ಚಳಿ ಹೊಡೆತಕ್ಕೆ ಉತ್ತರ ಕರ್ನಾಟಕ ತತ್ತರ, ಇನ್ನೂ ಒಂದು ತಿಂಗಳು ಮುಂದುವರೆಯಲಿದೆ ಚಳಿ ಅಬ್ಬರ
ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ತಾಪಮಾನ ಗಣನೀಯವಾಗಿ ಇಳಿಕೆಯಾಗಿದ್ದು, ಬೆಳಗಿನ ಹೊತ್ತು ದಟ್ಟವಾದ ಮಂಜು ಆವರಿಸಿದೆ. ಚಳಿ ತೀವ್ರತೆಯಿಂದ ಜನಜೀವನ, ಸಂಚಾರ ಹಾಗೂ ಆರೋಗ್ಯದ ಮೇಲೆ ಪ್ರಭಾವ ಬೀರುತ್ತಿದೆ.
- ಉತ್ತರ ಕರ್ನಾಟಕದಲ್ಲಿ ತೀವ್ರ ಚಳಿ, ತಾಪಮಾನ ಕುಸಿತ
- ಬೆಳಗ್ಗಿನ ಸಮಯದಲ್ಲಿ ಮಂಜು ,ಸಂಚಾರಕ್ಕೆ ಅಡಚಣೆ
- ಚಳಿಯಿಂದ ಆರೋಗ್ಯ ಸಮಸ್ಯೆಗಳು ಹೆಚ್ಚಳ
Karnataka Weather Update: ಸಾಮಾನ್ಯವಾಗಿ ಬೇಸಿಗೆಯಲ್ಲಿ 45 ಡಿಗ್ರಿಗೂ ಮೀರಿಸುವ ಉತ್ತರ ಕರ್ನಾಟಕ ಪ್ರದೇಶದಲ್ಲಿ, ಈ ಬಾರಿ ಚಳಿಗಾಲ (Cold Wave) ಅಸಾಮಾನ್ಯವಾಗಿ ತೀವ್ರವಾಗಿದೆ. ಕಳೆದ ಎರಡು ವಾರಗಳಿಂದ ತಾಪಮಾನ ನಿರಂತರವಾಗಿ ಇಳಿಮುಖವಾಗಿದ್ದು, ಬೆಳಗ್ಗೆ 9 ಗಂಟೆಯಾದರೂ ಜನರು ಮನೆಯಿಂದ ಹೊರಬರಲು ಹಿಂಜರಿಯುತ್ತಿದ್ದಾರೆ. ಚಳಿ ತೀವ್ರತೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದು ಜನರಲ್ಲಿ ಆತಂಕ ಹುಟ್ಟಿಸಿದೆ.
ಮಂಜಿನಿಂದ ಸಂಚಾರಕ್ಕೆ ಸಂಕಷ್ಟ
ಬೆಳಗಿನ 5 ರಿಂದ 8 ಗಂಟೆಯವರೆಗೆ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ದಟ್ಟವಾದ ಮಂಜು (Fog) ಆವರಿಸುತ್ತಿದೆ. ಇದರಿಂದ ಎದುರಿಗೆ ಬರುತ್ತಿರುವ ವಾಹನಗಳು ಸ್ಪಷ್ಟವಾಗಿ ಕಾಣದೆ ಚಾಲಕರು ಭಯಭೀತರಾಗಿದ್ದಾರೆ.
ವಿಶೇಷವಾಗಿ ನಗರದ ಹೊರವಲಯಗಳು ಹಾಗೂ ಹೆದ್ದಾರಿಗಳಲ್ಲಿ ಸಂಚಾರ ಅಪಾಯಕಾರಿಯಾಗುತ್ತಿದೆ. ಅಗತ್ಯವಿದ್ದಾಗ ಮಾತ್ರ ವಾಹನ ಬಳಸುವಂತೆ ಹಾಗೂ ನಿಧಾನಗತಿಯಲ್ಲಿ ಚಾಲನೆ ಮಾಡುವಂತೆ ಪೊಲೀಸರು ಹಾಗೂ ಅಧಿಕಾರಿಗಳು ಸಲಹೆ ನೀಡುತ್ತಿದ್ದಾರೆ.
ರೈತರ ಸಮಸ್ಯೆಗಳು ಹೆಚ್ಚಳ
ಗ್ರಾಮೀಣ ಪ್ರದೇಶಗಳಲ್ಲಿ ಚಳಿ ರೈತರನ್ನು ಹೆಚ್ಚು ಕಾಡುತ್ತಿದೆ. ರಾತ್ರಿಯ ವೇಳೆ ವಿದ್ಯುತ್ ಪೂರೈಕೆಯಾಗುತ್ತಿರುವುದರಿಂದ, ಹಿಮಚಳಿಯ ನಡುವೆಯೇ ರೈತರು ಹೊಲಗಳಿಗೆ ತೆರಳಿ ನೀರಾವರಿ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಕನಿಷ್ಠ ಚಳಿಗಾಲ ಮುಗಿಯುವವರೆಗೆ ಹಗಲು ಸಮಯದಲ್ಲಿ ವಿದ್ಯುತ್ ನೀಡಬೇಕೆಂದು ರೈತರು ಆಗ್ರಹಿಸಿದ್ದಾರೆ.
ಆಸ್ಪತ್ರೆಗಳಲ್ಲಿ ರೋಗಿಗಳ ಸಂಖ್ಯೆ ಏರಿಕೆ
ಚಳಿ ಪರಿಣಾಮವಾಗಿ ಜ್ವರ, ನಗಡಿ, ಕೆಮ್ಮು ಸೇರಿದಂತೆ ಋತುಮಾನ ಸಂಬಂಧಿತ ಕಾಯಿಲೆಗಳು (Winter Health Care) ಹೆಚ್ಚಾಗಿವೆ. ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ರೋಗಿಗಳ ಸಂಖ್ಯೆಯೂ ಏರಿಕೆಯಾಗುತ್ತಿದೆ. ಮಕ್ಕಳ ಹಾಗೂ ವೃದ್ಧರ ಆರೋಗ್ಯದ ಬಗ್ಗೆ ಹೆಚ್ಚಿನ ಎಚ್ಚರಿಕೆ ವಹಿಸುವಂತೆ ವೈದ್ಯರು ಸೂಚಿಸಿದ್ದಾರೆ.
ಇನ್ನೂ ತಿಂಗಳಷ್ಟು ಇದೇ ವಾತಾವರಣ
ಹವಾಮಾನ ಇಲಾಖೆ ಮುನ್ಸೂಚನೆಯ ಪ್ರಕಾರ, ಜನವರಿ ಅಂತ್ಯವರೆಗೂ ಇದೇ ರೀತಿಯ ಚಳಿ ಮುಂದುವರಿಯುವ ಸಾಧ್ಯತೆ ಇದೆ. ಈ ಹಿನ್ನೆಲೆ ಜನರು ಮಂದ ಬಟ್ಟೆ ಧರಿಸುವುದು, ಬಿಸಿ ನೀರು ಸೇವಿಸುವುದು ಮತ್ತು ಬೆಳಗಿನ ಹೊತ್ತಿನಲ್ಲಿ ಅನಗತ್ಯವಾಗಿ ಹೊರಗೆ ಹೋಗುವುದನ್ನು ತಪ್ಪಿಸುವಂತೆ ತಜ್ಞರು ಸಲಹೆ ನೀಡಿದ್ದಾರೆ.






