ಜಮೀನು ವಿವಾದಕ್ಕೆ ರಕ್ತಪಾತ, ಕಲ್ಲು ಎತ್ತಿಹಾಕಿ ಅಣ್ಣನನ್ನೇ ಕೊಂದ ತಮ್ಮ

ಹಾವೇರಿ ಜಿಲ್ಲೆಯ ಬಮ್ಮನಹಳ್ಳಿ ಗ್ರಾಮದಲ್ಲಿ ಒಂದು ಎಕರೆ ಜಮೀನು ವಿಚಾರಕ್ಕೆ ಇಬ್ಬರು ಸಹೋದರರ ನಡುವೆ ನಡೆದ ಜಗಳ ವಿಕೋಪಕ್ಕೆ ತಿರುಗಿ, ತಾಯಿ ಕಣ್ಣೆದುರೇ ಅಣ್ಣನನ್ನು ತಮ್ಮ ಕಲ್ಲಿನಿಂದ ಹೊಡೆದು ಕೊಂದಿದ್ದಾನೆ.

  • ಒಂದು ಎಕರೆ ಜಮೀನು ವಿವಾದಕ್ಕೆ ಅಣ್ಣನ ಕೊಲೆ
  • ತಾಯಿ ಕಣ್ಣೆದುರೇ ಸಹೋದರನ ಮೇಲೆ ಕಲ್ಲಿನಿಂದ ಹಲ್ಲೆ
  • ಹಾವೇರಿಯಲ್ಲಿ ಘಟನೆ; ಆರೋಪಿ ತಮ್ಮ ಪೊಲೀಸರ ವಶಕ್ಕೆ

ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಬಮ್ಮನಹಳ್ಳಿ ಗ್ರಾಮದಲ್ಲಿ ಒಂದು ಎಕರೆ ಜಮೀನು ವಿಚಾರಕ್ಕೆ ನಡೆದ ಸಹೋದರರ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ತಾಯಿ ಕಣ್ಣೆದುರೇ ಕಿರಿಯ ಸಹೋದರ ಅಣ್ಣನ ಮೇಲೆ ಕಲ್ಲಿನಿಂದ ಹಲ್ಲೆ ನಡೆಸಿದ್ದು, ಗಂಭೀರವಾಗಿ ಗಾಯಗೊಂಡ ಅಣ್ಣ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಮೃತರನ್ನು ಸಂತೋಷ ಸವಣೂರು (31) ಎಂದು ಗುರುತಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆತನ ಕಿರಿಯ ಸಹೋದರ ಕುಮಾರ ಸವಣೂರುನನ್ನು ಪೊಲೀಸರು ಬಂಧಿಸಿದ್ದಾರೆ.

ಒಂದು ಎಕರೆ ಜಮೀನು ಸಹೋದರರ ನಡುವೆ ತಂದಿತ್ತು ವೈಮನಸ್ಸು

ಸಂತೋಷ ಮತ್ತು ಕುಮಾರ ಒಂದೇ ತಾಯಿಯ ಮಕ್ಕಳು. ಆದರೆ ಕುಟುಂಬಕ್ಕೆ ಸಂಬಂಧಿಸಿದ ಒಂದು ಎಕರೆ ಜಮೀನು ಇಬ್ಬರ ನಡುವಿನ ಮನಸ್ತಾಪಕ್ಕೆ ಕಾರಣವಾಗಿತ್ತು ಎನ್ನಲಾಗಿದೆ. ಮೃತನ ಸೋದರಮಾವ ತನ್ನ ಅಕ್ಕ ಹಾಗೂ ಆಕೆಯ ಮಕ್ಕಳಿಗಾಗಿ ಜಮೀನು ನೀಡಿದ್ದರು. ತಾಯಿಯನ್ನು ಯಾರು ನೋಡಿಕೊಳ್ಳುತ್ತಾರೋ ಅವರಿಗೆ ಜಮೀನು ಸೇರುತ್ತದೆ ಎಂದು ಹೇಳಿದ್ದರೆನ್ನಲಾಗಿದೆ.

ಈ ಜಮೀನಿನ ವಿಚಾರವಾಗಿ ಸಹೋದರರ ನಡುವೆ ಆಗಾಗ್ಗೆ ಗಲಾಟೆ ನಡೆಯುತ್ತಿತ್ತು. ಕುಮಾರ ಹೊರಗಡೆ ಕೂಲಿ ಕೆಲಸ ಮಾಡುತ್ತಿದ್ದರೆ, ಸಂತೋಷ ಗ್ರಾಮದಲ್ಲೇ ಕೆಲಸ ಮಾಡಿಕೊಂಡು ಜಮೀನಿನ ನಿರ್ವಹಣೆಯನ್ನೂ ನೋಡಿಕೊಳ್ಳುತ್ತಿದ್ದ ಎಂದು ತಿಳಿದುಬಂದಿದೆ.

ಮದ್ಯ ಸೇವಿಸಿ ಮನೆಗೆ ಬಂದ ಬಳಿಕ ಗಲಾಟೆ

ಘಟನೆ ನಡೆದ ದಿನ ದೂರದ ಊರಿನಿಂದ ಸಂತೋಷ ಮನೆಗೆ ಬಂದಿದ್ದ. ಬಳಿಕ ಇಬ್ಬರು ಸಹೋದರರು ಸಮೀಪದ ಬಾರ್‌ಗೆ ತೆರಳಿ ಮದ್ಯ ಸೇವಿಸಿ ಮನೆಗೆ ವಾಪಸ್ ಬಂದಿದ್ದರು ಎನ್ನಲಾಗಿದೆ.

ಮನೆಗೆ ಬಂದ ಬಳಿಕ ಸಂತೋಷ ತಾಯಿಯ ಕೈಯಿಂದ ಊಟ ಮಾಡಿ ಮನೆಯ ಕಟ್ಟೆಯ ಮೇಲೆ ಮಲಗಿದ್ದ. ಈ ವೇಳೆ ಕುಮಾರ ಮತ್ತೆ ಜಮೀನು ವಿಚಾರ ಪ್ರಸ್ತಾಪಿಸಿ ಅಣ್ಣನೊಂದಿಗೆ ಜಗಳ ಆರಂಭಿಸಿದ್ದಾನೆ ಎನ್ನಲಾಗಿದೆ.

ತಾಯಿ ಇಬ್ಬರೂ ಜಗಳ ಮಾಡಬಾರದು ಎಂದು ಮನವಿ ಮಾಡುತ್ತಿದ್ದರೂ ಪರಿಸ್ಥಿತಿ ಕೈಮೀರಿದೆ. ಆಕ್ರೋಶಗೊಂಡ ಕುಮಾರ ಮನೆಯ ಅಂಗಳದಲ್ಲಿದ್ದ ಕಲ್ಲನ್ನು ಎತ್ತಿಕೊಂಡು ಮಲಗಿದ್ದ ಸಂತೋಷನ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ.

ತಾಯಿ ಕಣ್ಣೆದುರೇ ಮಗನ ಸಾವು

ಕಲ್ಲಿನ ಹೊಡೆತದಿಂದ ತೀವ್ರವಾಗಿ ಗಾಯಗೊಂಡ ಸಂತೋಷ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಒಂದೆಡೆ ಮಗನನ್ನು ಕಳೆದುಕೊಂಡ ತಾಯಿ ಆಘಾತದಲ್ಲಿದ್ದರೆ, ಮತ್ತೊಂದೆಡೆ ಅಣ್ಣನ ಸಾವಿಗೆ ಕಾರಣನಾದ ಆರೋಪದಲ್ಲಿ ಮತ್ತೊಬ್ಬ ಮಗ ಜೈಲು ಪಾಲಾಗಿದ್ದಾನೆ.

ಘಟನೆಯ ಕುರಿತು ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದು, ಆರೋಪಿಯನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಜಮೀನು ವಿವಾದವೇ ಕೊಲೆಗೆ ಪ್ರಮುಖ ಕಾರಣವೇ ಎಂಬುದರ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

English Summary

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories