ಅಕ್ರಮ ಮಣ್ಣು ಹೊಂಡದಲ್ಲಿ ಮುಳುಗಿ ನರ್ಸಿಂಗ್ ವಿದ್ಯಾರ್ಥಿ ಸಾವು
ಗದಗ ತಾಲೂಕಿನ ಲಕ್ಕುಂಡಿ ಸಮೀಪ ಅಕ್ರಮ ಮಣ್ಣು ಗಣಿಗಾರಿಕೆ ಹೊಂಡದ ನೀರಲ್ಲಿ ಸ್ನಾನಕ್ಕೆ ಇಳಿದ ವೇಳೆ ನರ್ಸಿಂಗ್ ಅಂತಿಮ ವರ್ಷದ ವಿದ್ಯಾರ್ಥಿ ಮುಳುಗಿ ಮೃತಪಟ್ಟಿದ್ದಾರೆ. ಇಂತಹ ಹೊಂಡಗಳಿಂದ ನಿರಂತರ ಅಪಾಯ ಉಂಟಾಗಿದೆ.

ಗದಗ ತಾಲೂಕಿನ ಲಕ್ಕುಂಡಿ ಗ್ರಾಮದ ಕಣಗಿನಾಳ ರಸ್ತೆ ಸಮೀಪ ದುಃಖಕರ ಘಟನೆ ಸಂಭವಿಸಿದೆ. ಅಕ್ರಮವಾಗಿ ತೆಗೆದ ಮಣ್ಣು ಗಣಿಗಾರಿಕೆಯ ಆಳವಾದ ಹೊಂಡದಲ್ಲಿ ನೀರು ತುಂಬಿಕೊಂಡಿದ್ದ ಸ್ಥಳದಲ್ಲಿ ಸ್ನಾನಕ್ಕೆ ಇಳಿದ ವೇಳೆ ನರ್ಸಿಂಗ್ ಅಂತಿಮ ವರ್ಷದ ವಿದ್ಯಾರ್ಥಿ ಮುಳುಗಿ ಮೃತಪಟ್ಟಿದ್ದಾರೆ.
ಹಬ್ಬದ ಸಂಭ್ರಮದ ನಡುವೆ ಸ್ನೇಹಿತರ ಜೊತೆ ಬಣ್ಣ ಆಡಿ ಬಳಿಕ ಆರೇಳು ಮಂದಿ ಯುವಕರು ಈ ಹೊಂಡದ ಬಳಿ ತೆರಳಿದ್ದರು. ಈ ವೇಳೆ ನೀರಿಗೆ ಇಳಿದ ವಿದ್ಯಾರ್ಥಿ ಏಕಾಏಕಿ ಆಳಕ್ಕೆ ಸಿಲುಕಿದ್ದು, ಹೊರಬರಲು ಸಾಧ್ಯವಾಗದೆ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಘಟನೆಯಿಂದ ಸ್ನೇಹಿತರು ಮತ್ತು ಕುಟುಂಬಸ್ಥರು ಶೋಕದಲ್ಲಿ ಮುಳುಗಿದ್ದಾರೆ.
ಅಕ್ರಮ ಮಣ್ಣು ಗಣಿಗಾರಿಕೆ ಬಗ್ಗೆ ಮತ್ತೆ ಪ್ರಶ್ನೆ
ಈ ಪ್ರದೇಶದಲ್ಲಿ ಅಕ್ರಮವಾಗಿ ಮಣ್ಣು ಗಣಿಗಾರಿಕೆ ನಡೆಯುತ್ತಿರುವುದು ಸ್ಥಳೀಯರು ಹಲವು ಬಾರಿ ಆರೋಪಿಸುತ್ತಿದ್ದಾರೆ. 30 ರಿಂದ 40 ಅಡಿ ಆಳದ ದೊಡ್ಡ ಹೊಂಡಗಳನ್ನು ತೆಗೆಯಲಾಗಿದ್ದು, ಮಳೆಯ ಸಮಯದಲ್ಲಿ ಅವುಗಳಲ್ಲಿ ನೀರು ತುಂಬಿಕೊಂಡು ಅಪಾಯಕರ ತಾಣಗಳಾಗಿ ಪರಿಣಮಿಸುತ್ತಿವೆ.
ಇಂತಹ ಹೊಂಡಗಳ ಕಾರಣದಿಂದ ಗದಗ ತಾಲೂಕಿನ ಹಲವು ಗ್ರಾಮಗಳಲ್ಲಿ ಹಿಂದೆಲೂ ದುರ್ಘಟನೆಗಳು ಸಂಭವಿಸಿದ್ದವು. ಶ್ಯಾಗೋಟಿ, ಚಿಕ್ಕಹಂದಿಗೋಳ, ಕಳಸಾಪೂರ ಮತ್ತು ಚಿಂಚಲಿ ಗ್ರಾಮಗಳಲ್ಲಿಯೂ ಇದೇ ರೀತಿಯ ಘಟನೆಗಳಲ್ಲಿ ಮಕ್ಕಳು ಮತ್ತು ಯುವಕರು ಪ್ರಾಣ ಕಳೆದುಕೊಂಡಿರುವ ಉದಾಹರಣೆಗಳಿವೆ.
ಕ್ರಮಕ್ಕೆ ಒತ್ತಾಯ
ಇತ್ತೀಚೆಗೆ ಚಿಂಚಲಿ ಗ್ರಾಮದಲ್ಲಿಯೇ ಇಬ್ಬರು ವಿದ್ಯಾರ್ಥಿಗಳು ಇದೇ ರೀತಿಯ ಹೊಂಡದಲ್ಲಿ ಮುಳುಗಿ ಸಾವನ್ನಪ್ಪಿದ್ದರೂ, ಸಂಬಂಧಪಟ್ಟ ಇಲಾಖೆ ಈ ಅಕ್ರಮ ಮಣ್ಣು ಗಣಿಗಾರಿಕೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿಲ್ಲ ಎಂಬ ಆರೋಪ ಕೇಳಿಬರುತ್ತಿದೆ.
ಸ್ಥಳೀಯರು ತಕ್ಷಣ ಅಕ್ರಮ ಗಣಿಗಾರಿಕೆಗೆ ಬ್ರೇಕ್ ಹಾಕಬೇಕು, ಅಪಾಯಕರ ಹೊಂಡಗಳನ್ನು ಮುಚ್ಚಬೇಕು ಎಂದು ಆಗ್ರಹಿಸುತ್ತಿದ್ದಾರೆ. ಇಲ್ಲವಾದರೆ ಇಂತಹ ದುರಂತಗಳು ಮುಂದುವರಿಯುವ ಭೀತಿ ಇದೆ ಎಂದು ಗ್ರಾಮಸ್ಥರು ಎಚ್ಚರಿಸಿದ್ದಾರೆ.



