ಚರಂಡಿಯಲ್ಲಿ ನವಜಾತ ಶಿಶು ಶವ ಪತ್ತೆ! ಕಣ್ಣೀರು ತರಿಸಿದ ಘಟನೆ

ಹುಲಸೂರ ತಾಲೂಕಿನ ಗಡಿಗೌಡಗಾಂವ್ ಗ್ರಾಮದಲ್ಲಿ ಚರಂಡಿಯಲ್ಲಿ ನವಜಾತ ಶಿಶುವಿನ ಶವ ಪತ್ತೆಯಾಗಿದ್ದು, ಘಟನೆ ಸ್ಥಳೀಯರನ್ನು ಬೆಚ್ಚಿಬೀಳಿಸಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ದುಷ್ಕರ್ಮಿಗಳ ಪತ್ತೆಗೆ ತನಿಖೆ ಆರಂಭಿಸಿದ್ದಾರೆ.

ಹುಲಸೂರ: ತಾಲೂಕಿನ ಗಡಿಗೌಡಗಾಂವ್ ಗ್ರಾಮದಲ್ಲಿ ಮನಕಲಕುವ ಘಟನೆ ಬೆಳಕಿಗೆ ಬಂದಿದೆ. ಗ್ರಾಮದ ಬಸವೇಶ್ವರ ವೃತ್ತದ ಸಮೀಪ ಇರುವ ಕಿರಾಣಾ ಅಂಗಡಿ ಬಳಿ ಚರಂಡಿಯಲ್ಲಿ ನವಜಾತ ಶಿಶುವಿನ ಶವ ಪತ್ತೆಯಾಗಿದ್ದು, ಸ್ಥಳೀಯರನ್ನು ಬೆಚ್ಚಿಬೀಳಿಸಿದೆ.

ಬೆಳಿಗ್ಗೆ ಚರಂಡಿ ಬಳಿ ತೆರಳಿದ್ದ ಕೆಲ ಗ್ರಾಮಸ್ಥರು ಮಗುವಿನ ಮೃತದೇಹವನ್ನು ಗಮನಿಸಿ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಹುಲಸೂರ ಠಾಣೆ ಪೊಲೀಸರು ಪರಿಶೀಲನೆ ನಡೆಸಿದರು.

ಆಗತಾನೇ ಜನಿಸಿದ ಮಗುವನ್ನು ರಾತ್ರಿ ವೇಳೆ ಯಾರೋ ದುರುಳರು ಚರಂಡಿಗೆ ಎಸೆದು ಹೋಗಿರಬಹುದೆಂಬ ಅನುಮಾನ ವ್ಯಕ್ತವಾಗಿದೆ. ಮಗು ಜನಿಸಿದ ವಿಚಾರವನ್ನು ಮುಚ್ಚಿಹಾಕುವ ಉದ್ದೇಶದಿಂದ ಈ ಕೃತ್ಯ ಎಸಗಿರುವ ಸಾಧ್ಯತೆಯೂ ಇದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಘಟನೆಯಿಂದ ಗ್ರಾಮದಲ್ಲಿ ದುಃಖದ ವಾತಾವರಣ ನಿರ್ಮಾಣವಾಗಿದ್ದು, ಜನರಲ್ಲಿ ಹಲವು ಪ್ರಶ್ನೆಗಳು ಮೂಡಿವೆ. ಇಂತಹ ಅಮಾನುಷ ಕೃತ್ಯ ಎಸಗಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಪೊಲೀಸರು ಶಿಶುವಿನ ಮೃತದೇಹವನ್ನು ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ಮಗುವಿನ ಪೋಷಕರು ಯಾರು ಮತ್ತು ಈ ಕೃತ್ಯದ ಹಿಂದೆ ಯಾರು ಇದ್ದಾರೆ ಎಂಬುದರ ಕುರಿತು ಮಾಹಿತಿ ಸಂಗ್ರಹಿಸಲಾಗುತ್ತಿದೆ.

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories