ಅನ್ನಭಾಗ್ಯ ಯೋಜನೆ ಅಪ್ಡೇಟ್! ಈ ತಿಂಗಳು ಕೇಂದ್ರದಿಂದಲೇ 10 ಕೆಜಿ ಅಕ್ಕಿ ವಿತರಣೆ

ಮೇ ಮತ್ತು ಜೂನ್ ತಿಂಗಳ ಪಡಿತರವನ್ನು ಒಟ್ಟಿಗೆ ವಿತರಿಸಲು ಕೇಂದ್ರ ಸರ್ಕಾರ ಸೂಚನೆ ನೀಡಿದ್ದು ರಾಜ್ಯದಲ್ಲಿ ಈ ತಿಂಗಳು ಕೇಂದ್ರದ 10 ಕೆಜಿ ಅಕ್ಕಿ ಮಾತ್ರ ಫಲಾನುಭವಿಗಳಿಗೆ ಸಿಗಲಿದೆ.

ರಾಜ್ಯದ ಅನ್ನಭಾಗ್ಯ ಯೋಜನೆಯ ಫಲಾನುಭವಿಗಳಿಗೆ ಈ ತಿಂಗಳು ಮಹತ್ವದ ಬದಲಾವಣೆ ಎದುರಾಗಿದೆ. ಸಾಮಾನ್ಯವಾಗಿ ರಾಜ್ಯ ಸರ್ಕಾರದ ಅನ್ನಭಾಗ್ಯ ಯೋಜನೆಯಡಿ ಸಿಗುವ ಹೆಚ್ಚುವರಿ ಅಕ್ಕಿ ಈ ಬಾರಿ ವಿತರಣೆ ಆಗುವುದಿಲ್ಲ. ಅದರ ಬದಲು ಕೇಂದ್ರ ಸರ್ಕಾರದಿಂದ ಎರಡು ತಿಂಗಳ ಪಡಿತರವನ್ನು ಒಂದೇ ಬಾರಿ ನೀಡಲಾಗುತ್ತಿದೆ.

ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಬರುವ ಬಿಪಿಎಲ್ ಹಾಗೂ ಅಂತ್ಯೋದಯ ಕುಟುಂಬಗಳಿಗೆ ಮೇ ಮತ್ತು ಜೂನ್ ತಿಂಗಳ ಪಡಿತರವನ್ನು ಒಟ್ಟಿಗೆ ವಿತರಿಸಲು ಕೇಂದ್ರ ಸರ್ಕಾರ ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕೂಡ ಕೇಂದ್ರದ ಪಾಲಿನ ಅಕ್ಕಿಯನ್ನು ಮೇ ತಿಂಗಳಲ್ಲೇ ಹಂಚಿಕೆ ಮಾಡಲು ಮುಂದಾಗಿದೆ.

ಪ್ರತಿ ಸದಸ್ಯರಿಗೆ ತಿಂಗಳಿಗೆ 5 ಕೆಜಿಯಂತೆ ಎರಡು ತಿಂಗಳಿಗೆ ಒಟ್ಟು 10 ಕೆಜಿ ಅಕ್ಕಿ ನೀಡಲಾಗುತ್ತಿದೆ. ಸಾಮಾನ್ಯವಾಗಿ ಇದರ ಜೊತೆಗೆ ರಾಜ್ಯ ಸರ್ಕಾರವೂ ಅನ್ನಭಾಗ್ಯ ಯೋಜನೆಯಡಿ ಹೆಚ್ಚುವರಿ 5 ಕೆಜಿ ಅಕ್ಕಿ ನೀಡುತ್ತಿತ್ತು. ಆದರೆ ಈ ಬಾರಿ ಒಟ್ಟಿಗೆ ಹೆಚ್ಚಿನ ಪ್ರಮಾಣದ ಅಕ್ಕಿ ವಿತರಿಸಿದರೆ ಅದರ ಸರಿಯಾದ ಬಳಕೆ ಆಗುವುದಿಲ್ಲ ಎನ್ನುವ ಕಾರಣದಿಂದ ರಾಜ್ಯ ಸರ್ಕಾರ ತನ್ನ ಪಾಲಿನ ಅನ್ನಭಾಗ್ಯ ಅಕ್ಕಿಯನ್ನು ಜೂನ್ ತಿಂಗಳಲ್ಲಿ ನೀಡಲು ನಿರ್ಧರಿಸಿದೆ.

ಕೇಂದ್ರದ ಗೋದಾಮುಗಳಲ್ಲಿ ಆಹಾರಧಾನ್ಯ ಸಂಗ್ರಹ ಹೆಚ್ಚಾಗಿರುವುದರಿಂದ ಜಾಗದ ಕೊರತೆ ಉಂಟಾಗಿದೆ. ಕನಿಷ್ಠ ಬೆಂಬಲ ಬೆಲೆ ಯೋಜನೆ ಪರಿಣಾಮಕಾರಿಯಾಗಿ ಜಾರಿಯಾದ ಹಿನ್ನೆಲೆಯಲ್ಲಿ ಸಾಮಾನ್ಯಕ್ಕಿಂತ ಮೂರು ಪಟ್ಟು ಹೆಚ್ಚು ಧಾನ್ಯ ಸಂಗ್ರಹವಾಗಿದೆ. ಈ ಕಾರಣದಿಂದ ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಿಗೆ ಎರಡು ತಿಂಗಳ ಪಡಿತರವನ್ನು ಒಂದೇ ಬಾರಿ ಪೂರೈಸಲಾಗುತ್ತಿದೆ.

ರಾಜ್ಯದಲ್ಲಿ ಸುಮಾರು 1.14 ಕೋಟಿ ಬಿಪಿಎಲ್ ಕಾರ್ಡ್‌ದಾರರು ಇದ್ದು 4 ಕೋಟಿಗೂ ಹೆಚ್ಚು ಫಲಾನುಭವಿಗಳಿದ್ದಾರೆ. ಅಂತ್ಯೋದಯ ಯೋಜನೆಯಲ್ಲಿಯೂ ಲಕ್ಷಾಂತರ ಕುಟುಂಬಗಳು ಸೇರಿವೆ. ಪ್ರತೀ ತಿಂಗಳು 2.17 ಲಕ್ಷ ಮೆಟ್ರಿಕ್ ಟನ್ ಆಹಾರಧಾನ್ಯ ಕೇಂದ್ರದಿಂದ ಪೂರೈಕೆ ಆಗುತ್ತಿದ್ದು, ಎರಡು ತಿಂಗಳ ವಿತರಣೆ ಒಟ್ಟಿಗೆ ಮಾಡಿದರೆ ಕೇಂದ್ರಕ್ಕೆ ಸಾಕಷ್ಟು ಗೋದಾಮು ಜಾಗ ಖಾಲಿಯಾಗಲಿದೆ.

ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳ ಪ್ರಕಾರ ಜೂನ್ ತಿಂಗಳಲ್ಲಿ ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಪ್ರತ್ಯೇಕವಾಗಿ ವಿತರಿಸಲಾಗುತ್ತದೆ. ಬಳಿಕ ಎಂದಿನಂತೆ ಪ್ರತಿ ತಿಂಗಳು ಪಡಿತರ ವಿತರಣೆ ಮುಂದುವರಿಯಲಿದೆ ಎಂದು ಸ್ಪಷ್ಟಪಡಿಸಲಾಗಿದೆ.

ಇದಕ್ಕೂ ನಡುವೆ ಇಂದಿರಾ ಆಹಾರ ಕಿಟ್ ಯೋಜನೆ ಸದ್ಯಕ್ಕೆ ಆರಂಭವಾಗುವುದಿಲ್ಲ ಎಂಬ ಮಾಹಿತಿ ಕೂಡ ಲಭ್ಯವಾಗಿದೆ. ಟೆಂಡರ್ ಪ್ರಕ್ರಿಯೆಯಲ್ಲಿ ಸಮಸ್ಯೆಗಳು ಎದುರಾದ ಹಿನ್ನೆಲೆ ಮರು ಟೆಂಡರ್ ಕರೆಯಲಾಗಿದ್ದು, ಯೋಜನೆ ಜಾರಿಗೆ ಇನ್ನಷ್ಟು ಸಮಯ ಬೇಕಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories