿ ವಿದ್ಯಾರ್ಥಿಯಾಗಿದ್ದ ಶೋನ್ ಬಟ್ಟೆ ಒಣಗಿಸುವ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ.

ಮನೆಯ ಬಳಿ ಬಟ್ಟೆ ಒಣಗಿಸಲು ಹಾಕಿದ್ದ ತಂತಿಗೆ ಹೈಟೆನ್ಶನ್ ವಿದ್ಯುತ್ ತಂತಿಯಿಂದ ಸಂಪರ್ಕ ಉಂಟಾಗಿ ವಿದ್ಯುತ್ ಹರಿದಿರಬಹುದು ಎಂದು ಶಂಕಿಸಲಾಗಿದೆ. ಈ ವೇಳೆ ವಿದ್ಯುತ್ ಸ್ಪರ್ಶಕ್ಕೆ ಒಳಗಾದ ಮಗನನ್ನು ರಕ್ಷಿಸಲು ತಾಯಿ ಮುಂದಾಗಿದ್ದು, ಅವರಿಗೂ ವಿದ್ಯುತ್ ಪ್ರವಹಿಸಿದೆ ಎನ್ನಲಾಗಿದೆ. ಪರಿಣಾಮ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಬಳ್ಳಾರಿ ಕೋಟೆಯ ಹೊಂಡದಲ್ಲಿ ಮುಳುಗಿ ತಂದೆ-ಮಗ ದಾರುಣ ಸಾವು

ಬೆಳಗಿನ ಜಾವ ಸಂಭವಿಸಿದ ದುರಂತ

ಗುರುವಾರ ಬೆಳಗ್ಗೆ ಸುಮಾರು 7ರಿಂದ 8 ಗಂಟೆಯ ನಡುವೆ ಘಟನೆ ಬೆಳಕಿಗೆ ಬಂದಿದೆ. ತೋಟದ ಕೆಲಸಕ್ಕೆ ಬಂದ ಕಾರ್ಮಿಕರೊಬ್ಬರು ಸ್ಥಳಕ್ಕೆ ಬಂದಾಗ ದುರಂತದ ಬಗ್ಗೆ ಗೊತ್ತಾಗಿದೆ ಎನ್ನಲಾಗಿದೆ.

ಮಾಹಿತಿ ತಿಳಿಯುತ್ತಿದ್ದಂತೆ ಮೂಡುಬಿದಿರೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಆರಂಭಿಸಿದ್ದಾರೆ. ವಿದ್ಯುತ್ ಅವಘಡಕ್ಕೆ ನಿಖರ ಕಾರಣವೇನು ಎಂಬುದು ತನಿಖೆಯಿಂದ ತಿಳಿದುಬರಬೇಕಿದೆ.

English Summary▼

ಕರ್ನಾಟಕ ರಾಜ್ಯದ ಮೂಲೆಮೂಲೆಗಳ ಕನ್ನಡ ಸುದ್ದಿಗಳ ಜೊತೆಗೆ ದಿನದ ಪ್ರಮುಖ ಬೆಳವಣಿಗೆಗಳನ್ನು Kannada News Today ಮೂಲಕ ತಿಳಿಯಿರಿ.

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories