ಚಿತ್ರದುರ್ಗ: ಅಕ್ರಮ ಸಂಬಂಧಕ್ಕೆ ಅಡ್ಡಿ ಅಂತ 2 ವರ್ಷದ ಮಗುವನ್ನು 50 ಸಾವಿರಕ್ಕೆ ಮಾರಿದ ತಾಯಿ
ಹಿರಿಯೂರು ನಗರದಲ್ಲಿ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗುತ್ತಿದೆ ಎಂದು 2 ವರ್ಷದ ಗಂಡು ಮಗುವನ್ನು ಕೇವಲ ಐವತ್ತು ಸಾವಿರ ರೂಗಳಿಗೆ ಮಾರಾಟ ಮಾಡಿದ ತಾಯಿಯನ್ನು ಪೊಲೀಸರು ಬಂಧಿಸಿದ್ದು ಸಹಾಯಕನಿಗಾಗಿ ಶೋಧ ಮುಂದುವರಿದಿದೆ
- ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಮಗುವಿನ ಮಾರಾಟ
- ಹಿರಿಯೂರಿನಲ್ಲಿ ತಾಯಿ ಬಂಧನ, ಸಹಾಯಕ ಪರಾರಿ
- ಮಕ್ಕಳ ರಕ್ಷಣ ಘಟಕದಿಂದ ಪ್ರಕರಣ ಪತ್ತೆ
ಚಿತ್ರದುರ್ಗ, ಹಿರಿಯೂರು: ತಾಯ್ತನವೇ ಪ್ರಶ್ನಾರ್ಥಕವಾಗುವ ಘಟನೆ ಹಿರಿಯೂರು ನಗರದಲ್ಲಿ ಬೆಳಕಿಗೆ ಬಂದಿದೆ. ಅಕ್ರಮ ಸಂಬಂಧಕ್ಕೆ ಮಗು ಅಡ್ಡಿಯಾಗುತ್ತಿದೆ ಎಂಬ ಕಾರಣಕ್ಕೆ, ತಾಯಿ ತನ್ನ ಎರಡು ವರ್ಷದ ಗಂಡು ಮಗುವನ್ನೇ ಮಾರಾಟ ಮಾಡಿದ ಅಮಾನವೀಯ ಕೃತ್ಯ ಈಗ ಬಹಿರಂಗವಾಗಿದೆ.
ಕೆಲವು ದಿನಗಳಿಂದ ಮಗು ಕಾಣಿಸದೇ ಇರುವುದನ್ನು ಗಮನಿಸಿದ ಸ್ಥಳೀಯರು, ಅನುಮಾನಗೊಂಡು ಮಕ್ಕಳ ರಕ್ಷಣ ಘಟಕಕ್ಕೆ ಮಾಹಿತಿ ನೀಡಿದ್ದಾರೆ. ಮಾಹಿತಿ ಮೇರೆಗೆ ಚಿತ್ರದುರ್ಗ ಜಿಲ್ಲಾ ಬಾಲಭವನ ಅಧಿಕಾರಿ ಮಂಜುನಾಥ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ, ಈ ಭೀಕರ ಪ್ರಕರಣ ಬಯಲಾಗಿದೆ.
ತನಿಖೆಯಲ್ಲಿ ಬಯಲಾದ ಸತ್ಯ:
ಪೊಲೀಸರ ತನಿಖೆ ಪ್ರಕಾರ, ಹುಳಿಯಾರು ರಸ್ತೆಯ ನಿವಾಸಿ ಐಶ್ವರ್ಯ ಹೂವಿನಹೊಳೆ ಗ್ರಾಮದ ಚಂದ್ರಪ್ಪನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಳು. ಈ ಸಂಬಂಧಕ್ಕೆ ಮಗು ಅಡ್ಡಿಯಾಗುತ್ತಿದೆ ಎಂದು ಇಬ್ಬರೂ ಸೇರಿ ಮಗುವನ್ನು ಕೊಪ್ಪಳ ಮೂಲದವರಿಗೆ ₹50,000ಕ್ಕೆ ಮಾರಾಟ ಮಾಡಿದ್ದಾರೆ ಎನ್ನಲಾಗಿದೆ.
ಪೊಲೀಸ್ ಕ್ರಮ:
ಡಿ.23ರಂದು ಐಶ್ವರ್ಯ ವಿರುದ್ಧ ಹಿರಿಯೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಆಕೆಯನ್ನು ಬಂಧಿಸಲಾಗಿದೆ. ಚಂದ್ರಪ್ಪ ಪರಾರಿಯಾಗಿದ್ದು, ಮಗುವನ್ನು ಪಡೆದವರ ಪತ್ತೆಗೆ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ. ಐಶ್ವರ್ಯಾಳ ಪತಿ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ.






