ರಾಮನಗರ: ಹಸು ತೊಳೆಯಲು ಹೋಗಿದ್ದ ಯುವಕ ವಿದ್ಯುತ್‌ ಶಾಕ್ ತಗುಲಿ ಸಾವು

ಮನೆಯಲ್ಲಿನ ಕೆಲಸಕ್ಕೆ ಪೋಷಕರಿಗೆ ನೆರವಾಗುತ್ತಿದ್ದ ದ್ವಿತೀಯ ಪಿಯುಸಿ ವಿದ್ಯಾರ್ಥಿ ದುರಂತ ಅಂತ್ಯ ಕಂಡಿದ್ದಾನೆ. ಮೋಟಾರ್ ಸ್ವಿಚ್ ಆಫ್ ಮಾಡುವ ವೇಳೆ ಸಂಭವಿಸಿದ ವಿದ್ಯುತ್ ಅವಘಡ ಇಡೀ ಗ್ರಾಮವನ್ನು ಕಣ್ಣೀರಿನಲ್ಲಿ ಮುಳುಗಿಸಿದೆ.

  • ವಿದ್ಯುತ್ ಆಘಾತಕ್ಕೆ 17 ವರ್ಷದ ತರುಣ್ ಸಾವು
  • ದ್ವಿತೀಯ ಪಿಯುಸಿ ಓದುತ್ತಿದ್ದ ವಿದ್ಯಾರ್ಥಿ
  • ಮಗನನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ

ರಾಮನಗರ (Ramanagara): ಇನ್ನೇನು ಓದಿ ಭವಿಷ್ಯ ರೂಪಿಸಿಕೊಳ್ಳಬೇಕಿದ್ದ ಯುವಕನ ಬದುಕು ಮನೆಯಲ್ಲಿನ ಸಣ್ಣ ಕೆಲಸವೊಂದರ ನಡುವೆ ದುರಂತವಾಗಿ ಅಂತ್ಯಗೊಂಡಿದೆ. ಹಸು ತೊಳೆದ ಬಳಿಕ ನೀರಿನ ಮೋಟಾರ್ ನಿಲ್ಲಿಸಲು ಹೋದ ದ್ವಿತೀಯ ಪಿಯುಸಿ ವಿದ್ಯಾರ್ಥಿ ವಿದ್ಯುತ್ ಪ್ರವಹಿಸಿ ಮೃತಪಟ್ಟಿರುವ ಘಟನೆ ರಾಮನಗರ ತಾಲೂಕಿನ ಗದಗಯ್ಯನದೊಡ್ಡಿ ಗ್ರಾಮದಲ್ಲಿ ನಡೆದಿದೆ.

ಮೃತನನ್ನು ಗ್ರಾಮದ ನಿವಾಸಿ ತರುಣ್ (17) ಎಂದು ಗುರುತಿಸಲಾಗಿದೆ. ಎಂದಿನಂತೆ ಮನೆಯ ಕೆಲಸದಲ್ಲಿ ತೊಡಗಿದ್ದ ತರುಣ್, ಎಲೆಕ್ಟ್ರಿಕ್ ಮೋಟಾರ್ (Electric Motor) ಆನ್ ಮಾಡಿ ಹಸುವನ್ನು ತೊಳೆಯುತ್ತಿದ್ದ. ಕೆಲಸ ಮುಗಿದ ಬಳಿಕ ಮೋಟಾರ್ ಬಂದ್ ಮಾಡಲು ಸ್ವಿಚ್ ಬಳಿ ತೆರಳಿದ್ದಾನೆ.

ಈ ಸಂದರ್ಭದಲ್ಲಿ ಆಕಸ್ಮಿಕವಾಗಿ ವಿದ್ಯುತ್ ಪ್ರವಹಿಸಿದ್ದು, ತೀವ್ರ ವಿದ್ಯುತ್ ಆಘಾತಕ್ಕೆ (Electric Shock) ಒಳಗಾದ ತರುಣ್ ಸ್ಥಳದಲ್ಲೇ ಕುಸಿದುಬಿದ್ದಿದ್ದಾನೆ. ವಿದ್ಯುತ್ ಶಾಕ್‌ನಿಂದ ಆತನನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಮನೆಯವರ ಪಾಲಿಗೆ ಆಧಾರವಾಗಬೇಕಿದ್ದ ಮಗನನ್ನು ಕಳೆದುಕೊಂಡ ಕುಟುಂಬಕ್ಕೆ ಬರಸಿಡಿಲು ಬಡಿದಂತಾಗಿದೆ.

ತರುಣ್ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಗ್ರಾಮದಲ್ಲಿ ದುಃಖದ ವಾತಾವರಣ ನಿರ್ಮಾಣವಾಗಿದೆ. ಮಗನನ್ನು ಕಳೆದುಕೊಂಡ ಪೋಷಕರ ಗೋಳಾಟ ಮುಗಿಲು ಮುಟ್ಟಿದ್ದು, ಸಂಬಂಧಿಕರು ಹಾಗೂ ಗ್ರಾಮಸ್ಥರ ಕಣ್ಣಾಲಿಗಳು ತೇವಗೊಂಡಿವೆ.

ಈ ಘಟನೆ ಸಂಬಂಧ ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

English Summary▼

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories