ಲಾರಿಗೆ ಕಾರು ಡಿಕ್ಕಿ, 15 ದಿನಗಳ ಹಿಂದಷ್ಟೇ ಮದುವೆಯಾಗಿದ್ದ ನವದಂಪತಿ ಸಾವು
ಹಾವೇರಿ ಜಿಲ್ಲೆಯ ಶಿಗ್ಗಾಂವಿ ಬಳಿ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ನಿಂತಿದ್ದ ಲಾರಿಗೆ ಕಾರು ಡಿಕ್ಕಿ ಹೊಡೆದು, 15 ದಿನಗಳ ಹಿಂದಷ್ಟೇ ಮದುವೆಯಾದ ನವದಂಪತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

- ಶಿಗ್ಗಾಂವಿ ಭೀಕರ ಅಪಘಾತ, ನವದಂಪತಿ ಸ್ಥಳದಲ್ಲೇ ಸಾವು
- ರಾಷ್ಟ್ರೀಯ ಹೆದ್ದಾರಿ 48ರಲ್ಲಿ ನಿಂತಿದ್ದ ಲಾರಿಗೆ ಕಾರು ಡಿಕ್ಕಿ
- ದೇವರ ದರ್ಶನಕ್ಕೆ ತೆರಳಿ ವಾಪಸ್ ಬರುತ್ತಿದ್ದ ವೇಳೆ ದುರಂತ
ಹೊಸ ಬದುಕಿನ ಕನಸು ಕಣ್ತುಂಬಿಕೊಂಡು ದೇವರ ದರ್ಶನಕ್ಕೆ ತೆರಳಿದ್ದ ನವದಂಪತಿಯ ಪ್ರಯಾಣ ಮಧ್ಯದಲ್ಲೇ ನಿಂತಿದೆ. ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಕಡಹಳ್ಳಿ ಗ್ರಾಮದ ಬಳಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರೂ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ.
ಮೃತರನ್ನು ಹಾವೇರಿ ನಗರದ ಕಾರ್ತಿಕ್ ಹೂಗಾರ (34) ಮತ್ತು ಐಶ್ವರ್ಯಾ (30) ಎಂದು ಗುರುತಿಸಲಾಗಿದೆ. ಕೇವಲ 15 ದಿನಗಳ ಹಿಂದೆ ಮದುವೆಯಾಗಿ ಹೊಸ ಜೀವನ ಆರಂಭಿಸಿದ್ದ ಜೋಡಿ, ದೇವರ ಆಶೀರ್ವಾದ ಪಡೆದು ಮನೆಗೆ ಮರಳುತ್ತಿದ್ದ ವೇಳೆ ವಿಧಿಯಾಟಕ್ಕೆ ಬಲಿಯಾಗಿದ್ದಾರೆ.
ಹೇಗೆ ಸಂಭವಿಸಿತು ಅಪಘಾತ?
KA-63 M-0522 ಸಂಖ್ಯೆಯ ವ್ಯಾಗನಾರ್ ಕಾರಿನಲ್ಲಿ ಹುಬ್ಬಳ್ಳಿ ದಿಕ್ಕಿನಿಂದ ಶಿಗ್ಗಾಂವಿ ಕಡೆಗೆ ಪ್ರಯಾಣಿಸುತ್ತಿದ್ದ ವೇಳೆ, ರಾಷ್ಟ್ರೀಯ ಹೆದ್ದಾರಿ 48ರಲ್ಲಿ ನಿಂತಿದ್ದ ಲಾರಿಯ ಹಿಂಭಾಗಕ್ಕೆ ಕಾರು ವೇಗವಾಗಿ ಡಿಕ್ಕಿ ಹೊಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಡಿಕ್ಕಿಯ ತೀವ್ರತೆಗೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ದಂಪತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಅಪಘಾತದ ಮಾಹಿತಿ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳ ಹಾಗೂ ಸ್ಥಳೀಯರು ಕಾರ್ಯಾಚರಣೆ ನಡೆಸಿ ಕಾರಿನೊಳಗಿದ್ದ ಮೃತದೇಹಗಳನ್ನು ಹೊರತೆಗೆದಿದ್ದಾರೆ.
ಗಾಯಾಳುಗಳ ಸ್ಥಿತಿ ಗಂಭೀರ
ಕಾರಿನಲ್ಲಿ ಇದ್ದ ಇನ್ನಿಬ್ಬರು ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ತಕ್ಷಣವೇ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಘಟನೆ ತಿಳಿದ ಕೂಡಲೇ ತಡಸ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಇನ್ನೊಂದು ಕಡೆ, ಹೊಸ ಜೀವನದ ಆರಂಭವೇ ಅಂತ್ಯವಾದ ಸುದ್ದಿ ಕೇಳಿ ಎರಡೂ ಕುಟುಂಬಗಳಲ್ಲಿ ಆಕ್ರಂದನ ಮುಗಿಲು ಮುಟ್ಟಿತ್ತು. ಮದುವೆಯ ಸಂಭ್ರಮ ಇನ್ನೂ ಮನೆಮಾಡಿದ್ದ ಸಂದರ್ಭದಲ್ಲಿ ನಡೆದ ಈ ದುರಂತ ಹೃದಯ ಕಲುಕುವಂತಿದೆ.






