ಗೃಹಲಕ್ಷ್ಮಿ ಯೋಜನೆ ನಂತರ ಅನ್ನಭಾಗ್ಯ ಹಣ ಬಾಕಿ ಆರೋಪ; 657 ಕೋಟಿ ಏನಾಯ್ತು!
ಗೃಹಲಕ್ಷ್ಮಿಯ ನಂತರ ಅನ್ನಭಾಗ್ಯ ಹಣವೂ ಬಾಕಿ ಉಳಿದಿದೆ ಎಂಬ ಆರೋಪ ವಿಧಾನಸಭೆಯಲ್ಲಿ ಕೇಳಿಬಂದಿದ್ದು, 2025 ಜನವರಿಯ ₹657 ಕೋಟಿ ಜಮೆ ಆಗಿಲ್ಲವೆಂದು ಬಿಜೆಪಿ ಶಾಸಕ ಮಹೇಶ್ ಟೆಂಗಿನಕಾಯಿ ಸರ್ಕಾರವನ್ನು ಪ್ರಶ್ನಿಸಿದ್ದಾರೆ.

- ಅನ್ನಭಾಗ್ಯ ಹಣ ಬಾಕಿ ಕುರಿತು ಸದನದಲ್ಲಿ ಪ್ರಶ್ನೆ
- 1.27 ಕೋಟಿ ಪಡಿತರದಾರರಿಗೆ 657 ಕೋಟಿ ಜಮೆ ಆಗಿಲ್ಲ
- ಜನವರಿಯಲ್ಲಿ ಹಣವೂ ಇಲ್ಲ, ಅಕ್ಕಿಯೂ ಇಲ್ಲ
ಬೆಂಗಳೂರು (Bengaluru): ಗೃಹಲಕ್ಷ್ಮಿ ಯೋಜನೆಯ (Gruha Lakshmi Scheme) ಹಣ ಬಾಕಿಯ ಚರ್ಚೆ ತಣ್ಣಗಾಗುವ ಮೊದಲೇ, ಇದೀಗ ಅನ್ನಭಾಗ್ಯ ಯೋಜನೆಯ (Annabhagya Yojane) ಹಣವೂ ಫಲಾನುಭವಿಗಳ ಖಾತೆಗೆ ಜಮೆ ಆಗಿಲ್ಲ ಎಂಬ ಗಂಭೀರ ಆರೋಪ ವಿಧಾನಸಭೆಯಲ್ಲಿ ಕೇಳಿಬಂದಿದೆ.
ಬಿಜೆಪಿ ಶಾಸಕ ಮಹೇಶ್ ಟೆಂಗಿನಕಾಯಿ ಅವರು ಸರ್ಕಾರದ ಗಮನ ಸೆಳೆದು, 2025ರ ಜನವರಿ ತಿಂಗಳ ಹಣ ಇನ್ನೂ ಪಾವತಿಯಾಗಿಲ್ಲ ಎಂದು ಪ್ರಶ್ನೆ ಎತ್ತಿದರು.
ಟೆಂಗಿನಕಾಯಿ ಅವರ ಪ್ರಕಾರ, ರಾಜ್ಯದ 1.27 ಕೋಟಿ ಪಡಿತರದಾರರಿಗೆ ಸುಮಾರು ₹657 ಕೋಟಿ ಮೊತ್ತ ಜಮೆ ಆಗಬೇಕಿತ್ತು. ಒಂದು ವರ್ಷ ಕಳೆದರೂ ಹಣ ಜಮೆ ಆಗಿಲ್ಲ ಎಂಬುದೇ ಅವರ ಪ್ರಮುಖ ಆಕ್ಷೇಪ. ಇದರಿಂದ ಅನ್ನಭಾಗ್ಯ ಫಲಾನುಭವಿಗಳಲ್ಲಿ ಗೊಂದಲ ಮತ್ತು ಅಸಮಾಧಾನ ಹೆಚ್ಚಾಗಿದೆ ಎಂದು ಅವರು ಸದನದಲ್ಲಿ ಉಲ್ಲೇಖಿಸಿದರು.
ಸಚಿವರ ಸ್ಪಷ್ಟನೆ, ಮತ್ತೆ ಪ್ರಶ್ನೆ
ಈ ಆರೋಪಕ್ಕೆ ಆಹಾರ ಸಚಿವ ಮುನಿಯಪ್ಪ ಉತ್ತರಿಸಿ, ಅನ್ನಭಾಗ್ಯ ಆರಂಭದ ಹಂತದಲ್ಲಿ ಕೇಂದ್ರ ಸರ್ಕಾರ ಅಕ್ಕಿ ಪೂರೈಕೆ ಮಾಡದ ಕಾರಣ 5 ಕೆಜಿ ಅಕ್ಕಿ ಬದಲು ಪ್ರತಿ ಫಲಾನುಭವಿಗೆ ₹170ನ್ನು ಡಿಬಿಟಿ ಮೂಲಕ ನೀಡಲಾಗಿದೆ ಎಂದು ವಿವರಿಸಿದರು. 2023ರ ಜುಲೈಯಿಂದ 2024–25ರ ಅವಧಿವರೆಗೆ ಹಣ ಪಾವತಿ ಮಾಡಿದ್ದೇವೆ; ನಮ್ಮಿಂದ ಯಾವುದೇ ವ್ಯತ್ಯಾಸವಾಗಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಆದರೆ ಇದಕ್ಕೆ ಟೆಂಗಿನಕಾಯಿ ತಕ್ಷಣ ಪ್ರತಿಕ್ರಿಯಿಸಿ, ಅಕ್ಕಿ ಪೂರೈಕೆ ಫೆಬ್ರವರಿ 2025ರಿಂದ ಆರಂಭವಾದರೂ ಜನವರಿ ತಿಂಗಳ ಹಣವನ್ನು ಪಾವತಿಸಬೇಕಿತ್ತು ಎಂದು ಪಟ್ಟು ಹಿಡಿದರು. “ಜನವರಿಗೆ ಹಣ ಕೊಡ್ತೀರಾ? ಇಲ್ಲ ಅಕ್ಕಿ ಕೊಡ್ತೀರಾ?” ಎಂದು ನೇರ ಪ್ರಶ್ನೆ ಮಾಡಿದರು.
ಮತ್ತೊಮ್ಮೆ ಉತ್ತರಿಸಿದ ಸಚಿವ ಮುನಿಯಪ್ಪ, ಜನವರಿಯಲ್ಲಿ ಹಣ ಪಾವತಿಗೆ ಅವಕಾಶವಾಗಲಿಲ್ಲ ಎಂದು ಒಪ್ಪಿಕೊಂಡರು. ಕೇಂದ್ರ ಸರ್ಕಾರ ಸಮಯಕ್ಕೆ ಸರಿಯಾಗಿ ಅಕ್ಕಿ ನೀಡದ ಕಾರಣ ಫೆಬ್ರವರಿಗೆ ಅಕ್ಕಿ ನೀಡಲಾಗಿದೆ ಎಂದು ತಿಳಿಸಿದರು. ಇದರಿಂದ 2025ರ ಜನವರಿಯಲ್ಲಿ ಹಣವೂ ಇಲ್ಲ, ಅಕ್ಕಿಯೂ ಇಲ್ಲ ಎಂಬ ಸ್ಥಿತಿ ಉಂಟಾಗಿದೆ ಎಂಬುದು ಪರೋಕ್ಷವಾಗಿ ಒಪ್ಪಿಗೆಯಾದಂತಾಯಿತು.



