Karnataka: ಚಿತ್ರದುರ್ಗದಲ್ಲಿ ಲಾರಿ–ಕಾರು ಅಪಘಾತ, ನಾಲ್ವರು ಸಾವು! ಕೋಲಾರದಲ್ಲಿ ಕಾರು ಗುಂಡಿಗೆ ಬಿದ್ದು ವ್ಯಕ್ತಿ ಸಾವು

ರಾಜ್ಯದಲ್ಲಿ ಒಂದೇ ದಿನ ನಡೆದ ಮೂರು ವಿಭಿನ್ನ ರಸ್ತೆ ಅಪಘಾತಗಳಲ್ಲಿ ಯುವಕರ ಸಾವು, ದೇವಾಲಯದಿಂದ ವಾಪಸ್ಸಾಗುತ್ತಿದ್ದವರ ಗಾಯ, ಹಾಗೂ ಕಾರು ಗುಂಡಿಗೆ ಬಿದ್ದು ಪ್ರಾಣ ಹಾನಿ ಸಂಭವಿಸಿದೆ

  • ಬೀದರ್–ಶ್ರೀರಂಗಪಟ್ಟಣ ಹೆದ್ದಾರಿಯಲ್ಲಿ ಲಾರಿ–ಕಾರು ಅಪಘಾತ
  • ದೇವಾಲಯದಿಂದ ವಾಪಸ್ ಬರುತ್ತಿದ್ದ ಗೂಡ್ಸ್ ವಾಹನ ಪಲ್ಟಿ
  • ಕೋಲಾರದಲ್ಲಿ ಕಾರು ಗುಂಡಿಗೆ ಬಿದ್ದು ವ್ಯಕ್ತಿ ಸಾವು, ನಾಲ್ವರಿಗೆ ಗಾಯ

Chitradurga: ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಹಿಂಡಸಕಟ್ಟೆ ಗ್ರಾಮದ ಸಮೀಪ ಬೀದರ್–ಶ್ರೀರಂಗಪಟ್ಟಣ ರಾಜ್ಯ ಹೆದ್ದಾರಿಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಕಾರು ಹಾಗೂ ಲಾರಿ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಕಾರಿನಲ್ಲಿದ್ದ ನಾಲ್ವರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಮೃತರನ್ನು ವಿಶ್ವನಾಥ್ (22), ನಂಜುಂಡಿ (23), ರಾಹುಲ್ (23) ಮತ್ತು ಯಶ್ವಂತ್ (22) ಎಂದು ಗುರುತಿಸಲಾಗಿದೆ. ಇವರು ಹಿರಿಯೂರು ತಾಲ್ಲೂಕಿನ ನಂಜಯ್ಯನಕೊಟ್ಟಿಗೆ ಗ್ರಾಮದ ನಿವಾಸಿಗಳು ಎನ್ನಲಾಗಿದೆ.

ಘಟನೆಯ ಮಾಹಿತಿ ಪಡೆದ ಹಿರಿಯೂರು ಗ್ರಾಮಾಂತರ ಪೊಲೀಸ್ ಠಾಣೆಯ ಸಿಪಿಐ ಆನಂದ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅಪಘಾತದ ಕಾರಣ ಕುರಿತು ತನಿಖೆ ಮುಂದುವರಿದಿದೆ.

ದೇವಾಲಯದಿಂದ ವಾಪಸ್ಸಾಗುವಾಗ ಪಲ್ಟಿಯಾದ ಗೂಡ್ಸ್ ವಾಹನ

Belagavi: ಇನ್ನೊಂದು ಘಟನೆ ಬೆಳಗಾವಿ ಜಿಲ್ಲೆಯ ಹಲಗಾ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಸವದತ್ತಿ ಯಲ್ಲಮ್ಮ ದೇವಾಲಯದಿಂದ ಬೆಳಗಾವಿ ಕಡೆಗೆ ಬರುತ್ತಿದ್ದ ಗೂಡ್ಸ್ ವಾಹನ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದಿದೆ.

ವಾಹನದಲ್ಲಿದ್ದ 12 ಜನರ ಪೈಕಿ ಏಳು ಜನರಿಗೆ ಗಾಯಗಳಾಗಿದ್ದು, ಗಾಯಾಳುಗಳನ್ನು ತಕ್ಷಣವೇ ಬೆಳಗಾವಿಯ ಬಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಈ ಪ್ರಕರಣ ಹಿರೇಬಾಗೇವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದೆ.

ಕೋಲಾರದಲ್ಲಿ ಕಾರು ಗುಂಡಿಗೆ ಬಿದ್ದು ಪ್ರಾಣ ಹಾನಿ

Kolar: ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಕಪ್ಪಲ್ಲಿ ಗ್ರಾಮದ ಬಳಿ ಮತ್ತೊಂದು ರಸ್ತೆ ದುರಂತ ನಡೆದಿದೆ. ಚಾಲಕನ ನಿಯಂತ್ರಣ ತಪ್ಪಿ ಹೊಂಡಾ ಸಿಟಿ ಕಾರು ರಸ್ತೆ ಬದಿಯ ಗುಂಡಿಗೆ ಬಿದ್ದ ಪರಿಣಾಮ ಓರ್ವ ಯುವಕ ಮೃತಪಟ್ಟಿದ್ದು, ನಾಲ್ವರಿಗೆ ಗಂಭೀರ ಗಾಯಗಳಾಗಿವೆ. ಮೃತನನ್ನು ಚಿಂತಾಮಣಿಯ ಕುಶಾಲ್ (25) ಎಂದು ಗುರುತಿಸಲಾಗಿದೆ.

ರೆಸ್ಟೋರೆಂಟ್‌ಗೆ ತೆರಳಿ ವಾಪಸ್ಸಾಗುವ ವೇಳೆ ಈ ಅಪಘಾತ ಸಂಭವಿಸಿದ್ದು, ಗಾಯಗೊಂಡವರಲ್ಲಿ ಓರ್ವ ಯುವತಿಯೂ ಸೇರಿದ್ದಾರೆ. ಗಾಯಾಳುಗಳನ್ನು ಕೋಲಾರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

TRENDING ARTICLES1 / 4
Show More

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories